ಪಂಜಾಬ್​ ವಿರುದ್ಧ ನಾಯಕ ರಜತ್ ಪಾಟೀದಾರ್ ಕಣಕ್ಕಿಳಿಯಲಿಲ್ಲ ಏಕೆ? ಜಿತೇಶ್​ ಕೊಟ್ಟ ಉತ್ತರ ಇಲ್ಲಿದೆ... Rajat Patidar  
ಐಪಿಎಲ್

ಪಂಜಾಬ್​ ವಿರುದ್ಧ ನಾಯಕ ರಜತ್ ಪಾಟೀದಾರ್ ಕಣಕ್ಕಿಳಿಯಲಿಲ್ಲ ಏಕೆ? ಜಿತೇಶ್​ ಕೊಟ್ಟ ಉತ್ತರ ಇಲ್ಲಿದೆ... Rajat Patidar

ಪ್ರಮುಖ ಮುಖ್ಯಾಂಶಗಳು

  • ಫಿಟ್ನೆಸ್ ಸಮಸ್ಯೆಯಿಂದಾಗಿ ಆರ್‌ಸಿಬಿ ನಾಯಕ ರಜತ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯ
  • ಪಾಟೀದಾರ್ ಅನುಪಸ್ಥಿತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ
  • ರಜತ್ ಈಗ ಚೇತರಿಸಿಕೊಳ್ಳುತ್ತಿದ್ದು ಮೇ 22 ರಂದು ಹೈದರಾಬಾದ್ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯಕ್ಕೆ ಲಭ್ಯ
Rajat Patidar : ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಿಯಮಿತ ನಾಯಕ ರಜತ್ ಪಾಟೀದಾರ್ ಅವರು ಫಿಟ್ನೆಸ್ ಸಮಸ್ಯೆಯಿಂದಾಗಿ ಇಂದು (ಮೇ 17) ಎಚ್‌ಪಿಸಿಎ (HPCA) ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ 2026ರ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯಕ್ಕೆ ಪಾಟೀದಾರ್ ಅಲಭ್ಯರಾಗಿರುವುದನ್ನು ಆರ್‌ಸಿಬಿ ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಖಚಿತಪಡಿಸಿದ್ದಾರಾದರೂ, ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯದ ವೇಳೆಗೆ ಅವರು ತಂಡಕ್ಕೆ ಮರಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಟಾಸ್​ ವೇಳೆ ಮಾತನಾಡಿದ ಜಿತೇಶ್​, ರಜತ್​ ಈಗ ಚೆನ್ನಾಗಿದ್ದಾರೆ ಮತ್ತು ಹೈದರಾಬಾದ್​ನಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದ್ದಾರೆ.
ಪ್ರಸ್ತುತ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ರಜತ್ ಪಾಟೀದಾರ್, ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 195ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧಶತಕಗಳು ಸೇರಿದಂತೆ ಒಟ್ಟು 326 ರನ್‌ಗಳನ್ನು ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಪಂಜಾಬ್​ ವಿರುದ್ಧದ ಮಹತ್ವದ ಪಂದ್ಯಕ್ಕೆ ಅವರು ಅಲಭ್ಯರಾಗಿರುವುದು ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿತು. ಇಂತಹ ಪರಿಸ್ಥಿತಿಯಲ್ಲಿ ಆರಂಭಿಕ ಹನ್ನೊಂದರ ಬಳಗದಲ್ಲಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲವಿತ್ತು. ಆ ಕುತೂಹಲವನ್ನು ವೆಂಕಟೇಶ್​ ಅಯ್ಯರ್​ ತಣಿಸಿದ್ದಾರೆ.

ಭರ್ಜರಿ ಅರ್ಧ ಶತಕ ಸಿಡಿಸಿದ ಅಯ್ಯರ್​

ರಜತ್​ ಬದಲಿಗೆ ಆಡುವ ಹನ್ನೊಂದರ ಬಳಗ ಸೇರಿದ ವೆಂಕಟೇಶ್​ ಅಯ್ಯರ್​ ( ಅಜೇಯ 73 ರನ್​, 40 ಎಸೆತ, 8 ಬೌಂಡರಿ, 4 ಸಿಕ್ಸರ್​) ಭರ್ಜರಿ ಅರ್ಧ ಶತಕ ದಾಖಲಿಸುವ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಈ ಮೂಲಕ ರಜತ್​ ಅನುಪಸ್ಥಿತಿಯನ್ನು ಸರಿದೂಗಿಸಿದರು.

ಬೃಹತ್​ ಟಾರ್ಗೆಟ್​ ಕೊಟ್ಟ ಆರ್​ಸಿಬಿ

ಧರ್ಮಶಾಲಾದಲ್ಲಿ ನಡೆಯುತ್ತಿರುವ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್​ 19ನೇ ಆವೃತ್ತಿಯ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್​, ಆರ್​ಸಿಬಿಗೆ ಬ್ಯಾಟಿಂಗ್ ಮಾಡುವಂತೆ ಹೇಳಿತು. ಅಂತೆಯೇ, 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ ಆರ್​ಸಿಬಿ 222 ರನ್​ಗಳನ್ನು ಕಲೆಹಾಕಿತು. ತಂಡದ ಪರ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ದೇವದತ್ತ ಪಡಿಕ್ಕಲ್ (45 ರನ್​) ಮತ್ತು ವಿರಾಟ್​ ಕೊಹ್ಲಿ (55 ರನ್​) ಸಿಕ್ಸರ್​ ಮತ್ತು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಪವರ್​ಪ್ಲೇನಲ್ಲಿ ಹೆಚ್ಚುವರಿ ರನ್​ಗಳನ್ನು ಕಲೆಹಾಕಿದರು.
ಇನ್ನು ಪಡಿಕ್ಕಲ್​ ವಿಕೆಟ್​ ಬೆನ್ನಲ್ಲೇ ರಜತ್ ಪಾಟೀದಾರ್​ ಅಲಭ್ಯತೆ ಕಾರಣ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​, ಪಂಜಾಬ್ ಬೌಲರ್​ಗಳನ್ನು ಚೆಂಡಾಡಿದರು. ಕೇವಲ ಸಿಕ್ಸರ್​ಗಳಲ್ಲೇ ಡೀಲ್​ ಮಾಡಿದ ವೆಂಕಿ, 40 ಎಸೆತಗಳಲ್ಲಿ 73 ರನ್​ ಸಿಡಿಸಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್​ಗಳನ್ನು ಬಾರಿಸಿದರು. ಆರ್​ಸಿಬಿ ನೀಡಿದ 223 ರನ್​ಗಳ ಗುರಿಯನ್ನು ಪಂಜಾಬ್​ ಬ್ಯಾಟರ್​ಗಳು ಸುಲಭವಾಗಿ ಚೇಸ್​ ಮಾಡಲಿದ್ದಾರಾ ಅಥವಾ ವಿಕೆಟ್​ ಕಳೆದುಕೊಂಡು ಪಂದ್ಯ ಬಿಟ್ಟುಕೊಡಲಿದ್ದಾರಾ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ, (ಏಜೆನ್ಸೀಸ್​).