ಕ್ರೀಡೆ

ದೇಶೀಯ ಕ್ರಿಕೆಟ್ ಋತುವಿಗೆ ಮರುಚಾಲನೆ: ಇಂದಿನಿಂದ ಇರಾನಿ ಕಪ್ ಫೈಟ್

ರಾಜ್‌ಕೋಟ್: ಏಕದಿನ ವಿಶ್ವಕಪ್ ಕಾವು ಪಡೆಯುತ್ತಿರುವ ನಡುವೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ 2023-24ರ ಸಾಲಿನ ದೇಶೀಯ ಕ್ರಿಕೆಟ್ ಋತುವಿಗೆ ಮರುಚಾಲನೆ ದೊರೆಯಲಿದ್ದು, ಇರಾನಿ ಕಪ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಶೇಷ ಭಾರತ ತಂಡಗಳು ಮುಖಾಮುಖಿಯಾಗಲಿವೆ.

ಇದು ಹಾಲಿ ವರ್ಷದ 2ನೇ ಇರಾನಿ ಕಪ್ ಪಂದ್ಯವಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಶೇಷ ಭಾರತ ತಂಡ ಮಾರ್ಚ್‌ನಲ್ಲಿ 2021-22ರ ರಣಜಿ ಚಾಂಪಿಯನ್ ಮಧ್ಯಪ್ರದೇಶ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈ ಬಾರಿ ಹನುಮ ವಿಹಾರಿ ಶೇಷ ಭಾರತವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ತಂಡದಿಂದ ಹೊರಬಿದ್ದಿರುವ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಸೌರಾಷ್ಟ್ರ ಪರ ಆಡಲಿದ್ದು, ಶೇಷ ಭಾರತ ತಂಡದಲ್ಲಿರುವ ಮಯಾಂಕ್ ಅಗರ್ವಾಲ್ ಹಾಗೂ ಹನುಮ ವಿಹಾರಿ ಕೂಡ ಆಯ್ಕೆಗಾರರ ಗಮನಸೆಳೆಯುವ ಪ್ರಯತ್ನ ನಡೆಸಲಿದ್ದಾರೆ. ಎಡಗೈ ವೇಗಿ ಜೈದೇವ್ ಉನಾದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಪೋರ್ಟ್ಸ್ 18