ವಿರಾಟ್ ಕೊಹ್ಲಿ ಪ್ರಕಟಿಸಿರುವ ಪ್ಲೇಯಿಂಗ್ ಇಲೆವನ್
- ಮಾರ್ಚ್ 28 ರಿಂದ ಐಪಿಎಲ್ ಆರಂಭ
- ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ತೊಡೆತಟ್ಟಲಿರುವ ಸನ್‌ರೈಸರ್ಸ್
- ವಿರಾಟ್ ಕೊಹ್ಲಿ ಪ್ರಕಟಿಸಿರುವ ಪ್ಲೇಯಿಂಗ್ ಇಲೆವನ್ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಐಪಿಎಲ್ 2026: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಜ್ವರ ಭಾರತದಾದ್ಯಂತ ಆವರಿಸಲಿದ್ದು, ಟಿ-20 ವಿಶ್ವಕಪ್ ಮುಗಿದ ಹಿನ್ನಲೆ ಪ್ರಪಂಚದ ಆಟಗಾರರು ಈಗ ಭಾರತದತ್ತ ಮುಖ ಮಾಡಲಿದ್ದಾರೆ. ಮಾರ್ಚ್ 28 ರಿಂದ ಆರಂಭವಾಗಲಿರುವ ಈ ಕ್ರಿಕೆಟ್ ಹಬ್ಬವನ್ನು ಕಣ್ಣುಂಬಿಕೊಳ್ಳಲು ಪ್ರತಿ ಕ್ರಿಕೆಟ್ ಪ್ರೇಮಿ ತುದಿಗಾಲಿನಲ್ಲಿ ನಿಂತಿದ್ದಾನೆ ಎಂದರೆ ತಪ್ಪಾಗಲಾರದು.
ಮಾರ್ಚ್ 28 ರಂದು ಟೂರ್ನಿಯ ಮೊದಲ ಪಂದ್ಯದಲ್ಲಿ 2025 ರ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಡಲಿವೆ.
ಈ ಹಿನ್ನಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ ಹಾಗೂ ಬಹುಕಾಲ ಈ ತಂಡವನ್ನು ಮುನ್ನಡೆಸಿದ್ದ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಲ್ ಟೈಮ್ ಬೆಸ್ಟ್ ಆರ್.ಸಿ.ಬಿ ಪ್ಲೇಯಿಂಗ್ ಇಲೆವನ್(Virat Kohli All Time RCB XI) ನ್ನು ಹಂಚಿಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಟೀಮ್ನಲ್ಲಿ ಯಾರ್ಯಾರಿದ್ದಾರೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ತಮ್ಮ ಅಧಿಕೃತ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ವಿರಾಟ್ ಕೊಹ್ಲಿ ಅವರಿಗೆ ತಮ್ಮ ಸರ್ವ ಕಾಲಿಕ ಬೆಸ್ಟ್ ಪ್ಲೇಯಿಂಗ್ ಇಲೆವನ್ ತಂಡವನ್ನು ತಿಳಿಸುವಂತೆ ನಿರೂಪಕರು ಕೇಳುತ್ತಾರೆ.
ಈ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಕೊಹ್ಲಿ, ತಮ್ಮ ತಂಡದ ಓಪನಿಂಗ್ ಬ್ಯಾಟ್ಸ್ಮನ್ಗಳಾಗಿ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ ಮತ್ತು ದಕ್ಷಿಣಾ ಆಫ್ರಿಕಾ ತಂಡದ ಸರ್ವಕಾಲಿಕ ಆಲ್ರೌಂಡರ್ ಎಬಿ ಡಿವಿಲಿಯರ್ಸ್ ಅವರನ್ನು ಆರಿಸಿಕೊಂಡಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ತಮ್ಮನ್ನೇ ಆಯ್ಕೆ ಮಾಡಿಕೊಂಡಿರುವ ವಿರಾಟ್ ಕೊಹ್ಲಿ, ನಾಲ್ಕನೇ ಸ್ಥಾನಕ್ಕೆ ಕನ್ನಡಿಗ ಕೆ. ಎಲ್. ರಾಹುಲ್ನ್ನು ಆಯ್ಕೆಮಾಡಿದ್ದಾರೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ಮನ್ಗಳಾದ ರಜತ್ ಪಟಿದಾರ್ ಮತ್ತು ದಿನೇಶ್ ಕಾರ್ತಿಕ್ರನ್ನು ಆರಿಸಿಕೊಂಡಿದ್ದಾರೆ.
ತಂಡದ ಬೌಲರ್ಗಳಾಗಿ ಹರ್ಷಲ್ ಪಟೇಲ್, ಅನಿಲ್ ಕುಂಬ್ಳೆ, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ವಿರಾಟ್ ಆರಿಸಿಕೊಂಡಿದ್ದಾರೆ.
ನೆಟ್ಟಿಗರು ಏನಂತಿದ್ದಾರೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಮೆಂಟ್ಗಳ ಸುರಿಮಳೆಯೇ ಹರಿದುಬಂದಿದ್ದು, ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಹೇಳಿದ ತಂಡವೇನಾದರೂ ಮೈದಾನಕ್ಕೆ ಇಳಿದ್ದಿದ್ದರೆ, ಕೇವಲ ಒಂದು ಬಾರಿಯಲ್ಲ ಪ್ರತಿ ಬಾರಿ ಕಪ್ ಅರ್ಸಿಬಿಯದ್ದೇ ಆಗುತ್ತಿತ್ತು ಎಂದು ಒಬ್ಬರು ಹೇಳಿದರೆ, ಇವರು ಹೇಳಿದ ತಂಡ ಒಮ್ಮೆಯಾದರೂ ಕಣಕ್ಕೀಳಿದು ಕನಿಷ್ಟ ಒಂದು ಪಂದ್ಯವನ್ನಾದರೂ ಆಡಬೇಕು ಎಂದು ಮತ್ತೊಬ್ಬರು ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ,(ಏಜನ್ಸೀಸ್).