ಕ್ರೀಡೆ

ಜೈಪುರದಲ್ಲಿ ಸಿದ್ಧವಾಗ್ತಿದೆ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಶೀಘ್ರವೇ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣವಾಗಲಿದೆ. 75 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಂ ಇದಾಗಿದ್ದು, ಈ ಕುರಿತು ರೂಪುರೇಷೆಗಳು ಸಿದ್ಧಗೊಳ್ಳಲಿವೆ. ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಸ್ಟೇಡಿಯಂ, ಸಂಪೂರ್ಣ ಹೈಟೆಕ್​ನಿಂದ ಕೂಡಿದ್ದು, ವಿಶ್ವ ದರ್ಜೆ ಗ್ರೀನ್​ ಸ್ಟೇಡಿಯಂನಲ್ಲಿ ಆಧುನಿಕ ಗ್ರ್ಯಾಂಡ್​ ಪೆವಿಲಿಯನ್​, ಕಾಪೋರ್ರೇಟ್​ ಬಾಕ್ಸ್​ಗಳು ಸೇರಿದಂತೆ ಉನ್ನತ ದರ್ಜೆ ವ್ಯವಸ್ಥೆಗಳಿರುತ್ತವೆ. ಸ್ಟೇಡಿಯಂಗೆ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜಸ್ಥಾನ ಕ್ರಿಕೆಟ್​ ಸಂಸ್ಥೆ ಕಾರ್ಯದರ್ಶಿ ಮಹೇಂದ್ರ ಶರ್ಮ, ಕ್ರಿಕೆಟ್​ ಸ್ಟೇಡಿಯಂನಲ್ಲೇ ಒಳಾಂಗಣ ಹಾಗೂ ಕ್ರೀಡಾ ತರಬೇತಿ ಸೌಲಭ್ಯ ವ್ಯವಸ್ಥೆಗಳಿರುತ್ತದೆ. ಸ್ಟೇಡಿಯಂ ನಿರ್ಮಾಣಕ್ಕೆ ದೆಹಲಿ-ಜೈಪುರ ಹೈವೇಯಲ್ಲಿ ಜಾಗ ಗುರುತಿಸಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ 4 ತಿಂಗಳಲ್ಲಿ ನೂತನ ಸ್ಟೇಡಿಯಂ ಕಾಮಗಾರಿ ಆರಂಭಗೊಳ್ಳಲಿದೆ. ಐಸಿಸಿ ಮಾರ್ಗಸೂಚಿಯಂತೆ ಫ್ಲಡ್​ ಲೈಟ್ಸ್ ವ್ಯವಸ್ಥೆ, ಆಧುನಿಕ ವ್ಯವಸ್ಥೆಯ ಪ್ರೆಸ್​ ಬಾಕ್ಸ್​, ಪೆವಿಲಿಯನ್​, ಡ್ರೆಸ್ಸಿಂಗ್​ ರೂಮ್​ಗಳು ನಿರ್ಮಾಣಗೊಳ್ಳಲಿವೆ ಎಂದರು. ಸ್ಟೇಡಿಯಂನಲ್ಲೇ 4 ಸಾವಿರ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಇದಾಗಲಿದ್ದು, ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದರೆ, ಆಸ್ಟ್ರೆಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ 1.02 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದುವ ಮೂಲಕ ಎರಡು ಸ್ಥಾನದಲ್ಲಿವೆ. ಜತೆಗೆ ಎರಡು ಪ್ರತ್ಯೇಕ ಅಭ್ಯಾಸದ ಮೈದಾನಗಳನ್ನು ನಿರ್ಮಿಸಲಾಗುತ್ತಿದ್ದು,30 ಪ್ರಾಕ್ಟಿಸ್​ ನೆಟ್ಸ್​, 2 ರೆಸ್ಟೋರೆಂಟ್​ಗಳು, 250 ಮಂದಿ ಕುರುವಂಥ ಮಿಡಿಯಾ ಬಾಕ್ಸ್​ ಇರಲಿದೆ. ಎರಡು ಹಂತದಲ್ಲಿ ಸ್ಟೇಡಿಯಂ ಕಾರ್ಯ ಪೂರ್ಣಗೊಳ್ಳಲಿದೆ. ಬಿಸಿಸಿಐಯಿಂದ 100 ಕೋಟಿ ರೂಪಾಯಿ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತಿದೆ ಎಂದರು. ಎಲ್​ಎಲ್​ಬಿ ಹಾಗೂ ದೆಹಲಿ ಮೂಲದ ಡಿಸೈನ್​ ಕಂಪನಿ ಜಿಆರ್​ಎಎಸ್​ ಸ್ಟೇಡಿಯಂ ನಿರ್ಮಾಣದ ಜವಾಬ್ದಾರಿ ಹೊಂದಿದೆ.