ಫ್ಲವರ್ ಇದ್ದ ಕಡೆ ಟ್ರೋಫಿ ಘಮಲು!: ಭುವಿ, ಕೆಪಿ ಆಟಕ್ಕೆ ಮೆಚ್ಚುಗೆ
ಬೆಂಗಳೂರು: ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ತರಬೇತುದಾರರಾಗಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಗೆದ್ದ ಸಾಧನೆಯ ಇತಿಹಾಸ ಹೊಂದಿದ್ದಾರೆ. ಕೋಚ್ ಆಗಿ ಆರ್‌ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಆಂಡಿ ಫ್ಲವರ್ ಇದಕ್ಕೆ ಮುನ್ನ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು (2022, 2023) ಸತತ ಎರಡು ಆವೃತ್ತಿಗಳಲ್ಲಿ ಪ್ಲೇಆಫ್ಗೇರಿಸಿದ್ದರು.
2009, 2010-11, 2013ರಲ್ಲಿ ಇಂಗ್ಲೆಂಡ್ ತಂಡದ ಕೋಚ್ ಆಗಿ ಮೂರು ಆಶಸ್ ಸರಣಿ ಜಯಿಸಿದರೆ, 2010ರಲ್ಲಿ ಟಿ20 ಚಾಂಪಿಯನ್ ಆಗಿ ಮಾಡಿದ್ದರು. 2021ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸುಲ್ತಾನ್ ಮುಲ್ತಾನ್, 2023ರಲ್ಲಿ ದಿ ಹಂಡ್ರೆಡ್‌ನಲ್ಲಿ ಚಾಂಪಿಯನ್ (ಟ್ರೆಂಟ್ ರಾಕೆಟ್ಸ್) ಜತೆಗೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಕನ್ಸಲ್ಟೆಂಟ್ ಮತ್ತು ಐಎಲ್‌ಟಿ20 ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ತಂಡದ ಕೋಚ್ ಆಗಿ ಪ್ರಶಸ್ತಿ ಗೆದ್ದಿದ್ದರು.
ಭುವಿ, ಕೆಪಿ ಆಟಕ್ಕೆ ಮೆಚ್ಚುಗೆ
ಕಳೆದ ಎರಡು ಋತುಗಳಲ್ಲಿ ಒತ್ತಡದ ಸನ್ನಿವೇಶ ನಿಭಾಯಿಸುವ ವೇಗಿ ಭುವನೇಶ್ವರ ಕುಮಾರ್ ಸಾಮರ್ಥ್ಯ ಜತೆಗೆ ಇತರ ಅನುಭವಿ ಹಿರಿಯ ಆಟಗಾರರ ಪ್ರದರ್ಶನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಅಂಶವಾಗಿದೆ ಎಂದು ಮುಖ್ಯ ಕೋಚ್ ಆಂಡಿ ಫ್ಲವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್‌ಸಿಬಿ ಸೋಮವಾರ ಅಯೋಜಿಸಿದ್ದ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭುವಿ ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಒತ್ತಡದಲ್ಲಿಯೂ ಶಾಂತಚಿತ್ತತೆಯಿಂದ ತಂಡಕ್ಕೆ ನೆರವಾಗದಿದ್ದರೆ, ನಮಗೆ ನಿರೀಕ್ಷಿತ ಯಶಸ್ಸು ಸಿಗುತ್ತಿರಲಿಲ್ಲ ಎಂದರು. 2025ರ ಆವೃತ್ತಿಯಲ್ಲಿ 17 ವಿಕೆಟ್ ಕಬಳಿಸಿದ ಭುವನೇಶ್ವರ್, 2026ರಲ್ಲಿ 28 ವಿಕೆಟ್ ಕಬಳಿಸಿದ್ದಾರೆ. ಹ್ಯಾಸಲ್‌ವುಡ್ ಮತ್ತು ಭುವಿ ಮತ್ತು ಕೆಪಿ (ಕೃನಾಲ್ ಪಾಂಡ್ಯ) ಅವರಂಥ ಬೌಲರ್‌ಗಳು ಒತ್ತಡದಲ್ಲಿಯೂ ಶಾಂತವಾಗಿರುತ್ತಾರೆ. ಐಪಿಎಲ್ ಟೂರ್ನಿಯ ಒತ್ತಡವು ವಿಶ್ವಕಪ್‌ನ ನಾಕೌಟ್ ಹಂತ ಅಥವಾ ಆಶಸ್ ಸರಣಿಯಲ್ಲಿ ಅನುಭವಿಸುವಂತೆಯೇ ಇರುತ್ತದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ, ಭುವನೇಶ್ವರ್, ಹ್ಯಾಸಲ್‌ವುಡ್ ಹಾಗೂ ಕೃನಾಲ್ ಪಾಂಡ್ಯ ಅನುಭವ ತಂಡಕ್ಕೆ ಆತ್ಮವಿಶ್ವಾಸ ಜತೆಗೆ ಅಪಾರ ಪ್ರಯೋಜನವನ್ನು ನೀಡಲಿದೆ.
ಡ್ರೆಸ್ಸಿಂಗ್ ಕೋಣೆಯಲ್ಲಿ ಕೆಲ ನುರಿತ ಸಿಬ್ಬಂದಿ ಇರುವುದು ಅದೃಷ್ಟ. ಅವರು, ಆಟಗಾರರ ಮೇಲೆ ಶಾಂತ ಮತ್ತು ಸಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರಬಲ್ಲರು. ಕಳೆದ ವರ್ಷದ ಪ್ರಶಸ್ತಿ ಚೇಸ್‌ನಲ್ಲಿ ಸ್ವಲ್ಪ ಹೆಚ್ಚು ಅಪಾಯ ಮತ್ತು ಅನಿಶ್ಚಿತತೆ ಇತ್ತು. ಕಳೆದ ವರ್ಷ ಟ್ರೋಫಿ ಗೆದ್ದ ನಂತರ, ಈ ವರ್ಷ ಲೀಗ್ ಹಂತದಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ ನಂತರ ತಂಡದ ಆತ್ಮವಿಶ್ವಾಸ ಹೆಚ್ಚಿತು ಎಂದು ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ತಂಡದ ಯಶಸ್ಸಿನ ಹಾದಿ ವಿವರಿಸಿದರು.