ಕ್ರೀಡೆ

ಸತತ ಮೂರನೇ ಬಾರಿಗೆ ಇರಾನಿ ಕಪ್ ಜಯಿಸಿದ ಶೇಷ ಭಾರತ: ಸೌರಭ್ ಕುಮಾರ್‌ಗೆ ಆರು ವಿಕೆಟ್

ರಾಜ್‌ಕೋಟ್: ಸ್ಪಿನ್ನರ್ ಸೌರಭ್ ಕುಮಾರ್ (43ಕ್ಕೆ 6) ಮಾರಕ ಸ್ಪಿನ್ ಬೌಲಿಂಗ್ ದಾಳಿಯ ನೆರವಿನಿಂದ ಶೇಷ ಭಾರತ ತಂಡ 60ನೇ ಆವೃತ್ತಿಯ ಇರಾನಿ ಕಪ್ ಪಂದ್ಯದಲ್ಲಿ 2022-23ರ ಚಾಂಪಿಯನ್ ಹಾಗೂ ಆತಿಥೇಯ ಸೌರಾಷ್ಟ್ರ ತಂಡದ ಎದುರು 175 ರನ್‌ಗಳಿಂದ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಶೇಷ ಭಾರತ ತಂಡ ಸತತ 3ನೇ ಮತ್ತು ಒಟ್ಟಾರೆ 31ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ.

ಎಸ್‌ಎಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 3ನೇ ದಿನವಾದ ಮಂಗಳವಾರ 9 ವಿಕೆಟ್‌ಗೆ 212 ರನ್‌ಗಳಿಂದ ಆಟ ಆರಂಭಿಸಿದ ಸೌರಾಷ್ಟ್ರ 214 ರನ್‌ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್‌ನಲ್ಲಿ 94 ರನ್ ಹಿನ್ನಡೆ ಕಂಡಿತು. ಪ್ರತಿಯಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶೇಷ ಭಾರತ, ಪಾರ್ಥ್ ಭುತ್ (53ಕ್ಕೆ7) ದಾಳಿಗೆ ನಲುಗಿ 52 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. 254 ರನ್‌ಗಳ ಚೇಸಿಂಗ್ ನಡೆಸಿದ ಸೌರಾಷ್ಟ್ರ, 34.3 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಇನ್ನೂ 2 ದಿನ ಬಾಕಿಯಿರುವಂತೆಯೇ ಶೇಷ ಭಾರತ ಚಾಂಪಿಯನ್ ಎನಿಸಿತು.

ಶೇಷ ಭಾರತ: 308 ಮತ್ತು 160 (ಸುದರ್ಶನ್ 43, ಮಯಾಂಕ್ 49, ವಿಹಾರಿ 22, ರ್ಸ್ರಾಜ್ 13, ಪಾರ್ಥ್ ಭುತ್ 53ಕ್ಕೆ7, ಧರ್ಮೇಂದ್ರ ಸಿನ್ಹಾ 65ಕ್ಕೆ3). ಸೌರಾಷ್ಟ್ರ: 214 ಮತ್ತು 79 (ಹಾರ್ವಿಕ್ 12, ಸಮರ್ಥ್ 12, ಪೂಜಾರ 7, ಧರ್ಮೇಂದ್ರ 21, ಸೌರಭ್ ಕುಮಾರ್ 43ಕ್ಕೆ6, ಶಮ್ಸ್ ಮುಲಾನಿ 23ಕ್ಕೆ3).

ಪಂದ್ಯ ಶ್ರೇಷ್ಠ: ಸೌರಭ್ ಕುಮಾರ್

79: ಇರಾನಿ ಕಪ್ ಪಂದ್ಯ ಇನಿಂಗ್ಸ್‌ನಲ್ಲಿ ತಂಡವೊಂದರ ಕನಿಷ್ಠ ಮೊತ್ತ ಇದಾಗಿದೆ. ಶೇಷ ಭಾರತ 83 ರನ್‌ಗಳಿಸಿದ್ದು ಹಿಂದಿನ ಕಡಿಮೆ ಮೊತ್ತ.