ಕ್ರೀಡೆ

ಇಂಗ್ಲೆಂಡ್ ಎದುರು ಭಾರತಕ್ಕೆ ಭರ್ಜರಿ ಗೆಲುವು: ರೋಹಿತ್ ಶರ್ಮ ದಾಖಲೆ ಮುರಿದ ಅಭಿಷೇಕ್ ಶರ್ಮ!

ಮುಂಬೈ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ (135 ರನ್, 54 ಎಸೆತ, 7 ಬೌಂಡರಿ, 13 ಸಿಕ್ಸರ್ ಹಾಗೂ 3ಕ್ಕೆ 2 ವಿಕೆಟ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿದ ಭಾರತ ತಂಡ ಐದನೇ ಹಾಗೂ ಅಂತಿಮ ಟಿ20ಯಲ್ಲಿ ಇಂಗ್ಲೆಂಡ್ ಎದುರು 150 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಸೂರ್ಯಕುಮಾರ್ ಬಳಗ 4-1ರಿಂದ ಐದು ಪಂದ್ಯಗಳ ಸರಣಿ ಕೈವಶಮಾಡಿಕೊಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. 24 ವರ್ಷದ ಅಭಿಷೇಕ್ ಶರ್ಮ ಹಾಗೂ ತಿಲಕ್ ವರ್ಮ ನಡೆಸಿದ ಬಿರುಸಿನ ಜತೆಯಾಟದ ಬಲದಿಂದ ಭಾರತ ತಂಡ 9 ವಿಕೆಟ್‌ಗೆ 247 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಪ್ರತಿಯಾಗಿ ಆರಂಭಿಕ ಫಿಲ್ ಸಾಲ್ಟ್ (55 ರನ್, 23 ಎಸೆತ, 7 ಬೌಂಡರಿ, 3 ಸಿಕ್ಸರ್) ಹೋರಾಟದ ನಡುವೆಯೂ ನಿರಂತರ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 10.3 ಓವರ್‌ಗಳಲ್ಲೇ ಕೇವಲ 97 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಮೊಹಮದ್ ಶಮಿ (25ಕ್ಕೆ 3), ವರುಣ್ ಚಕ್ರವರ್ತಿ (25ಕ್ಕೆ 2), ಶಿವಂ ದುಬೆ (11ಕ್ಕೆ 2) ದಾಳಿಗೆ ಇಂಗ್ಲೆಂಡ್ ತತ್ತರಿಸಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಿದ ಭಾರತ ಮೊಹಮದ್ ಶಮಿಗೆ ಅವಕಾಶ ನೀಡಿತು.

135: ಅಭಿಷೇಕ್ ಶರ್ಮ ಭಾರತ ಪರ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ಬ್ಯಾಟರ್ ಎನಿಸಿದರು. ಶುಭಮಾನ್ ಗಿಲ್ (126*) ದಾಖಲೆ ಮುರಿದರು.

13. ಅಭಿಷೇಕ್ ಶರ್ಮ ಟಿ20 ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್. ರೋಹಿತ್ ಶರ್ಮ (10) ಹಿಂದಿನ ಸಾಧಕ.

37. ಟಿ20ಯಲ್ಲಿ ಭಾರತದ ಪರ ವೇಗದ ಶತಕ ಸಿಡಿಸಿದ 2ನೇ ಬ್ಯಾಟರ್ ಅಭಿಷೇಕ್ ಶರ್ಮ. ರೋಹಿತ್ ಶರ್ಮ (35 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ 8ನೇ ವೇಗದ ಶತಕ ಇದಾಗಿದೆ.

95: ಭಾರತ ಟಿ20 ಪವರ್ ಪ್ಲೇಯಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. ಸ್ಕಾಟ್ಲೆಂಟ್ ಎದುರು 82 ರನ್‌ಗಳಿಸಿದ್ದು ಹಿಂದಿನ ಗರಿಷ್ಠ ಮೊತ್ತ.

5. ಭಾರತ ಟಿ20ಯಲ್ಲಿ ಕಲೆಹಾಕಿದ 4ನೇ ಗರಿಷ್ಠ ಮೊತ್ತ ಇದಾಗಿದೆ. ಬಾಂಗ್ಲಾ ಎದುರು 297, ದ.ಆಫ್ರಿಕಾ ವಿರುದ್ಧ 283, ಶ್ರೀಲಂಕಾ ಎದುರು 260 ಮೊದಲ 3 ಗರಿಷ್ಠ ಮೊತ್ತಗಳಾಗಿವೆ.

2: ಅಭಿಷೇಕ್ ಶರ್ಮ ಟಿ20 ಕ್ರಿಕೆಟ್‌ನಲ್ಲಿ ಭಾರತದ 2ನೇ ಅತಿವೇಗದ ಅರ್ಧಶತಕ (17 ಎಸೆತ) ಮತ್ತು ಶತಕ (37 ಎಸೆತ) ಬಾರಿಸಿದರು. ಯುವರಾಜ್ (12 ಎಸೆತ) ಮತ್ತು ರೋಹಿತ್ ಶರ್ಮ (35 ಎಸೆತ) ಇವೆರಡು ಸಾಧನೆಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.