ಬೆಂಗಳೂರು: ಅರಬ್ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕರ್ನಾಟಕದ ಕ್ರಿಕೆಟಿಗರು ಗಮನಾರ್ಹ ನಿರ್ವಹಣೆಯೊಂದಿಗೆ ಗಮನಸೆಳೆಯುತ್ತಿದ್ದಾರೆ. ಕೆಎಲ್ ರಾಹುಲ್ 500ಕ್ಕೂ ಅಧಿಕ ರನ್ ಸಿಡಿಸಿ ಆರೆಂಜ್ ಕ್ಯಾಪ್ ಒಡೆಯರಾಗಿದ್ದರೆ, ಅವರಿಗೆ ಮಯಾಂಕ್ ಅಗರ್ವಾಲ್ ಪೈಪೋಟಿ ನೀಡುತ್ತಿದ್ದಾರೆ. ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಆರ್‌ಸಿಬಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಕೆಆರ್ ತಂಡದಲ್ಲಿ ಯುವ ವೇಗಿ ಪ್ರಸಿದ್ಧಕೃಷ್ಣ ಮಿಂಚುತ್ತಿದ್ದರೆ, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶ್ರೇಯಸ್ ಗೋಪಾಲ್ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಕನ್ನಡಿಗರು ತೋರುತ್ತಿರುವ ಉತ್ತಮ ನಿರ್ವಹಣೆಯನ್ನು ಪ್ರಶಂಸಿಸಿರುವ ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್, ಬೆಂಗಳೂರಿನಿಂದ ಹಲವು ವಿಶ್ವ ದರ್ಜೆಯ ಕ್ರೀಡಾಪಟುಗಳು ಹೊರಹೊಮ್ಮಲು ಅಲ್ಲಿನ ನೀರೇ ಕಾರಣ ಎಂದು ಹೇಳಿದ್ದಾರೆ. ‘ಬೆಂಗಳೂರಿನ ನೀರಿನಲ್ಲೇ ಆ ಗುಣವಿದೆ’ ಎಂದು ಗಾವಸ್ಕರ್ ಐಪಿಎಲ್ ವಿಶ್ಲೇಷಣೆಯ ವೇಳೆ ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಬ್ಯಾಟಿಂಗ್‌ನಲ್ಲೂ ಸ್ಥಿರ ನಿರ್ವಹಣೆಯೊಂದಿಗೆ ಮಿಂಚುತ್ತಿರುವ ಕೆಎಲ್ ರಾಹುಲ್ ಅವರನ್ನು ಪ್ರಶಂಸಿಸುತ್ತ, ಬೆಂಗಳೂರು ನಗರದ ಬಗ್ಗೆಯೇ ಗಾವಸ್ಕರ್ ಹೇಳಿರುವ ಅಭಿಮಾನದ ಮಾತುಗಳು ಈಗ ಕನ್ನಡಿಗರ ಹೃದಯ ಗೆದ್ದಿದೆ.
ಕಿಂಗ್ಸ್ ಇಲೆವೆನ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಮುನ್ನ ರಾಹುಲ್ ಬ್ಯಾಟಿಂಗ್ ನಿರ್ವಹಣೆಯ ಬಗ್ಗೆ ಸಹ-ವಿಶ್ಲೇಷಕರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಗಾವಸ್ಕರ್, ‘ಅದು ಬೆಂಗಳೂರಿನ ನೀರಿನಲ್ಲೇ ಇದೆ. ಬೆಂಗಳುರು ಹಲವು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ. ಕ್ರಿಕೆಟ್ ಮಾತ್ರವಲ್ಲ, ಹಲವಾರು ಕ್ರೀಡೆಗಳಲ್ಲಿ ಇದನ್ನು ಕಾಣಬಹುದು. ನನ್ನ ಸಾರ್ವಕಾಲಿಕ ನೆಚ್ಚಿನ ಭಾರತೀಯ ಕ್ರೀಡಾಪಟು ಪ್ರಕಾಶ್ ಪಡುಕೋಣೆ, ಗುಂಡಪ್ಪ ವಿಶ್ವನಾಥ್, ಎರ‌್ರಪಳ್ಳಿ ಪ್ರಸನ್ನ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವಾರು ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಬೆಂಗಳೂರು ರೂಪಿಸಿದೆ. ಹೀಗಾಗಿ ಆ ಗುಣ ಬೆಂಗಳೂರಿನ ನೀರಿನಲ್ಲೇ ಇದೆ ಎನ್ನಬಹುದು’ ಎಂದು ಹೇಳಿದ್ದಾರೆ.