ಬೆಂಗಳೂರು ಎಫ್​ಸಿ ಗೆಲುವಿನ ಸಂಭ್ರಮ ಏಜೆನ್ಸಿ
ಕ್ರೀಡೆ

ISL: ಮಳೆ ನಡುವೆ ಗೆಲುವು ಸಾಧಿಸಿದ ಬೆಂಗಳೂರು ಎಫ್​ಸಿ

2ನೇ ಲೀಗ್​ ಪಂದ್ಯದಲ್ಲಿ ಚೆನ್ನೈಯಿನ್​ ಎಫ್​ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆತಿಥೇಯ ಬೆಂಗಳೂರು ಎಫ್​ಸಿ ತಂಡ ಉದ್ಯಾನನಗರಿಯ ತುಂತುರು ಮಳೆಯ ನಡುವೆಯೇ ನಡೆದ ಇಂಡಿಯನ್​ ಸೂಪರ್​ ಲೀಗ್​ (ಐಎಸ್​ಎಲ್​) ಫುಟ್​ಬಾಲ್​ ಟೂರ್ನಿಯ ತನ್ನ 2ನೇ ಲೀಗ್​ ಪಂದ್ಯದಲ್ಲಿ ಚೆನ್ನೈಯಿನ್​ ಎಫ್​ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿದೆ. ಸತತ 2ನೇ ಜಯದೊಂದಿಗೆ ಬಿಎ್​ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ಕ್ರಿಕೆಟ್​ ಪಂದ್ಯ 2 ಗಂಟೆ ತಡವಾಗಿ ಆರಂಭಗೊಂಡರೆ, ಇತ್ತ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫುಟ್​ಬಾಲ್​ ಪಂದ್ಯ ಮಳೆಯ ನಡುವೆ ನಿಗದಿತ ಸಮಯದಲ್ಲೇ ಶುರುವಾಯಿತು. ರರ್ಯಾನ್​ ವಿಲಿಯಮ್ಸ್​ 24ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ಬಲದಿಂದ ಸುನೀಲ್​ ಛೇಟ್ರಿ ಪಡೆ ಮೊದಲಾರ್ಧದಲ್ಲೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಬಳಿಕ ದ್ವಿತೀಯಾರ್ಧದಲ್ಲಿ ಮಿಹೈಲೊ ಪೆರೋವಿಕ್​ ಮುನ್ನಡೆಯನ್ನು ಹಿಗ್ಗಿಸಿದರು. ಅವರು 52ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಬಿಎಫ್​​ಸಿ ತವರಿನಲ್ಲೇ ಆಡಿದ ತನ್ನ ಮೊದಲ ಪಂದ್ಯದಲ್ಲಿ ಎಸ್​ಸಿ ದೆಹಲಿ ವಿರುದ್ಧ 3-2ರಿಂದ ಗೆಲುವು ಸಾಧಿಸಿತ್ತು.

ಬಿಎಫ್​ಸಿ ಮುಂದಿನ ಪಂದ್ಯ: ಅಕ್ಟೋಬರ್​ 30; ಎದುರಾಳಿ: ನಾರ್ತ್​ಈಸ್ಟ್​ ಯುನೈಟೆಡ್​, ಸ್ಥಳ: ಗುವಾಹಟಿ.