ಕ್ರೀಡೆ

ರಿಯೋ ಒಲಿಂಪಿಕ್ಸ್​ನಲ್ಲಿ ಪದಕ ಕೈತಪ್ಪಿದರೂ ಹೃದಯ ಗೆದ್ದಿದ್ದ ತಾರೆ ದೀಪಾ ಕರ್ಮಾಕರ್​ ಜಿಮ್ನಾಸ್ಟಿಕ್ಸ್​ಗೆ ವಿದಾಯ

ನವದೆಹಲಿ: ಭಾರತ ಕಂಡ ಅತ್ಯಂತ ಯಶಸ್ವಿ ಜಿಮ್ನಾಸ್ಟ್​ ಎನಿಸಿದ ದೀಪಾ ಕರ್ಮಾಕರ್​ ಕ್ರೀಡಾ ವೃತ್ತೀಜಿವನಕ್ಕೆ ಸೋಮವಾರ ವಿದಾಯ ಘೋಷಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆದು ಸ್ವಲ್ಪದರಲ್ಲಿಯೇ ಪದಕ ವಂಚಿತರಾಗಿದ್ದರೂ ಕೋಟ್ಯಂತರ ಭಾರತೀಯ ಹೃದಯ ಗೆದ್ದಿದ್ದ ದೀಪಾ, ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ತ್ರಿಪುರದ ಅಗರ್ತಲದವರಾದ 31 ವರ್ಷದ ದೀಪಾ ಕರ್ಮಾಕರ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್​ ಎಂಬ ಹೊಂದಿದ್ದಾರೆ. ರಿಯೋದಲ್ಲಿ ಅವರು ವಾಲ್ಟ್​ ಸ್ಪರ್ಧೆಯಲ್ಲಿ ಕೇವಲ 0.15 ಅಂಕಗಳಿಂದ ಒಲಿಂಪಿಕ್ಸ್​ ಪದಕ ಗೆಲುವಿನ ಐತಿಹಾಸಿಕ ಸಾಧನೆಯಿಂದ ವಂಚಿತರಾಗಿದ್ದರು.

"ಭಾರಿ ಯೋಚನೆ ಮತ್ತು ಚಿಂತನೆಯ ಬಳಿಕ ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿರುವೆ. ಇದು ಸುಲಭ ನಿರ್ಧಾರವಲ್ಲ. ಆದರೆ ಇದುವೇ ಸರಿಯಾದ ಸಮಯ ಎಂದು ಭಾವಿಸಿರುವೆ. ಕಳೆದ ಹಲವಾರು ವರ್ಷಗಳಿಂದ ಜಿಮ್ನಾಸ್ಟಿಕ್ಸ್​ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನನ್ನ ಏಳು-ಬೀಳಿನ ನಡುವೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಕೃತಜ್ಞಳಾಗಿರುವೆ' ಎಂದು ದೀಪಾ ಕರ್ಮಾಕರ್​ ತಿಳಿಸಿದ್ದಾರೆ.

"ನಾನು ಐದು ವರ್ಷದವಳಿದ್ದಾಗ ನನ್ನ ಚಪ್ಪಟೆ ಪಾದಗಳನ್ನು ನೋಡಿ, ನಾನೆಂದೂ ಜಿಮ್ನಾಸ್ಟ್​ ಆಗಲಾರೆ ಎಂದು ಹೇಳಲಾಗಿತ್ತು. ಇದೀಗ ನನ್ನ ಸಾಧನೆಗಳನ್ನು ನೋಡಿದಾಗ, ಅತ್ಯಂತ ಗರ್ವವಾಗುತ್ತಿದೆ. ಭಾರತವನ್ನು ಪ್ರತಿನಿಧಿಸಿರುವುದು ಮತ್ತು ಪದಕ ಗೆದ್ದಿರುವುದರ ಜತೆಗೆ ರಿಯೋ ಒಲಿಂಪಿಕ್ಸ್​ನಲ್ಲಿ ಪ್ರೊಡುನೊವಾ ವಾಲ್ಟ್​ ನಿರ್ವಹಣೆ ತೋರಿರುವುದು ನನ್ನ ವೃತ್ತೀಜಿವನದ ಅತ್ಯಂತ ಸ್ಮರಣೀಯ ಕ್ಷಣಗಳಾಗಿವೆ. ನನಗೆ ಆ ದೀಪಾಳನ್ನು ನೋಡಿದಾಗ ಅಪಾರ ಖುಷಿಯಾಗುತ್ತದೆ. ಯಾಕೆಂದರೆ ಅವರು ಕನಸು ಕಾಣುವ ಧೈರ್ಯ ಮಾಡಿದ್ದಳು' ಎಂದು ದೀಪಾ ವಿದಾಯ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ನನಗೆ ತರಬೇತಿ ನೀಡಿದ ಮತ್ತು ನನ್ನ ಅತಿದೊಡ್ಡ ಶಕ್ತಿಯಾಗಿದ್ದ ಕೋಚ್​ಗಳಾದ ಬಿಶ್ವೇಶ್ವರ್​ ನಂದಿ ಸರ್​ ಮತ್ತು ಸೋಮಾ ಮೇಡಂಗೆ ಧನ್ಯವಾದ ಹೇಳುವೆ. ನನಗೆ ದೊರೆತ ಬೆಂಬಲಗಳಿಗೆ ತ್ರಿಪುರ ಸರ್ಕಾರ, ಜಿಮ್ನಾಸ್ಟಿಕ್ಸ್​ ಫೆಡರೇಷನ್​, ಭಾರತೀಯ ಕ್ರೀಡಾ ಪ್ರಾಧಿಕಾರ, ಗೋಸ್ಪೋರ್ಟ್ಸ್​ ಫೌಂಡೇಷನ್​ಗೆ ಕೃತಜ್ಞತೆ ತಿಳಿಸುವೆ. ಕೊನೆಯದಾಗಿ ನನ್ನ ಒಳ್ಳೆಯ ಮತ್ತು ಕೆಟ್ಟ ದಿನಗಳಲ್ಲಿ ಜತೆಗಿದ್ದ ಕುಟುಂಬಕ್ಕೂ ಋಣಿಯಾಗಿರುವೆ ಎಂದು ದೀಪಾ ತಿಳಿಸಿದ್ದಾರೆ.

ಜಿಮ್ನಾಸ್ಟಿಕ್ಸ್​ ಸಂಬಂಧ ಕಡಿಯಲ್ಲ

ಜಿಮ್ನಾಸ್ಟಿಕ್ಸ್​ನಿಂದ ನಾನು ನಿವೃತ್ತಿ ಹೊಂದುತ್ತಿದ್ದರೂ, ಅದರೊಂದಿಗಿನ ನನ್ನ ಸಂಬಂಧ ಕಡಿಯುವುದಿಲ್ಲ. ಮೆಂಟರ್​, ಕೋಚ್​ ರೀತಿಯಾಗಿ ನಾನು ಈ ಕ್ರೀಡೆಗೆ ಮರಳಿ ಕೊಡುಗೆ ನೀಡಲು ಬಯಸಿರುವೆ. ಈ ಮೂಲಕ ನನ್ನಂಥ ಇತರ ಹುಡುಗಿಯರಿಗೂ ಬೆಂಬಲ ನೀಡಲು ಪ್ರಯತ್ನಿಸುವೆ ಎಂದು ದೀಪಾ ತಿಳಿಸಿದ್ದಾರೆ.

ಕಾಮನ್ವೆಲ್ತ್​ನಲ್ಲಿ ಪದಕ ಸಾಧನೆ

ಗ್ಲಾಸ್ಗೋದಲ್ಲಿ ನಡೆದ 2014ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ದೀಪಾ, ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದರು. ಈ ಮೂಲಕ ಮೊದಲ ಬಾರಿ ಕ್ರೀಡಾಪ್ರೇಮಿಗಳ ಗಮನಸೆಳೆದಿದ್ದರು. 2018ರಲ್ಲಿ ಟರ್ಕಿಯ ಮೆರ್ಸಿನ್​ನಲ್ಲಿ ನಡೆದ ಆರ್ಟಿಸ್ಟಿಕ್​ ಜಿಮ್ನಾಸ್ಟಿಕ್ಸ್​ ವಿಶ್ವಕಪ್​ನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್​ ಎನಿಸಿದ್ದರು. 2014ರ ಏಷ್ಯನ್​ ಚಾಂಪಿಯನ್​ಷಿಪ್​ನಲ್ಲೂ ಚಿನ್ನ ಜಯಿಸಿದ್ದರು.

ಪ್ರೊಡುನೊವಾ ಸಾಧಕಿ

ಜಿಮ್ನಾಸ್ಟಿಕ್ಸ್​ನ ವಿಶೇಷ ಜಿಗಿದ ಪ್ರಕಾರವಾದ ಪ್ರೊಡುನೊವಾದಲ್ಲಿ ಯಶಸ್ವಿ ಲ್ಯಾಂಡಿಂಗ್​ ಕಂಡ ವಿಶ್ವದ ಐವರು ಮಹಿಳೆಯರಲ್ಲಿ ದೀಪಾ ಕೂಡ ಒಬ್ಬರಾಗಿದ್ದಾರೆ. ಇದು ವಾಲ್ಟ್​ನಲ್ಲಿ ಮಹಿಳಾ ಜಿಮ್ನಾಸ್ಟ್​ಗಳು ತೋರುವ ಅತ್ಯಂತ ಕಠಿಣವಾದ ನಿರ್ವಹಣೆಯಾಗಿದೆ. ಹ್ಯಾಂಡ್​ಸಿಂಗ್​ ಮೇಲಿನಿಂದ ಜಗಿದು ಎರಡು ಮುಂಬಾಗದ ಪಲ್ಟಿ (ಡಬಲ್​ ಸಮರ್​ಸಾಲ್ಟ್​) ಮೂಲಕ ತೋರುವ ಈ ನಿರ್ವಹಣೆ ಗಾಯಕ್ಕೊಳಗಾಗುವ ಅಪಾಯವನ್ನೂ (ವಾಲ್ಟ್​ ಆಫ್​ ಡೆತ್​) ಒಳಗೊಂಡಿದೆ. ದೀಪಾ 2014 ಮತ್ತು 2016ರಲ್ಲಿ 2 ಬಾರಿ ಇದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ.

ಹಲವು ಗೌರವ...

ದೀಪಾ 2015ರಲ್ಲಿ ಅರ್ಜುನ ಮತ್ತು 2016ರಲ್ಲಿ ಖೇಲ್​ರತ್ನ ಪ್ರಶಸ್ತಿಗಳಿಗೆ ಭಾಜರಾಗಿದ್ದು, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದಲೂ ಪುರಸತರಾಗಿದ್ದಾರೆ. ರಿಯೋದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ನಡುವೆ ಅವರಿಗೆ ಆಗ ಕೋಟ್ಯಂತರ ರೂ. ಬಹುಮಾನ ಮೊತ್ತ ಹರಿದುಬಂದಿತ್ತು.

ಗಾಯ, ಡೋಪ್​ ಹಿನ್ನಡೆ

ಗಾಯದ ಸಮಸ್ಯೆಯಿಂದಾಗಿ 2021ರ ಟೋಕಿಯೊ ಒಲಿಂಪಿಕ್ಸ್​ ಅರ್ಹತೆಯಿಂದ ವಂಚಿತರಾಗಿದ್ದ ದೀಪಾ, ಅದೇ ವರ್ಷದ ಅಕ್ಟೋಬರ್​ನಲ್ಲಿ ಉದ್ದೀಪನ ಪ್ರಕರಣದಲ್ಲಿ ಸಿಲುಕಿ 21 ತಿಂಗಳು ನಿಷೇಧಕ್ಕೂ ಒಳಗಾಗಿದ್ದರು. 2023ರ ಜುಲೈನಲ್ಲಿ ಅವರ ಮೇಲಿನ ನಿಷೇಧ ಮುಕ್ತಾಯವಾಗಿತ್ತು. ನಂತರ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಲು ಅವರಿಗೆ ಸಮರ್ಥ ಸಮಯಾವಕಾಶ ಲಭಿಸಿರಲಿಲ್ಲ.