ಅಫ್ರಿದಿ-ವೈಭವ್ ಮಧ್ಯೆ ಈ ಒಂದು ಹೋಲಿಕೆ ಇದೆಯಂತೆ: ಭಾರಿ ಚರ್ಚೆ ಹುಟ್ಟುಹಾಕಿದ ಪಾಕ್​​ ಮಾಜಿ ಕ್ರಿಕೆಟಿಗನ ಟ್ವೀಟ್​! Vaibhav Sooryavanshi  
ಐಪಿಎಲ್

ಅಫ್ರಿದಿ-ವೈಭವ್ ಮಧ್ಯೆ ಈ ಒಂದು ಹೋಲಿಕೆ ಇದೆಯಂತೆ: ಭಾರಿ ಚರ್ಚೆ ಹುಟ್ಟುಹಾಕಿದ ಪಾಕ್​​ ಮಾಜಿ ಕ್ರಿಕೆಟಿಗನ ಟ್ವೀಟ್​! Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್​ ಇದೀಗ ಗಡಿ ದಾಟಿ ಪಾಕಿಸ್ತಾನಕ್ಕೂ ತಲುಪಿದೆ
  • ಪಾಕಿಸ್ತಾನ ತಂಡದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್ ವೈಭವ್​ರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ
  • ವೈಭವ್ ಅವರ ನಿರ್ಭೀತ ಬ್ಯಾಟಿಂಗ್ ಶೈಲಿಯನ್ನು ಪಾಕ್​ ಮಾಜಿ ಕ್ರಿಕೆಟರ್​ ಶಾಹಿದ್ ಅಫ್ರಿದಿಗೆ ಹೋಲಿಸಿದ್ದಾರೆ
  • ಈ ಹೋಲಿಕೆಯನ್ನು ಟೀಕಿಸಿರುವ ನೆಟ್ಟಿಗರು ಇದೊಂದು ಹುಚ್ಚು ಹೋಲಿಕೆ ಎಂದು ಜಾಲತಾಣಗಳಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ
Vaibhav Sooryavanshi : ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್‌ಗಳ ನೆರವಿನಿಂದ 97 ರನ್ ಸಿಡಿಸಿ ರನ್​ ಸುನಾಮಿ ಸೃಷ್ಟಿಸಿದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಬ್ಬರ ಇದೀಗ ಗಡಿ ದಾಟಿ ಪಾಕಿಸ್ತಾನಕ್ಕೂ ತಲುಪಿದೆ. ಪ್ಯಾಟ್ ಕಮಿನ್ಸ್ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನೂ ಲೆಕ್ಕಿಸದೆ ಈ ಅದ್ಭುತ ಬಾಲಕ ಆಡಿದ ಸ್ಫೋಟಕ ಶೈಲಿಯನ್ನು ನೋಡಿ ಇಡೀ ಕ್ರಿಕೆಟ್ ಜಗತ್ತೇ ಸದ್ಯ ಮೂಗಿನ ಮೇಲೆ ಬೆರಳಿಟ್ಟಿದ್ದು, ಈತನ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಚರ್ಚೆ ಎಲ್ಲೆಡೆ ಜೋರಾಗಿ ಸಾಗಿದೆ.
ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ತೋರಿದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ಕಂಡು ಪಾಕಿಸ್ತಾನ ತಂಡದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್ ಸಾಮಾಜಿಕ ಜಾಲತಾಣದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯುವ ಸೆನ್ಸೇಷನ್ ವೈಭವ್ ಅವರ ನಿರ್ಭೀತ ಬ್ಯಾಟಿಂಗ್ ಶೈಲಿಯನ್ನು ಅವರು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ಅವರ ಆರಂಭಿಕ ದಿನಗಳ ಆಟಕ್ಕೆ ಹೋಲಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೊಹಮ್ಮದ್ ಯೂಸುಫ್, "15 ವರ್ಷದ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ನನಗೆ ಯುವ ದಿನಗಳ ಶಾಹಿದ್ ಅಫ್ರಿದಿಯನ್ನು ನೆನಪಿಸುತ್ತಿದ್ದಾನೆ. ಆತನಲ್ಲಿ ಯಾವುದೇ ಭಯವಿಲ್ಲ, ಆಟ ಅತ್ಯಂತ ವಿನಾಶಕಾರಿಯಾಗಿದೆ ಮತ್ತು ಆತ ಅಪಾರ ಸಾಮರ್ಥ್ಯದಿಂದ ತುಂಬಿದ್ದಾನೆ. ಕ್ರಿಕೆಟ್‌ನ ಭವಿಷ್ಯ ಇಲ್ಲಿದೆ!" ಎಂದು ಬರೆದುಕೊಂಡಿದ್ದಾರೆ. ಯೂಸುಫ್ ಅವರ ಈ ಪೋಸ್ಟ್ ನೋಡಿದ ಕ್ರಿಕೆಟ್ ಅಭಿಮಾನಿಗಳು "ಇದೊಂದು ಹುಚ್ಚು ಹೋಲಿಕೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಪವರ್-ಹಿಟ್ಟರ್ ಎಂದು ಹೆಸರಾಗಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಕೇವಲ 16ನೇ ವಯಸ್ಸಿನಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಅತಿ ವೇಗದ ಏಕದಿನ ಶತಕ ಸಿಡಿಸಿ ಜಗತ್ತನ್ನೇ ಬೆರಗುಗೊಳಿಸಿದ್ದರು. ಇದೀಗ ಅಂತಹದ್ದೇ ಆಕ್ರಮಣಕಾರಿ ಹಾಗೂ ನಿರ್ಭೀತ ಆಟ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಲ್ಲೂ ಎದ್ದು ಕಾಣಿಸುತ್ತಿದೆ. ಮುಲ್ಲನ್‌ಪುರ ಮೈದಾನದಲ್ಲಿ ದಿಗ್ಗಜ ಬೌಲರ್‌ಗಳನ್ನೇ ನಡುಗಿಸಿದ ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯು ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರಿಗೆ ಅಫ್ರಿದಿಯ ಆರಂಭಿಕ ದಿನಗಳನ್ನು ನೆನಪಿಸುತ್ತಿದೆಯಾದರೂ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಈ ಹೋಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಫ್ರಿದಿಗಿಂತ ವೈಭವ್​ ಸಾಕಷ್ಟು ಮುಂದಿದ್ದಾರೆ ಮತ್ತು ಈ ಹೋಲಿಕೆಯಲ್ಲಿ ಯಾವುದೇ ಅರ್ಥವೇ ಇಲ್ಲ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ.
ಈ ಐತಿಹಾಸಿಕ ಇನ್ನಿಂಗ್ಸ್‌ನ ಬಳಿಕ ಇಡೀ ವಿಶ್ವದ ಕ್ರಿಕೆಟ್ ದಿಗ್ಗಜರು 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರತಿಭೆಗೆ ತಲೆಬಾಗುತ್ತಿದ್ದಾರೆ. ಈ ಹಿಂದೆ, ಟಿ20 ಕ್ರಿಕೆಟ್‌ನ 'ಯೂನಿವರ್ಸ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್ ಸಹ ವೈಭವ್‌ನ ಸಿಕ್ಸರ್‌ಗಳ ಸುರಿಮಳೆಯನ್ನು ಕಂಡು, ಈತನನ್ನು ಕ್ರಿಕೆಟ್ ಜಗತ್ತಿನ 'ಹೊಸ ಸಿಕ್ಸ್ ಮೆಷಿನ್' ಮತ್ತು 'ಯೂನಿವರ್ಸಲ್ ಬೇಬಿ ಬಾಸ್' ಎಂದು ಮುಕ್ತಕಂಠದಿಂದ ಕೊಂಡಾಡಿದ್ದರು. ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ಕೂಡ ಶ್ಲಾಘಿಸಿರುವುದರಿಂದ, ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ಗಳು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಾಧಿಸಲಾಗದ ಅಪಾರ ಗುರುತಿಸುವಿಕೆ ಮತ್ತು ಮನ್ನಣೆಯನ್ನು ವೈಭವ್ ಕೇವಲ 15ನೇ ವಯಸ್ಸಿನಲ್ಲೇ ಸಂಪಾದಿಸಿರುವುದು ಸ್ಪಷ್ಟವಾಗಿದೆ.
ಇನ್ನು ವೈಭವ್ ಆಟದ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕ್ರೀಡಾ ವಿಶ್ಲೇಷಕರು ಈ ಬಾಲಕನ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಯುವ ಬ್ಯಾಟರ್ ಪಾಕಿಸ್ತಾನದ ಬೌಲರ್‌ಗಳ ಪಾಲಿಗೆ ಅತ್ಯಂತ ದೊಡ್ಡ ದುಸ್ವಪ್ನವಾಗಿ ಕಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಕ್ರಿಕೆಟ್‌ನಲ್ಲಿ ಸದ್ಯ ಸೃಷ್ಟಿಯಾಗಿರುವ ಈ ವೈಭವ್ ಕ್ರೇಜ್ ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದೆ, (ಏಜೆನ್ಸೀಸ್​).