ಮುಂಬೈ: ಟೂರ್ನಿ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳೆನಿಸಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 15ನೇ ಆವೃತ್ತಿಯಲ್ಲಿ ಗೆಲುವಿಗಾಗಿ ಪರದಾಡುತ್ತಿವೆ. ಅಂಕಪಟ್ಟಿಯಲ್ಲಿ ಕಡೇ 2 ಸ್ಥಾನದಲ್ಲಿರುವ ಉಭಯ ತಂಡಗಳ ಪಾಲಿಗೆ ಗುರುವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ನಿರ್ಣಾಯಕವೆನಿಸಿದೆ. ಸತತ 6 ಸೋಲುಗಳಿಂದ ರೋಹಿತ್ ಶರ್ಮ ಪಡೆಯ ಕನಸು ಬಹುತೇಕ ಭಗ್ನಗೊಂಡಿದ್ದರೂ, ಲೆಕ್ಕಾಚಾರದ ದೃಷ್ಟಿಯಿಂದಲಾದರೂ ತನ್ನ ಸವಾಲು ಜೀವಂತ ಉಳಿಸಿಕೊಳ್ಳಲು ಈ ಪಂದ್ಯದಲ್ಲಾದರೂ ಗೆಲುವಿನ ಖಾತೆ ತೆರೆಯಬೇಕಾಗಿದೆ. ಮತ್ತೊಂದೆಡೆ ರವೀಂದ್ರ ಜಡೇಜಾ ಬಳಗಕ್ಕೂ ಗೆದ್ದರಷ್ಟೇ ಉಳಿಗಾಲವೆನಿಸಿದೆ. ಉಭಯ ತಂಡಗಳಿಗೂ ತಂಡದ ಸಂಯೋಜನೆಯೇ ದೊಡ್ಡ ತಲೆನೋವಾಗಿದ್ದು, ಅನುಭವಿಗಳು ಕೈಕೊಡುತ್ತಿರುವುದು ಹಿನ್ನಡೆಯಾಗಿದೆ.
*ರೋಹಿತ್ ಫಾರ್ಮ್ ಕಳವಳ
ಮುಂಬೈ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭ ದಕ್ಕುತ್ತಿಲ್ಲ. ಅದರಲ್ಲೂ ನಾಯಕ ರೋಹಿತ್ ಶರ್ಮ ಅವರೇ ಸತತ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದುವರೆಗಿನ 6 ಇನಿಂಗ್ಸ್‌ಗಳಿಂದ ಕೇವಲ 114 ರನ್ ಪೇರಿಸಲಷ್ಟೇ ಶಕ್ತರಾಗಿದ್ದಾರೆ. ಮತ್ತೊಂದೆಡೆ, ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ತಂಡಕ್ಕೆ ಮರಳಿದ್ದ ಇಶಾನ್ ಕಿಶನ್ (191) ಅವರಿಂದಲೂ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಯುವ ಬ್ಯಾಟರ್ ಡಿವಾಲ್ಡ್ ಬ್ರೆವಿಸ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ತಕ್ಕಮಟ್ಟಿಗೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆಲ್ರೌಂಡರ್ ಕೈರಾನ್ ಪೊಲ್ಲಾಡ್ (82ರನ್) ಸತತವಾಗಿ ವಿಫಲರಾಗುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾಗೆ ಅಗತ್ಯ ಸಾಥ್ ಸಿಗುತ್ತಿಲ್ಲ. ಟೂರ್ನಿ ಬಹುತೇಕ ಶೇಕಡ 40 ಸಾಗಿದರೂ ಕನಿಷ್ಠ ಗೆಲುವಿನ ಖಾತೆ ತೆರೆಯಲು ವಿಲವಾಗಿರುವ ಮುಂಬೈ ತಂಡ ಗೆದ್ದರಷ್ಟೇ ಲೆಕ್ಕಭರ್ತಿಗೆ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಮೊದಲ ತಂಡವಾಗಿ ಹೊರಬೀಳಲಿದೆ.
* ಒತ್ತಡದಲ್ಲಿ ಸಿಎಸ್‌ಕೆ
ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋತು, 1ರಲ್ಲಿ ಗೆದ್ದಿರುವ ಸಿಎಸ್‌ಕೆ ತಂಡಕ್ಕೂ ಗೆಲುವೊಂದೇ ಮಾರ್ಗವಾಗಿದೆ. ರಾಬಿನ್ ಉತ್ತಪ್ಪ, ಶಿವಂ ದುಬೆ ಜೋಡಿ ಆರ್‌ಸಿಬಿ ಎದುರು ಅಬ್ಬರಿಸಿದರೂ ಗುಜರಾತ್ ವಿಲರಾಗಿದ್ದಾರೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಫಾರ್ಮ್‌ಗೆ ಮರಳಿರುವುದು ಸಮಾಧಾನಕರ ವಿಷಯ. ಅನುಭವಿಗಳಾದ ಮೊಯಿನ್ ಅಲಿ, ಅಂಬಟಿ ರಾಯುಡು, ನಾಯಕ ರವೀಂದ್ರ ಜಡೇಜಾರಿಂದ ಜವಾಬ್ದಾರಿ ಪ್ರದರ್ಶನ ಬರಬೇಕಿದೆ. ಬೌಲಿಂಗ್‌ನಲ್ಲಿ ಡ್ವೇನ್ ಬ್ರಾವೋ, ಮಹೀಶ್ ತೀಕ್ಷಣ ಜೋಡಿ ಗಮನಸೆಳೆಯುತ್ತಿದ್ದರೂ ಇತರರಿಂದ ಬೆಂಬಲ ದಕ್ಕುತ್ತಿಲ್ಲ. ಗುಜರಾತ್ ಎದುರು ಕಳೆದ ಪಂದ್ಯದಲ್ಲಿ ಕ್ರಿಸ್ ಜೋರ್ಡಾನ್ ದುಬಾರಿಯಾದ ಪರಿಣಾಮ ಕಡೇ ಕ್ಷಣದಲ್ಲಿ ಸಿಎಸ್‌ಕೆ ನಿರಾಸೆ ಅನುಭವಿಸಿತ್ತು.
ಟೀಮ್ ನ್ಯೂಸ್:
ಮುಂಬೈ: ನಿಸ್ತೇಜ ನಿರ್ವಹಣೆಯಿಂದ ಬಳಲುತ್ತಿರುವ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಬದಲಿಗೆ ಟಿಮ್ ಡೇವಿಡ್ ಕಣಕ್ಕಿಳಿಯಬಹುದು. ಟೈಮಲ್ ಮಿಲ್ಸ್ ಬದಲಿಗೆ ರಿಲಿ ಮೆರೆಡಿತ್ ಆಡುವ ಸಾಧ್ಯತೆಗಳಿವೆ.
ಸಿಎಸ್‌ಕೆ: ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಕ್ರಿಸ್ ಜೋರ್ಡನ್ ಬದಲಿಗೆ ಡ್ವೈನ್ ಪ್ರಿಟೊರಿಯಸ್ ಅವಕಾಶದ ನಿರೀಕ್ಷೆಯಲ್ಲಿದ್ದರೆ, ಮುಖೇಶ್ ಚೌಧರಿ ಬದಲಿಗೆ ತುಷಾರ್ ದೇಶಪಾಂಡೆ ಆಡಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 32, ಮುಂಬೈ: 19, ಸಿಎಸ್‌ಕೆ: 13