ಪರ್ತ್: ನ್ಯೂಜಿಲೆಂಡ್ ಎದುರು ತವರಿನಲ್ಲೇ ಮುಗ್ಗರಿಸಿದ್ದ ಭಾರತ ತಂಡವೀಗ ಕಾಂಗರೂ ನೆಲದಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಪುಟಿದೆದ್ದಿದ್ದು, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಪುನರಾಗಮನ ಕಾಣುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್, 297 ಎಸೆತ, 15 ಬೌಂಡರಿ, 3 ಸಿಕ್ಸರ್) ಭರ್ಜರಿ ಶತಕದಾಟ ಹಾಗೂ ಅನುಭವಿ ವಿರಾಟ್ ಕೊಹ್ಲಿ (100* ರನ್, 143 ಎಸೆತ, 8 ಬೌಂಡರಿ, 2 ಸಿಕ್ಸರ್) ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ 30ನೇ ಶತಕದ ನೆರವಿನಿಂದ ಪ್ರವಾಸಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಬೃಹತ್ ಗುರಿ ನೀಡಿದೆ.
ಸತತ ಎರಡು ದಿನ ಮೈದಾನದಲ್ಲಿ ಕಳೆದ ಬಳಲಿಕೆಯ ಬಳಿಕ ದಾಖಲೆಯ ಮೊತ್ತದ ಚೇಸಿಂಗ್‌ಗೆ ಇಳಿದಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡಿದ್ದು, ಭಾರತದ ಗೆಲುವಿಗೆ 7 ವಿಕೆಟ್ ಮಾತ್ರ ಬಾಕಿ ಉಳಿದಿವೆ. ಪ್ಯಾಟ್ ಕಮ್ಮಿನ್ಸ್ ಪಡೆ ಚೇಸಿಂಗ್‌ನಲ್ಲಿ ಈಗಾಗಲೆ 3 ವಿಕೆಟ್ ಕಳೆದುಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ ಬಳಗ ಪಂದ್ಯದ 4ನೇ ದಿನವೇ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪ್ರವೇಶದ ಆಸೆಗೆ ಮರುಜೀವ ತುಂಬಿಸಿಕೊಳ್ಳುವ ತವಕದಲ್ಲಿದೆ.
5: ವಿರಾಟ್ ಕೊಹ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 2 ಸಾವಿರ ರನ್ ಪೂರೈಸಿದ 5ನೇ ಭಾರತೀಯ. ತೆಂಡುಲ್ಕರ್ (3,262), ವಿವಿಎಸ್ ಲಕ್ಷ್ಮಣ್ (2,434), ದ್ರಾವಿಡ್ (2,143), ಪೂಜಾರ (2,033) ಮೊದಲ ನಾಲ್ವರು.
3. ಯಶಸ್ವಿ ಜೈಸ್ವಾಲ್ 2001ರ ಬಳಿಕ ಆಸ್ಟ್ರೇಲಿಯಾ ಎದುರು ಸಿಕ್ಸರ್ ಮೂಲಕ ಶತಕ ಪೂರೈಸಿದ 3ನೇ ಬ್ಯಾಟರ್. ರಾಹುಲ್ ದ್ರಾವಿಡ್ (2003), ಕ್ರಿಸ್‌ಗೇಲ್ (2009) ಮೊದಲಿಬ್ಬರು.
201: ರಾಹುಲ್ ಹಾಗೂ ಜೈಸ್ವಾಲ್ ಆಸೀಸ್ ನೆಲದಲ್ಲಿ ಗರಿಷ್ಠ ರನ್‌ಗಳಿಸಿದ ಭಾರತೀಯ ಆರಂಭಿಕ ಜೋಡಿ. ಕೆ.ಶ್ರೀಕಾಂತ್-ಸುನೀಲ್ ಗಾವಸ್ಕರ್ (191) ಹಿಂದಿನ ಗರಿಷ್ಠ.
30. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ 30ನೇ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಿಸಿದ 81ನೇ ಶತಕ ಇದಾಗಿದೆ.
2. ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ ಮೊದಲ 4 ಶತಕಗಳಲ್ಲಿ 150 ಪ್ಲಸ್ ರನ್‌ಗಳಿಸಿ, ದ.ಆಫ್ರಿಕಾದ ಗ್ರೇಮ್ ಸ್ಮಿತ್ ದಾಖಲೆ ಸರಿಗಟ್ಟಿದರು.
3. ಮೊದಲ ಆಸೀಸ್ ಪ್ರವಾಸದಲ್ಲಿ ಚೊಚ್ಚಲ ಪಂದ್ಯದಲ್ಲಿ ಟೆಸ್ಟ್ ಶತಕ ಸಿಡಿಸಿದ 3ನೇ ಭಾರತೀಯ ಯಶಸ್ವಿ ಜೈಸ್ವಾಲ್. ಎಂಎಲ್ ಜೈಸಿಂಹ (1967-68), ಗಾವಸ್ಕರ್ (1977-78) ಹಿಂದಿನ ಸಾಧಕರು.
4. ಯಶಸ್ವಿ ಜೈಸ್ವಾಲ್ ಒಂದೇ ಪಂದ್ಯದಲ್ಲಿ ಡಕೌಟ್ ಹಾಗೂ 150 ಪ್ಲಸ್ ರನ್‌ಗಳಿಸಿದ 4ನೇ ಭಾರತೀಯ ಬ್ಯಾಟರ್. ಮಾಧವ್ ಅಪ್ಟೆ (1953), ನಯನ್ ಮೊಂಗಿಯಾ (1996), ರ್ಸ್ರಾಜ್ ಖಾನ್ (2024) ಮೊದಲ ಮೂವರು.
ಪರ್ತ್ ತಲುಪಿದ ರೋಹಿತ್ ಶರ್ಮ
ಎರಡನೇ ಮಗು ಜನನದ ಕಾರಣ ರಾಷ್ಟ್ರೀಯ ತಂಡದ ಕರ್ತವ್ಯದಿಂದ ಬ್ರೇಕ್ ಪಡೆದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಭಾನುವಾರ ಮಧ್ಯಾಹ್ನ ಪರ್ತ್ ತಲುಪಿದ್ದಾರೆ. ಪರ್ತ್ ಟೆಸ್ಟ್‌ಗೆ ಗೈರಾಗಿರುವ ರೋಹಿತ್, ನ.30, ಡಿ.1 ರಂದು ಆಸೀಸ್ ಪ್ರಧಾನ ಮಂತ್ರಿ ಇಲೆವನ್ ವಿರುದ್ಧದ ಹೊನಲು ಬೆಳಕಿನ ಪಿಂಕ್‌ಬಾಲ್ ಟೆಸ್ಟ್ ಅಭ್ಯಾಸದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.