ಐಪಿಎಲ್​ನಲ್ಲಿ ಅಬ್ಬರಿಸಿದ ವೈಭವ್ ಈಗ ಏಕದಿನ ಮಾದರಿಯಲ್ಲಿ ಫೇಲ್​ ಆಗಿದ್ದೇಕೆ? ಕೊನೆಗೂ ಸಿಕ್ತು ಅಚ್ಚರಿ ಉತ್ತರ! Vaibhav Sooryavanshi  
ಐಪಿಎಲ್

ಐಪಿಎಲ್​ನಲ್ಲಿ ಅಬ್ಬರಿಸಿದ ವೈಭವ್ ಈಗ ಏಕದಿನ ಮಾದರಿಯಲ್ಲಿ ಫೇಲ್​ ಆಗಿದ್ದೇಕೆ? ಕೊನೆಗೂ ಸಿಕ್ತು ಅಚ್ಚರಿ ಉತ್ತರ! Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ವೈಭವ್​ ಸೂರ್ಯವಂಶಿ ಇದೀಗ ಏಕದಿನ ಮಾದರಿಯಲ್ಲಿ ಫೇಲ್​
  • ಬರೋಬ್ಬರಿ 237.31 ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡ ವೈಭವ್​
  • ಇದೀಗ ತ್ರೀಕೋನ ಏಕದಿನ ಸರಣಿಯಲ್ಲಿ ಇದುವರೆಗೂ ಆಡಿದ ನಾಲ್ಕೂ ಪಂದ್ಯಗಳಲ್ಲಿ ವೈಭವ್​ ವಿಫಲ
  • ಹಿರಿಯರ ತಂಡಕ್ಕೆ ಬಂದಾಗ ಯುವ ಆಟಗಾರರು ಏಕೆ ವಿಫಲರಾಗುತ್ತಾರೆ ಎಂಬುದಕ್ಕೆ ಉತ್ತರ ಕೊಟ್ಟ ಸೈಕಾಲಜಿಸ್ಟ್​
Vaibhav Sooryavanshi : ಕಳೆದ ತಿಂಗಳು ಮುಕ್ತಾಯವಾದ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಯುವ ಪ್ರತಿಭೆ ವೈಭವ್​ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಬರೋಬ್ಬರಿ 237.31 ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ 15 ವರ್ಷದ ವಂಡರ್​ ಕಿಡ್​ಗೆ​ ಮುಂದಿನ ದಿನಗಳಲ್ಲಿ ಮೈದಾನದಲ್ಲಿ ನಡೆಯುವ 'ಸ್ಲೆಡ್ಜಿಂಗ್' ದೊಡ್ಡ ಸವಾಲಾಗಲಿದೆ ಎಂದು ಕ್ರೀಡಾ ತಜ್ಞರು ಎಚ್ಚರಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಇತ್ತೀಚಿಗೆ ನಡೆದ ಇಂಡಿಯಾ 'ಎ' ಪಂದ್ಯದಲ್ಲಿ ಎದುರಾಳಿ ಆಟಗಾರನ ಸ್ಲೆಡ್ಜಿಂಗ್‌ಗೆ ತಾಳ್ಮೆ ಕಳೆದುಕೊಂಡು ವೈಭವ್ ಆಕ್ರೋಶ ಹೊರಹಾಕಿದ ಘಟನೆಯನ್ನು ನೆನಪಿಸಿರುವ ತಜ್ಞರು, ಅವರಿಗೆ "ಪರಿಸ್ಥಿತಿ ನಿಭಾಯಿಸುವ" ತುರ್ತು ತರಬೇತಿಯ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸಿದ್ಧ ಕ್ರೀಡಾ ಮನಶ್ಶಾಸ್ತ್ರಜ್ಞ ಡಾ. ಸ್ವರೂಪ್ ಸವನೂರ್ ಅವರ ಪ್ರಕಾರ, ಮುಂಬರುವ ದಿನಗಳಲ್ಲಿ ಎದುರಾಳಿ ತಂಡಗಳು ವೈಭವ್ ಅವರ ಬೆಳವಣಿಗೆಗೆ ಅಡ್ಡಿಪಡಿಸಲು ಮಾನಸಿಕವಾಗಿ ಕುಗ್ಗಿಸುವ ಇಂತಹ ತಂತ್ರಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ, ಈ ಸ್ಲೆಡ್ಜಿಂಗ್​ ಅನ್ನು ಬಹಳ ಜಾಣ್ಮೆಯಿಂದ ಎದುರಿಸಬೇಕಿದೆ.
ಪ್ರಸಿದ್ಧ ಕ್ರೀಡಾ ಮನಶ್ಶಾಸ್ತ್ರಜ್ಞ ಡಾ. ಸ್ವರೂಪ್ ಸವನೂರ್ ಅವರು ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದರು. ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಾನು ವೈಭವ್ ಜೊತೆ ಕೆಲಸ ಮಾಡಿದ್ದೇನೆ. ಆತ ನಿಜಕ್ಕೂ ಅತ್ಯಂತ ಶಾಂತ ಸ್ವಭಾವದ ಹುಡುಗ. ಬಿಸಿಸಿಐ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಈಗಾಗಲೇ ಇಂತಹ ಯುವ ಆಟಗಾರರ ಮಾನಸಿಕ ಗುಣಲಕ್ಷಣಗಳನ್ನು ಶಿಬಿರಗಳ ಮೂಲಕ ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಅಂಡರ್-19 ಮಟ್ಟದಲ್ಲಿ ಅದ್ಭುತವಾಗಿ ಮಿಂಚುವ ಎಷ್ಟೋ ಆಟಗಾರರು ಹಿರಿಯರ ಮಟ್ಟಕ್ಕೆ ಬಂದಾಗ ಏಕೆ ವಿಫಲರಾಗುತ್ತಾರೆ ಎಂಬುದರ ಬಗ್ಗೆ ಸ್ವರೂಪ್ ಸವನೂರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಪ್ರತಿಭೆ, ತಂತ್ರಗಾರಿಕೆ ಹಾಗೂ ಪರಿಶ್ರಮವಿದ್ದರೂ ಸಹ, ಮೈದಾನದಲ್ಲಿ ಮಾತ್ರವಲ್ಲದೆ ಒತ್ತಡದ ಸಂದರ್ಭಗಳನ್ನು ಜಾಣ್ಮೆಯಿಂದ ಎದುರಿಸುವ 'ಪರಿಸ್ಥಿತಿಗೆ ತಕ್ಕ ಬುದ್ಧಿವಂತಿಕೆ' ಕೊರತೆಯಿಂದಾಗಿ ಅನೇಕ ಯುವ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಸ್ವರೂಪ್ ಸವನೂರ್ ಅವರು ಸ್ಪಷ್ಟಪಡಿಸಿದ್ದಾರೆ.
ಟೀಮ್ ಇಂಡಿಯಾ ಸದ್ಯ ಪ್ರಮುಖ ಬದಲಾವಣೆಯ ಹಂತದಲ್ಲಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾರಂತಹ ದಿಗ್ಗಜ ಆಟಗಾರರ ವಿದಾಯದ ಬಳಿಕ ಅವರ ಸ್ಥಾನವನ್ನು ತುಂಬಲು ಯುವ ಆಟಗಾರರು ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅತಿ ಬೇಗನೆ ದಾಖಲೆಗಳನ್ನು ಬರೆಯಬೇಕೆಂಬ ತರಾತುರಿ ಯುವ ಆಟಗಾರರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಸವಾಲಿನ ಸಮಯದಲ್ಲಿ ಬಿಸಿಸಿಐ ಮತ್ತು ತಂಡದ ಮ್ಯಾನೇಜ್‌ಮೆಂಟ್ ಯುವ ಆಟಗಾರರ ಬೆನ್ನಿಗೆ ನಿಂತು, ನಾವಿದ್ದೇವೆ, ಯಾವುದೇ ಆತುರ ಬೇಡ ಎಂಬ ಭರವಸೆ ನೀಡುವ ಅಗತ್ಯವಿದೆ. ಕ್ರೀಡಾ ವಲಯದಲ್ಲಿ ಎದುರಾಗುವ ಒತ್ತಡ ಹಾಗೂ ಆತಂಕವನ್ನು ಒಂದು ದೊಡ್ಡ ಸಮಸ್ಯೆಯಾಗಿ ನೋಡದೆ, ಅದು ಆಟದ ಒಂದು ಭಾಗ ಎಂದು ಪರಿಗಣಿಸಿ, ಅದನ್ನು ಎದುರಿಸಲು ಮಾನಸಿಕ ಸಿದ್ಧತೆಯನ್ನು ಆಟಗಾರರ ದೈನಂದಿನ ದಿನಚರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಕ್ರಿಕೆಟ್​ ತಜ್ಞರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).