ಕೆಎಸ್‌ಸಿಎ ಮತ್ತು RCB ನಿಯೋಗದಿಂದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮ್ಯಾಚ್ ಆಡಿಸುವ ವಿಚಾರ
- ಗೃಹ ಸಚಿವ ಪರಮೇಶ್ವರ್ ಭೇಟಿ ಮಾಡಿದ ಕೆಎಸ್‌ಸಿಎ ಮತ್ತು ಆರ್‌ಸಿಬಿ ನಿಯೋಗ
- ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ
- ಇದೇ 12 ರಂದು ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರ ಭರವಸೆ
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಐಪಿಎಲ್ ಪಂದ್ಯಗಳನ್ನು ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮತ್ತು ಆರ್‌ಸಿಬಿ ನಿಯೋಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಇಂದು (ಫೆ.09) ಗೃಹ ಸಚಿವರ ಜತೆ ಸಮಾಲೋಚನೆ ನಡೆಸಿ, ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಾವಳಿ ಆಡಿಸುವ ಸಂಬಂಧ ಚರ್ಚೆ ನಡೆಸಿತು. ಇದೇ 12 ರಂದು ಮತ್ತೊಂದು ಸಭೆ ನಡೆಸಿ, ಪಂದ್ಯಾವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ.
ಗೃಹ ಸಚಿವರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್, ಇಂದು ನಾವು ಗೃಹ ಸಚಿವರ ಭೇಟಿ ಮಾಡಿದ್ದೇವೆ. ಆರ್‌ಸಿಬಿ ಮ್ಯಾಚ್ ನಡೆಸುವ ಸಂಬಂಧ ಜಂಟಿ ನಿಯೋಗ ಬಂದಿದ್ದೆವು. ನಾನು, ರಾಜೇಶ್ ಮೆನನ್ ಹಾಗೂ ವಿನಯ್ ಮೃಂತ್ಯುಜಯ ಒಟ್ಟಿಗೆ ಆಗಮಿಸಿದ್ದೆವು. ಗೃಹ ಸಚಿವರ ಜತೆ ಒಳ್ಳೆಯ ರೀತಿಯಲ್ಲಿ ಚರ್ಚೆ ನಡೆದಿದೆ. ಇದೇ ಫೆಬ್ರವರಿ 12 ರಂದು ಸಮಿತಿ ಜತೆ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವುದಾಗಿ ಗೃಹ ಸಚಿವರು ತಿಳಿಸಿದರು. ಆದಷ್ಟು ಬೇಗ ಸ್ಥಳ ನಿರ್ಧಾರ ಆಗಬೇಕು. ಹೀಗಾಗಿ, ಬೇಗ ಒಂದು ತೀರ್ಮಾನ ತಗೊಳ್ಳಿ ಅಂತ ಗೃಹಸಚಿವರಲ್ಲಿ ಮನವಿ ಮಾಡಿದ್ದೇವೆ. ಆರ್‌ಸಿಬಿ ಅಭಿಮಾನಿಗಳಿಗೆ ಖಂಡಿತ ಗುಡ್ ನ್ಯೂಸ್ ಸಿಗುತ್ತದೆ ಎಂದು ಭಾವಿಸಿದ್ದೇವೆ. ಏನೆಲ್ಲ ಶಿಫಾರಸ್ಸುಗಳಿವೆಯೋ ಎಲ್ಲವನ್ನೂ ಕೆಎಸ್‌ಸಿಎಯಿಂದ ಪೂರೈಸುತ್ತೇವೆ. ಎರಡ್ಮೂರು ದಿನಗಳಲ್ಲಿ ಖಂಡಿತ ಒಳ್ಳೇ ಸುದ್ದಿ ಸಿಗಲಿದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಆಡಿಸುವ ವಿಚಾರವಾಗಿ, ನ್ಯಾಯಮೂರ್ತಿ ಕುನ್ಹಾ ಅವರು ನೀಡಿರುವ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೀವಿ. ಸರ್ಕಾರದಿಂದ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡಾ ರಚಿಸಲಾಗಿತ್ತು ಸಮಿತಿಯೂ ಕೂಡ ಒಂದಷ್ಟು ಶಿಫಾರಸು ಮಾಡಿದೆ. ಶೀಘ್ರದಲ್ಲೇ ಐಪಿಎಲ್ ಮ್ಯಾಚ್ಗಳು ಬರಲಿವೆ. ಹೀಗಾಗಿ, ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕು? ಏನೆಲ್ಲ ಸೂಚನೆ ಕೊಡಬೇಕು ಅನ್ನೋದನ್ನು ನೋಡುತ್ತೇವೆ ಎಂದರು.
ಅಲ್ಲದೆ, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಗಳನ್ನು ಆಡಿಸುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಚರ್ಚೆ ಮಾಡಬೇಕಾಗಿದೆ. ನಮ್ಮ ಶಿಫಾರಸ್ಸನ್ನು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಅಂತ ನೋಡಿ ನಾವೆಲ್ಲ ತೀರ್ಮಾನ ಮಾಡುತ್ತೇವೆ. ಬೆಂಗಳೂರಿನಲ್ಲೇ ಪಂದ್ಯಗಳು ನಡೆಯಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಜನರ ಸುರಕ್ಷತೆಯನ್ನು ಸಹ ನೋಡಬೇಕಿದೆ. ಕಾಲ್ತುಳಿತದಂಥ ಘಟನೆಗಳು ಮರುಕಳಿಸಬಾರದಲ್ಲ ಅದಕ್ಕೆ ಸುರಕ್ಷತೆ ಮುಖ್ಯವಾಗಿದೆ. ಎಲ್ಲವನ್ನೂ ನೋಡಿ ನಾವು ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಅವರು ತಿಳಿಸಿದರು.