ಕ್ರೀಡೆ

ಪುಣೇರಿ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಜೈಪುರ ಪಿಂಕ್​ ಪ್ಯಾಂಥರ್ಸ್

ಜೈಪುರ: ಆತಿಥೇಯ ಹಾಲಿ ಚಾಂಪಿಯನ್​ ಜೈಪುರ ಪಿಂಕ್​ ಪ್ಯಾಂಥರ್ಸ್​ ತಂಡ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟಾನ್​ ತಂಡದ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದೆ. ಎಸ್​ಎಂಎಸ್​ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜೈಪುರ ದ್ವೀತಿಯಾರ್ಧದಲ್ಲಿ ಪುಟಿದೇಳುವುದರೊಂದಿಗೆ ಪುಣೇರಿ ಪಲ್ಟಾನ್​ ಎದುರು 36-34 ಅಂಕಗಳಿಂದ ರೋಚಕ ಗೆಲುವು ದಾಖಲಿಸಿತು.ಸೋಲಿನ ನಡುವೆಯೂ ಕನ್ನಡಿಗ ಬಿಸಿ ರಮೇಶ್​ ಮಾರ್ಗದರ್ಶನದ ಪುಣೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಮೊದಲಾರ್ಧದಲ್ಲಿ ಪಲ್ಟಾನ್ ​20-11ರಿಂದ ಮೇಲುಗೈ ಸಾಧಿಸಿತು.

ಸತತ ಜಯಗಳೊಂದಿಗೆ ಮುನ್ನುಗ್ಗುತ್ತಿದ್ದ ಪುಣೇರಿ ಟೂರ್ನಿಯಲ್ಲಿ 2ನೇ ಸೋಲಿಗೆ ಗುರಿಯಾಯಿತು. ಆದರೂ 52 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಜೈಪುರ ತಂಡದ ಪರ ಮತ್ತೊಮ್ಮೆ ಏಕಾಂಗಿ ಹೋರಾಟ ನಡೆಸಿದ ಅರ್ಜುನ್​ ದೇಶ್ವಾಲ್​ 16 ಅಂಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಅಸ್ಲಾಮ್​ 8 ಅಂಕ ಗಳಿಸಿದ್ದು ಪುಣೇರಿ ಪರ ಗರಿಷ್ಠ ಎನಿಸಿತು.

ಹಿನ್ನಡೆ ತಗ್ಗಿಸುವ ವಿಶ್ವಾಸದಲ್ಲಿದ್ವೀತಿಯಾರ್ಧ ಆರಂಭಿಸಿದ ಜೈಪುರ ತಂಡ 28 ಮತ್ತು 35 ನಿಮಿಷಗಳಲ್ಲಿಎರಡು ಬಾರಿ ಪುಣೇರಿ ಪಲ್ಟನ್​ ತಂಡವನ್ನು ಆಲೌಟ್​ ಮಾಡಿತು. ಹೀಗಾಗಿ ಪುಣೇರಿ ಆಟಗಾರರು ಒತ್ತಡಕ್ಕೆ ಸಿಲುಕಿದರು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ ಪುಣೇರಿ ವಿರುದ್ಧ ನಾಲ್ಕು ಅಂಕ ಮುನ್ನಡೆ ಕಾಯ್ದುಕೊಂಡ ಜೈಪುರ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು.