ನವದೆಹಲಿ: ಮುಂದಿನ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ ಈಗಾಗಲೆ ಬಹುತೇಕ ಖಚಿತವೆನಿಸಿದೆ. ಡಿಸೆಂಬರ್ 24ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಇದಕ್ಕೆ ಅಂಗೀಕಾರ ಸಿಗುವುದಷ್ಟೇ ಬಾಕಿ ಇದೆ. ಈ ಬೆಳವಣಿಗೆಯಿಂದಾಗಿ ಐಪಿಎಲ್ ಟೂರ್ನಿಯ ಸ್ವರೂಪವೂ ಬದಲಾಗುವ ಸಾಧ್ಯತೆ ಹರಡಿದೆ.
ಒಟ್ಟು 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಭಾಗಿಸುವ ನಿರೀಕ್ಷೆ ಇದೆ. ಆಗ ತಂಡವೊಂದು ತನ್ನ ಗುಂಪಿನಲ್ಲಿ 4 ತಂಡಗಳ ವಿರುದ್ಧ ತವರು-ಎದುರಾಳಿ ನೆಲದಲ್ಲಿ ತಲಾ 2 ಪಂದ್ಯ ಆಡಲಿದ್ದು, ಮತ್ತೊಂದು ಗುಂಪಿನ 4 ತಂಡಗಳ ವಿರುದ್ಧ ತಲಾ 1 ಮತ್ತು ಇನ್ನೊಂದು ತಂಡದ ವಿರುದ್ಧ ತವರು-ಎದುರಾಳಿ ನೆಲದಲ್ಲಿ 2 ಪಂದ್ಯಗಳನ್ನು ಆಡಲಿದೆ. ಆಗ ಎಲ್ಲ ತಂಡಗಳು ಲೀಗ್ ಹಂತದಲ್ಲಿ ಈಗಿರುವಂತೆ ತಲಾ 14 ಪಂದ್ಯಗಳನ್ನೇ ಆಡಲಿವೆ.
ಡ್ರಾದ ಮೂಲಕ ಗುಂಪುಗಳನ್ನು ನಿರ್ಧರಿಸಲಾಗುತ್ತದೆ. ಮತ್ತೊಂದು ಗುಂಪಿನ ಯಾವ ತಂಡದ ವಿರುದ್ಧ 2 ಪಂದ್ಯವನ್ನು ಆಡಲಾಗುತ್ತದೆ ಎಂಬುದನ್ನು ಕೂಡ ಡ್ರಾದ ಮೂಲಕವೇ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ಇದರಿಂದ 2 ಹೊಸ ತಂಡಗಳ ಸೇರ್ಪಡೆಯ ಹೊರತಾಗಿಯೂ ಒಟ್ಟು ಪಂದ್ಯಗಳನ್ನು 74ಕ್ಕೆ ನಿಯಂತ್ರಿಸಬಹುದು.
ಒಂದು ವೇಳೆ ಹೊಸ ತಂಡಗಳ ಸೇರ್ಪಡೆಯ ಬಳಿಕವೂ ಹಾಲಿ ಸ್ವರೂಪವನ್ನೇ ಮುಂದುವರಿಸಿದರೆ, ಪ್ರತಿ ತಂಡ ಲೀಗ್ ಹಂತದಲ್ಲಿ 18 ಪಂದ್ಯ ಆಡಬೇಕಾಗುತ್ತದೆ. ಆಗ ಒಟ್ಟು ಪಂದ್ಯಗಳ ಸಂಖ್ಯೆ 94ಕ್ಕೇರುತ್ತದೆ. ಇದರಿಂದ ಟೂರ್ನಿ ಸುದೀರ್ಘವಾಗುತ್ತದೆ ಮತ್ತು ಟೂರ್ನಿಗಾಗಿ ಇರುವ 2 ತಿಂಗಳ ಒಳಗೆ ಅವಧಿಯೊಳಗೆ ಮುಗಿಸುವುದು ಕೂಡ ಕಷ್ಟವಾಗುತ್ತದೆ.