ಕ್ರೀಡೆ

ಪಾಕ್​ ಆಟಗಾರರ ಎದುರು "ಜೈಶ್ರೀರಾಂ" ಘೋಷಣೆ: ಉದಯನಿಧಿ ಸ್ಟಾಲಿನ್ ಖಂಡನೆ

ಚೆನ್ನೈ: ಪಾಕಿಸ್ತಾನ ಆಟಗಾರರ ವಿರುದ್ಧ "ಜೈ ಶ್ರೀರಾಂ" ಘೋಷಣೆ ಕೂಗುವುದು ಸರಿಯಲ್ಲ. ಕ್ರಿಕೆಟ್​ ಅಭಿಮಾನಿಗಳ ಈ ವರ್ತನೆ ಖಂಡಿಸುತ್ತೇನೆ ಎಂದು ಡಿಎಂಕೆ ಹಿರಿಯ ನಾಯಕ, ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರರಿಗೆ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವುದು ಸ್ವೀಕಾರಾರ್ಹವಲ್ಲ ಎಂದು ತಮಿಳುನಾಡು ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಪಾಕಿಸ್ತಾನದ ಆಟಗಾರರು ಪಂದ್ಯದಲ್ಲಿ ಔಟಾದಾಗ ಪ್ರೇಕ್ಷಕರು 'ಜೈ ಶ್ರೀ ರಾಮ್' ಎಂದು ಬೊಬ್ಬೆ ಹೊಡೆಯುವುದನ್ನು ಉಲ್ಲೇಖಿಸಿರುವ ಅವರು, ಕ್ರೀಡಾ ಮನೋಭಾವ ರಾಷ್ಟ್ರಗಳ ನಡುವಿನ ಭಾಂದವ್ಯ ಹೆಚ್ಚಿಸುವಂತಿರಬೇಕು. ಏಕತೆಗೆ ಇದು ಪೂರಕವಾಗಬೇಕು. ದ್ವೇಷವನ್ನು ಹರಡಲು ಕ್ರೀಡೆಗಳನ್ನು ಬಳಸುವುದನ್ನು ವಿರೋಧಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ 'X'(ಎಕ್ಸ್​) ನಲ್ಲಿ ಪೋಸ್ಟ್‌ ಹಾಕಿದ್ದಾರೆ.

“ಭಾರತವು ತನ್ನ ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದಾಗ್ಯೂ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರಿಗೆ ನೀಡಿದ ಟ್ರೀಟ್​ಮೆಂಟ್​ ಸ್ವೀಕಾರಾರ್ಹವಲ್ಲ. ದೇಶಗಳ ನಡುವೆ ನಿಜವಾದ ಸಹೋದರತ್ವವನ್ನು ಬೆಳೆಸುವುದಕ್ಕೆ ಇದು ಅಡ್ಡಿಯಾಗುತ್ತದೆ ಎಂದಿದ್ದಾರೆ.

ಭಾರತ ತಂಡವು ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನಂತರ ಅಭಿಮಾನಿಗಳು ‘ವಂದೇ ಮಾತರಂ’ ಹಾಡಿದರು. ರೋಹಿತ್ ಶರ್ಮಾ ಅವರೊಂದಿಗೆ ಟಾಸ್‌ಗೆ ಹೋದಾಗ ಅಭಿಮಾನಿಗಳು ಪಾಕಿಸ್ತಾನದ ನಾಯಕ ಮತ್ತು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಬಾಬರ್ ಅಜಮ್ ವಿರುದ್ಧ ಕಿರುಚಾಡಿದರು.

ಆದಾಗ್ಯೂ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಸಹಿ ಮಾಡಿದ ಭಾರತೀಯ ಜೆರ್ಸಿಯನ್ನು ಬಾಬರ್ ಗೆ ಉಡುಗೊರೆಯಾಗಿ ನೀಡಿದ್ದು ಆಟಗಾರರ ನಡುವಿನ ಕ್ರೀಡಾಮನೋಭಾವಕ್ಕೆ ಸಾಕ್ಷಿಯಾಯಿತು.