ಕ್ರೀಡೆ

ಕಾಫಿ ವಿದ್​ ಕರಣ್​ ವಿವಾದ ಭಯಪಡಿಸಿತ್ತು; 5 ವರ್ಷಗಳ ಹಿಂದಿನ ಕಹಿಯನ್ನು ನೆನೆದ ಕೆಎಲ್​ ರಾಹುಲ್!​

ನವದೆಹಲಿ: ಐದು ವರ್ಷಗಳ ಹಿಂದೆ ಹಾರ್ದಿಕ್​ ಪಾಂಡ್ಯ ಜತೆಗೂಡಿ "ಕಾಫಿ ವಿದ್​ ಕರಣ್​' ಟಿವಿ ಶೋನಲ್ಲಿ ಮಹಿಳೆಯರ ಬಗ್ಗೆ ಅವಾಚ್ಯ ಹೇಳಿಕೆಗಳನ್ನು ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಟೀಮ್​ ಇಂಡಿಯಾ ಆಟಗಾರ ಹಾಗೂ ಕನ್ನಡಿಗ ಕೆಎಲ್​ ರಾಹುಲ್​, ಆ ವಿವಾದ ತನ್ನನ್ನು ತೀವ್ರ ಭಯಪಡಿಸಿತ್ತು ಮತ್ತು ನಂತರದಲ್ಲಿ ಓರ್ವ ವ್ಯಕ್ತಿಯಾಗಿ ತಾನು ಸಾಕಷ್ಟು ಬದಲಾದೆ ಎಂದು ಹೇಳಿದ್ದಾರೆ.

"ಆ ರೀತಿಯ ಸಂದರ್ಶನ ನನಗೆ ಭಿನ್ನ ಪ್ರಪಂಚವಾಗಿತ್ತು. ನಾನು ನಾಚಿಕೆ ಮತ್ತು ಮೃದುಮಾತಿನ ಹುಡುಗನಾಗಿದ್ದೆ. ಭಾರತ ಪರ ಆಡಿದ ಬಳಿಕ ಆತ್ಮವಿಶ್ವಾಸ ಬೆಳೆದಿತ್ತು. ಆದರೆ ಆ ವಿವಾದ ನನ್ನನ್ನು ಭಾರಿ ಭಯಪಡಿಸಿತ್ತು. ನಾನಾಗ ತಂಡದಿಂದ ಅಮಾನತುಗೊಂಡಿದ್ದೆ. ನಾನು ಶಾಲಾ ದಿನಗಳಲ್ಲೂ ಎಂದೂ ಸಸ್ಪೆಂಡ್​ ಆಗಿರಲಿಲ್ಲ, ಶಿಕ್ಷೆಗೂ ಗುರಿಯಾಗಿರಲಿಲ್ಲ. ಶಾಲೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದೆ. ಆದರೆ ಎಂದೂ ತಂದೆ-ತಾಯಿಗೆ ದೂರು ಹೋಗುವಂಥ ತಪ್ಪು ಮಾಡಿರಲಿಲ್ಲ. ಹೀಗಾಗಿ ಅದನ್ನು ಹೇಗೆ ನಿಭಾಯಿಸುವುದು ಎಂದೇ ತಿಳಿಯದಂತಾಗಿದ್ದೆ' ಎಂದು ರಾಹುಲ್​ ಪಾಡ್​ಕಾಸ್ಟ್​ ಒಂದರಲ್ಲಿ ಹೇಳಿದ್ದಾರೆ.