ಮುಂಬೈ: ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಶುಕ್ರವಾರ ಎದುರಾಗಲಿವೆ. ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಪಂಜಾಬ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಕಾಣದಿದ್ದರೂ ಸತತ ಎರಡು ಜಯ ದಾಖಲಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
* ಪಂಜಾಬ್‌ಗೆ ಲಿವಿಂಗ್‌ಸ್ಟೋನ್ ಬಲ
ಪ್ರಸಕ್ತ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಪಂಜಾಬ್ ತಂಡ ಖರೀದಿಸಿತ್ತು. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಎದುರು ಆಲ್ರೌಂಡ್ ನಿರ್ವಹಣೆ ಮೂಲಕ ಲಿವಿಂಗ್‌ಸ್ಟೋನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಕೆಟ್ ಕೀಪರ್-ಬ್ಯಾಟರ್ ಜಾನಿ ಬೇರ್‌ಸ್ಟೋ ತಂಡ ಕೂಡಿಕೊಳ್ಳುವುದು ಇನ್ನು ಖಾತ್ರಿಯಾಗಿಲ್ಲ. ಇಂಗ್ಲೆಂಡ್ ಆಟಗಾರ ಲಿವಿಂಗ್‌ಸ್ಟೋನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ. ಆರಂಭಿಕ ಹಂತದಲ್ಲಿ ನಾಯಕ ಮಯಾಂಕ್ ಅಗರ್ವಾಲ್ ವೈಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅನುಭವಿ ಶಿಖರ್ ಧವನ್ ಹಾಗೂ ಮಯಾಂಕ್ ಇದುವರೆಗೂ ಆರಂಭಿಕ ಹಂತದಲ್ಲಿ ಮಿಂಚಿಲ್ಲ. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಜಿತೇಶ್ ಶರ್ಮ ಗಮನಸೆಳೆದಿದ್ದರು. ಶಾರುಖ್ ಖಾನ್, ಒಡೆನ್ ಸ್ಮಿತ್, ಸ್ಫೋಟಿಸಬೇಕಿದೆ. ವೇಗಿ ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷ್‌ದೀಪ್ ಸಿಂಗ್, ವೈಭವ್ ಅರೋರ ಬೌಲಿಂಗ್ ವಿಭಾಗದಲ್ಲಿ ಗಮನಸೆಳೆಯುತ್ತಿದ್ದಾರೆ.
* ಗುಜರಾತ್‌ಗೆ ಬೌಲರ್‌ಗಳೇ ಶಕ್ತಿ
ಲಾಕಿ ರ್ಗ್ಯುಸನ್, ಮೊಹಮದ್ ಶಮಿ, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಹಿಂದಿನ ಎರಡು ಗೆಲುವಿನಲ್ಲಿ ಬೌಲರ್‌ಗಳೇ ಪ್ರಮುಖ ಪಾತ್ರವಹಿಸಿದ್ದಾರೆ. ಆರಂಭಿಕನಾಗಿ ಶುಭಮಾನ್ ಗಿಲ್ ಗಮನಸೆಳೆಯುತ್ತಿದ್ದರೆ, ಅಗ್ರಕ್ರಮಾಂಕದಲ್ಲಿ ವಿಜಯ್ ಶಂಕರ್, ಮ್ಯಾಥ್ಯೂ ವೇಡ್ ಸಾಥ್ ನೀಡಬೇಕಿದೆ. ರಾಹುಲ್ ತೆವಾಟಿಯಾ, ಕನ್ನಡಿಗ ಅಭವಿನ್ ಮನೋಹರ್, ನಾಯಕ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ಸಾಥ್ ನೀಡಬೇಕಿದೆ. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಸತತವಾಗಿ ಎರಡೂ ಪಂದ್ಯಗಳಲ್ಲೂ ವಿಲರಾಗಿದ್ದಾರೆ. ಆಲ್ರೌಂಡರ್ ವಿಜಯ್ ಶಂಕರ್‌ರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ.
ಟೀಮ್ ನ್ಯೂಸ್:
ಪಂಜಾಬ್ ಕಿಂಗ್ಸ್:
ಜಾನಿ ಬೇರ್‌ಸ್ಟೋ ಆಗಮನ ಇನ್ನು ಖಾತ್ರಿಯಾಗಿಲ್ಲ. ಹೀಗಾಗಿ ಬಾನುಕಾ ರಾಜಪಕ್ಷೆ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.
ಗುಜರಾತ್ ಟೈಟಾನ್ಸ್:
ಗೆಲುವಿನ ಲಯದಲ್ಲಿರುವ ತಂಡವನ್ನೇ ಉಳಿಸಿಕೊಳ್ಳಬಹುದು. ಸತತವಾಗಿ ವೈಲ್ಯ ಅನುಭವಿಸುತ್ತಿರುವ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಬದಲಿಗೆ ಆ್ಘಾನಿಸ್ತಾನದ ರಹಮಾನುಲ್ಲ ಗುರ್ಬಜ್, ವೇಗಿ ವರುಣ್ ಆರನ್ ಬದಲಿಗೆ ಯಶ್ ದಯಾಳ್, ದರ್ಶನ್ ನಲಕಂಡೆ, ಪ್ರದೀಪ್ ಸಂಗ್ವಾನ್ ಈ ಮೂವರಲ್ಲಿ ಒಬ್ಬರು ಕಣಕ್ಕಿಳಿಯಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್