ಕ್ರೀಡೆ

ಪ್ಯಾಂಥರ್ಸ್‌ಗೆ ಮಂಡಿಯೂರಿದ ವಾರಿಯರ್ಸ್‌: ಅರ್ಜುನ್‌ ದೇಶ್ವಾಲ್‌ ಮಿಂಚಿನ ಆಟ

ಹೈದರಾಬಾದ್: ಗೆಲುವಿನ ಓಟ ಮುಂದುವರಿಸಿದ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ 11ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಅರ್ಜುನ್ ದೇಸ್ವಾಲ್ (15) ನಡೆಸಿದ 13 ಯಶಸ್ವಿ ರೈಡಿಂಗ್‌ಗಳ ನೆರವಿನಿಂದ ಜೈಪುರ ಪಿಂಕ್‌ಪ್ಯಾಂಥರ್ಸ್‌ 42-25 ಅಂಕಗಳಿಂದ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡವನ್ನು ಮಣಿಸಿತು.

ಮೊದಲಾರ್ಧದಲ್ಲಿ ಎಚ್ಚರಿಕೆಯ ಆಟವಾಡಿದ ಉಭಯ ತಂಡಗಳು ಸಮಬಲ ಪ್ರದರ್ಶಿಸಿದವು. ಮೊದಲಾರ್ಧ ಮುಕ್ತಾಯಕ್ಕೆ 13-12ರಿಂದ ಜೈಪುರ ಅಲ್ಪ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಪ್ರಬಲ ಭರ್ಜರಿ ಪ್ರದರ್ಶನ ನೀಡಿದ ಜೈಪುರ, ಬೆಂಗಾಲ್ ತಂಡವನ್ನು 2 ಬಾರಿ ಆಲೌಟ್ ಮಾಡಿ ಗೆಲುವಿನ ಓಟ ವಿಸ್ತರಿಸಿತು. ಇದರೊಂದಿಗೆ ಪೂರ್ಣ ಐದು ಅಂಕ ಕಲೆಹಾಕಿದ ಪ್ಯಾಂಥರ್ಸ್‌, ಒಟ್ಟು 11 ಗೆಲುವುಗಳೊಂದಿಗೆ 63 ಅಂಕಗಳಿಸಿ ತನ್ನ ಅಗ್ರಸ್ಥಾವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಜೈಪುರ ಪರ ಅರ್ಜುನ್‌ ದೇಶ್ವಾಲ್‌ 15 ಅಂಕ ಗಳಿಸಿ ಜಯದ ರೂವಾರಿಯೆನಿಸಿದರೆ, 9 ಅಂಕಗಳನ್ನು ಕಲೆಹಾಕಿದ ಮಣಿಂದರ್‌ ವಾರಿಯರ್ಸ್‌ ಹೋರಾಟಕ್ಕೆ ಸಾಕ್ಷಿಯಾದರು.

28ನೇ ನಿಮಿಷದಲ್ಲಿ ಮಣಿಂದರ್‌ ಸಿಂಗ್‌ ಬಳಗವನ್ನು ಆಲೌಟ್‌ ಮಾಡಿದ ಜೈಪುರ, ತನ್ನ ಮುನ್ನಡೆಯನ್ನು 5 ಅಂಕಗಳ ಅಂತರಕ್ಕೆ ಹಿಗ್ಗಿಸಿಕೊಂಡಿತು. 30 ನಿಮಿಷ ಮುಕ್ತಾಯಕ್ಕೆ 26 -19ರಲ್ಲಿ ಅಂತರ ವಿಸ್ತರಿಸಿಕೊಂಡ ಜೈಪುರ, ಮತ್ತೊಂದು ಜಯದ ಸುಳಿವು ನೀಡಿತು. ಇದಕ್ಕೆ  ಭವಾನಿ ರಾಜ್‌ಪುತ್‌ ಮತ್ತು ಲೆಫ್ಟ್‌ ಕಾರ್ನರ್‌ ಡಿಫೆಂಡರ್‌ ಅಂಕುಶ್‌ ಸಾಥ್‌ ನೀಡಿದರು. ಹಿನ್ನಡೆ ತಗ್ಗಿಸುವ ಹಾದಿಯಲ್ಲಿ ಒತ್ತಡಕ್ಕೆ ಸಿಲುಕಿದ ವಾರಿಯರ್ಸ್‌ ನಿಯಮಿತವಾಗಿ ಎದುರಾಳಿ ತಂಡಕ್ಕೆ ಅಂಕ ಬಿಟ್ಟುಕೊಟ್ಟಿತು. ಹೀಗಾಗಿ ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳಿರುವಾಗ ಜೈಪುರ ತನ್ನ ಮುನ್ನಡೆಯನ್ನು 10 ಅಂಕಗಳಿಗೆ ಹೆಚ್ಚಿಸಿಕೊಂಡಿತು (30-20). ಪಂದ್ಯದ ಕೊನೆಯ ಹಂತದಲ್ಲಿಮಿಂಚಿನ ರೇಡಿಂಗ್‌ ನಡೆಸಿದ ಅರ್ಜುನ್‌ ದೇಶ್ವಾಲ್‌ ತಂಡದ ಬೃಹತ್‌ ಗೆಲುವಿಗೆ ಕಾರಣರಾದರು. ಇದಕ್ಕೂ ಮುನ್ನ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಬೆಂಗಾಲ್‌ ವಾರಿಯರ್ಸ್‌ ತಂಡಗಳು ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ ಸಮಬಲದ ಹೋರಾಟ ಸಂಘಟಿಸಿದವು. ಆದಾಗ್ಯೂ ಕೊನೆಯ ಹಂತದಲ್ಲಿಅಲ್ಪ ಮೇಲುಗೈ ಸಾಧಿಸಿದ ಜೈಪುರ 13-12ರಲ್ಲಿಅಂತರ ಕಾಯ್ದುಕೊಂಡಿತು.

ಜನವರಿ 23ರಂದು ಯು ಮುಂಬಾ ಮತ್ತು ಪುಣೇರಿ ಪಲ್ಟನ್‌ ತಂಡಗಳು ಮುಖಾಮುಖಿಯಾಗಲಿವೆ.