ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬೌಲರ್ ಯಶ್ ದಯಾಳ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬೌಲರ್ ಯಶ್ ದಯಾಳ್‌ಗೆ ಶಾಕ್
- ರಾಜಸ್ಥಾನದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ
- ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಜೈಪುರದ ವಿಶೇಷ POCSO ನ್ಯಾಯಾಲಯ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬೌಲರ್ ಯಶ್ ದಯಾಳ್ ( Yash Dayal ) ಅವರು ವಿವಾದದಲ್ಲಿ ಸಿಲುಕಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ರಾಜಸ್ಥಾನದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಯಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಜೈಪುರದ ವಿಶೇಷ POCSO ನ್ಯಾಯಾಲಯವು ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ತನಿಖೆ ನಿರ್ಣಾಯಕ ಹಂತದಲ್ಲಿದೆ. ಸದ್ಯ ಲಭ್ಯವಿರುವ ಸಾಕ್ಷ್ಯಗಳು ಮತ್ತು ತನಿಖೆಯನ್ನು ನೋಡಿದರೆ ದಯಾಳ್ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಲಾಗುವುದಿಲ್ಲ ಅಂತ ಹೇಳಿ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರು ಜಾಮೀನು ನಿರಾಕರಿಸಿದ್ದಾರೆ. ಇದರಿಂದ ಯಶ್ ದಯಾಳ್ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಏನಿದು ಪ್ರಕರಣ?
ರಾಜಸ್ಥಾನದ ಹುಡುಗಿಯೊಬ್ಬಳು (ಆರೋಪದ ಸಮಯದಲ್ಲಿ 17 ವರ್ಷ) ಯಶ್ ದಯಾಳ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾಳೆ. ನನ್ನನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾಳೆ. ಕ್ರಿಕೆಟ್ ವೃತ್ತಿಯಲ್ಲಿ ಸಹಾಯ ಮಾಡುವ ಭರವಸೆ ನೀಡಿ, ಸುಮಾರು 2.5 ವರ್ಷಗಳ ಕಾಲ ಜೈಪುರ ಮತ್ತು ಕಾನ್ಪುರದ ಹೋಟೆಲ್‌ಗಳಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮಾಡಿದ್ದಾಳೆ. ಹೀಗಾಗಿ, ದಯಾಳ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ದಯಾಳ್ ಮತ್ತು ಹುಡುಗಿ ನಡುವೆ ನಡೆದಿರುವ ಚಾಟ್‌ಗಳು, ಫೋಟೋಗಳು, ವಿಡಿಯೋಗಳು, ಕರೆ ದಾಖಲೆಗಳು ಮತ್ತು ಹೋಟೆಲ್ ದಾಖಲೆಗಳು ಕೂಡ ಸಾಕ್ಷಿಯಾಗಿ ಪೊಲೀಸರಿಗೆ ಸಿಕ್ಕಿವೆ. ಈ ಪ್ರಕರಣದಲ್ಲಿ ದಯಾಳ್ ಅವರು ತಪ್ಪಿತಸ್ಥನೆಂದು ಸಾಬೀತಾದರೆ, ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ, ಈ ಪ್ರಕರಣ ಪ್ರತಿದಿನ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಳು. ಆ ಬಳಿಕ ಕ್ರಿಕೆಟ್‌ನಲ್ಲಿ ಉತ್ತಮ ವೃತ್ತಿಜೀವನವನ್ನು ತೋರಿಸಬೇಕೆಂದು ಆಶಿಸಿ ಸುಮಾರು ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಘಟನೆ ನಡೆದಾಗ ಬಾಲಕಿಗೆ 17 ವರ್ಷ ವಯಸ್ಸಾಗಿದ್ದರಿಂದ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ, ಈ ಪ್ರಕರಣದಲ್ಲಿ ಯಶ್ ದಯಾಳ್‌ಗೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ.
ಮತ್ತೊಂದೆಡೆ, ಈ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳು. ಈ ಸಂಬಂಧವೂ ದೂರು ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ದಯಾಳ್ ಅವರು ಮೇಲ್ಮನವಿ ಸಲ್ಲಿಸಿದ ಬಳಿಕ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಲಾಯಿತು.
ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೆ, 2022 ರಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ದಯಾಳ್ ಅವರು ಐಪಿಎಲ್‌ಗೆ ಪ್ರವೇಶಿಸಿದರು. 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಬಳಿಕ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಪ್ರಮುಖ ಬೌಲರ್ ಆದರು. 2025ರಲ್ಲಿ ಆರ್‌ಸಿಬಿ ಪರ 13 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು, (ಏಜೆನ್ಸೀಸ್).