ಕ್ರೀಡೆ

ಟಿ20 ವಿಶ್ವಕಪ್​ ಅರ್ಹತೆಯ ಸನಿಹ ಇಟಲಿ: ಇನ್ನೊಂದು ಪಂದ್ಯ ಗೆದ್ದರೆ ಪ್ರವೇಶ ಖಚಿತ, ಸೋತರೂ ಇದೆ ಚಾನ್ಸ್​!

ವೂರ್​ರ್ಬಗ್​ (ನೆದರ್ಲೆಂಡ್​): ಕ್ರಿಕೆಟ್​ ಶಿಶು ಇಟಲಿ ತಂಡ ಮುಂದಿನ ವರ್ಷ ಭಾರತ-ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ ಅರ್ಹತೆ ಸಂಪಾದಿಸುವ ಸನಿಹ ತಲುಪಿದೆ. ಯುರೋಪ್​ ಖಂಡದ ಟಿ20 ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಸ್ಕಾಟ್ಲೆಂಡ್​ ತಂಡಕ್ಕೆ 12 ರನ್​ಗಳಿಂದ ಆಘಾತಕಾರಿ ಸೋಲುಣಿಸುವ ಮೂಲಕ ಇಟಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಆಸ್ಟ್ರೆಲಿಯಾದ ಮಾಜಿ ಟೆಸ್ಟ್​ ಆರಂಭಿಕ ಜೋ ಬರ್ನ್ಸ್​ ಸಾರಥ್ಯದ ಇಟಲಿ ತಂಡ ಇನ್ನೊಂದು ಪಂದ್ಯ ಗೆದ್ದರೆ, ಮೊಟ್ಟಮೊದಲ ಬಾರಿಗೆ ಐಸಿಸಿಯ ಪ್ರಮುಖ ಟೂರ್ನಿಯೊಂದರಲ್ಲಿ ಆಡುವ ಅವಕಾಶ ಪಡೆಯಲಿದೆ. 5 ತಂಡಗಳ ಟೂರ್ನಿಯಲ್ಲಿ ರೌಂಡ್​ ರಾಬಿನ್​ ಲೀಗ್​ ಬಳಿಕ ಅಗ್ರ 2 ತಂಡಗಳು ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ. ಇಟಲಿ (5 ಅಂಕ) ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಶುಕ್ರವಾರ ಟೂರ್ನಿಯ ಕೊನೇ 2 ಪಂದ್ಯಗಳಲ್ಲಿ ಇಟಲಿ ತಂಡ ನೆದರ್ಲೆಂಡ್​ (4 ಅಂಕ) ವಿರುದ್ಧ ಮತ್ತು ಸ್ಕಾಟ್ಲೆಂಡ್​ (3 ಅಂಕ) ತಂಡ ಜೆರ್ಸಿ (3 ಅಂಕ) ವಿರುದ್ಧ ಆಡಲಿದೆ. ಇದರಲ್ಲಿ ಇಟಲಿ ಸೋತರೆ, ನೆದರ್ಲೆಂಡ್​ ಅಗ್ರಸ್ಥಾನಕ್ಕೇರಿ ಟಿ20 ವಿಶ್ವಕಪ್​ ಅರ್ಹತೆ ಖಚಿತಪಡಿಸಿಕೊಳ್ಳಲಿದೆ.

ಆಗ ಸ್ಕಾಟ್ಲೆಂಡ್​-ಜೆರ್ಸಿ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ರನ್​ರೇಟ್​ನಲ್ಲಿ ಹಿಂದಿಕ್ಕಿದರೆ ಇಟಲಿ 2ನೇ ಸ್ಥಾನದೊಂದಿಗೆ ಟಿ20 ವಿಶ್ವಕಪ್​ ಅರ್ಹತೆ ಪಡೆಯಬಹುದಾಗಿದೆ. ಸದ್ಯ ಇಟಲಿ (1.722), ಜೆರ್ಸಿ (0.43) ಮತ್ತು ಸ್ಕಾಟ್ಲೆಂಡ್​ಗಿಂತ (0.150) ಉತ್ತಮ ರನ್​ರೇಟ್​ಅನ್ನೇ ಹೊಂದಿದೆ. ಇಟಲಿ ಕೊನೇ ಪಂದ್ಯದಲ್ಲೂ ಗೆದ್ದರೆ ಬೇರಾವುದೇ ಲೆಕ್ಕಾಚಾರವಿಲ್ಲದೆ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿದೆ ಮತ್ತು ಟಿ20 ವಿಶ್ವಕಪ್​ ಟಿಕೆಟ್​ ಒಲಿಸಿಕೊಳ್ಳಲಿದೆ.