RRvsSRH | ವೈಭವ್, ಜುರೆಲ್ ಸ್ಫೋಟಕ ಬ್ಯಾಟಿಂಗ್
RRvsSRH: 19ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಎಲಿಮಿನೇಟರ್ ಪಂದ್ಯದಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ 97 (29) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಆದರೆ, ಕಮ್ಮಿನ್ಸ್ ನಿರ್ಧಾರವನ್ನು ಸಂಪೂರ್ಣವಾಗಿ ತಲೆಕೆಳಗೆ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರರು ಅಬ್ಬರದ ಆರಂಭ ನೀಡಿದರು. ಅದರಲ್ಲೂ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ ಭರ್ಜರಿ 97 ರನ್ ಚಚ್ಚಿ ಶತಕದ ಅಂಚಿನಲ್ಲಿ ಎಡವಿದರು. ಅವರ ಈ ಇನಿಂಗ್ಸ್‌ನಲ್ಲಿ 12 ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು.
ಕ್ರಿಸ್ ಗೇಲ್ ದಾಖಲೆ ಉಡೀಸ್!
ಈ ಪಂದ್ಯದಲ್ಲಿ 12 ಸಿಕ್ಸರ್ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಹಿಂದೆ 2012ರ ಐಪಿಎಲ್ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ಕ್ರಿಸ್ ಗೇಲ್ 59 ಸಿಕ್ಸರ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇಂದು ವೈಭವ್ ತಮ್ಮ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 65ಕ್ಕೆ ಏರಿಸುವ ಮೂಲಕ ಗೇಲ್ರ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
ವೈಭವ್ ಅವರಿಗೆ ಉತ್ತಮ ಸಾಥ್ ನೀಡಿದ ಧ್ರುವ್ ಜುರೆಲ್ ಕೇವಲ 21 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಮೊತ್ತ 240ರ ಗಡಿ ದಾಟಲು ಪ್ರಮುಖ ಕಾರಣರಾದರು. ಸದ್ಯ ಹೈದರಾಬಾದ್ ಗೆಲುವಿಗೆ 244 ರನ್‌ಗಳ ಕಠಿಣ ಗುರಿ ಎದುರಾಗಿದ್ದು, ಪಂದ್ಯ ಭಾರೀ ರೋಚಕತೆ ಮೂಡಿಸಿದೆ(ಏಜೆನ್ಸೀಸ್).