ಯಶಸ್ವಿ ಜೈಸ್ವಾಲ್​ ಸಂಗ್ರಹ ಚಿತ್ರ
ಕ್ರೀಡೆ

ಟೆಸ್ಟ್​ ಸರಣಿಗೆ ಮುನ್ನ ಫಾರ್ಮ್​ಗೆ ಮರಳಿದ ಜೈಸ್ವಾಲ್​; ಡ್ರಾ ಸಾಧಿಸಿದ ಭಾರತ ಎ

ಸರಣಿಯ 3ನೇ ಹಾಗೂ ಕೊನೇ ಪಂದ್ಯ ನ.7ರಿಂದ ಲಿಂಕಾನ್​ನಲ್ಲಿ ನಡೆಯಲಿದೆ

ಕೆಸ್ಟ್​ಚರ್ಚ್​: ಟೆಸ್ಟ್​ ಸರಣಿಗೆ ಮುನ್ನ ಫಾಮ್​ರ್ಗೆ ಮರಳಿದ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (155*ರನ್​, 162 ಎಸೆತ, 15 ಬೌಂಡರಿ, 5 ಸಿಕ್ಸರ್​) ಮತ್ತು ವಿದರ್ಭ ಬ್ಯಾಟರ್​ ಯಶ್​ ರಾಥೋಡ್​ (100*ರನ್​, 122 ಎಸೆತ, 9 ಬೌಂಡರಿ) ಬಿರುಸಿನ ಶತಕದ ನೆರವಿನಿಂದ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್​ ಎ ವಿರುದ್ಧದ 2ನೇ ಚತುರ್ದಿನ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಸರಣಿಯ 3ನೇ ಹಾಗೂ ಕೊನೇ ಪಂದ್ಯ ನ.7ರಿಂದ ಲಿಂಕಾನ್​ನಲ್ಲಿ ನಡೆಯಲಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ 4ನೇ ಹಾಗೂ ಅಂತಿಮ ದಿನದಾಟ ತಡವಾಗಿ ಆರಂಭಗೊಂಡಿತು. ಭೋಜನ ವಿರಾಮದ ಬಳಿಕ ಬ್ಯಾಟಿಂಗ್​ಗೆ ಇಳಿದ ಭಾರತ ವಿಕೆಟ್​ ನಷ್ಟವಿಲ್ಲದೆ 32 ರನ್​ಗಳಿಂದ 2ನೇ ಇನಿಂಗ್ಸ್​ ಮುಂದುವರಿಸಿತು. ದಿನದ ಮೊದಲ 2 ಓವರ್​ಗಳಲ್ಲೇ ಸಾಯಿ ಸುದರ್ಶನ್​ (11), ಕನ್ನಡಿಗ ದೇವದತ್​ ಪಡಿಕ್ಕಲ್​ (0) ಔಟಾದರು. ಆಗ ಜತೆಗೂಡಿದ ಜೈಸ್ವಾಲ್​&ಯಶ್​ ರಾಥೋಡ್​ ಜೋಡಿ ಮುರಿಯದ 3ನೇ ವಿಕೆಟ್​ಗೆ 245 ಎಸೆತಗಳಲ್ಲಿ 247 ರನ್​ ಸೇರಿಸಿ ಕಿವೀಸ್​ ಬೌಲರ್​ಗಳನ್ನು ಕಾಡಿದರು. ಇದರಿಂದ, ಮೊದಲ ಇನಿಂಗ್ಸ್​ನಲ್ಲಿ 78 ರನ್​ ಹಿನ್ನಡೆ ಕಂಡಿದ್ದ ಭಾರತಕ್ಕೆ ಡ್ರಾ ಸಾಧಿಸಲು ನೆರವಾದರು. ಸರಣಿಯ ಮೊದಲ ಪಂದ್ಯದಲ್ಲಿ ಮಂದಬೆಳಕಿನ ಅಡಚಣೆಯಿಂದಾಗಿ ಭಾರತ ಗೆಲುವಿನಿಂದ ವಂಚಿತವಾಗಿತ್ತು.

ಭಾರತ ಎ: 346 ಮತ್ತು 52.4 ಓವರ್​ಗಳಲ್ಲಿ 2 ವಿಕೆಟ್​ಗೆ 282 (ಜೈಸ್ವಾಲ್​ 155*, ಸುದರ್ಶನ್​ 11, ಪಡಿಕ್ಕಲ್​ 0, ಯಶ್​ ರಾಥೋಡ್​ 100*, ರಾಂಡೆಲ್​ 62ಕ್ಕೆ 1, ಮೆಕ್​ಕೇ 35ಕ್ಕೆ 1), ನ್ಯೂಜಿಲೆಂಡ್​ ಎ: 424.