RCB ಮ್ಯಾಚ್ ನೋಡಲು 6,880 KM ಹಾರಿ ಬಂದ UK ಸುಂದರಿ: ಹೋಗುವಾಗ ಭಾರತಕ್ಕೆ ಬರೆದ ಹಾರ್ಟ್ ಟಚಿಂಗ್ ಲವ್ ಲೆಟರ್ ವೈರಲ್! 
ಐಪಿಎಲ್

RCB ಮ್ಯಾಚ್ ನೋಡಲು 6,880 KM ಹಾರಿ ಬಂದ UK ಸುಂದರಿ: ಹೋಗುವಾಗ ಭಾರತಕ್ಕೆ ಬರೆದ ಹಾರ್ಟ್ ಟಚಿಂಗ್ ಲವ್ ಲೆಟರ್ ವೈರಲ್!

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಫೈನಲ್​ ಪಂದ್ಯ ವೀಕ್ಷಿಸಲು ದೂರದ ಯುನೈಟೆಡ್​ ಕಿಂಗ್​ಡಮ್​ನಿಂದ ಭಾರತಕ್ಕೆ ಪ್ರವಾಸ
  • ಕೇವಲ ಮೂರು ದಿನಗಳ ಕಿರು ಪ್ರವಾಸ ಹಮ್ಮಿಕೊಂಡಿದ್ದ ಆರ್​ಸಿಬಿ ಅಭಿಮಾನಿ ಎರಿಕಾ ಮಾರಿಸ್
  • ಭಾರತದಲ್ಲಿ ಸಿಕ್ಕ ಅಪಾರ ಪ್ರೀತಿ, ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಜನರ ಆತಿಥ್ಯಕ್ಕೆ ಎರಿಕಾ ಫಿದಾ
  • ಭಾರತಕ್ಕೆ ಬಂದಿದ್ದ ರೋಚಕ ಅನುಭವವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ಯುಕೆಯ ಆರ್​ಸಿಬಿ ಅಭಿಮಾನಿ
RCB : ಐಪಿಎಲ್​ ಫೈನಲ್​ ಪಂದ್ಯ ವೀಕ್ಷಿಸಲು ದೂರದ ಯುನೈಟೆಡ್​ ಕಿಂಗ್​ಡಮ್​ನಿಂದ ಭಾರತಕ್ಕೆ ಕೇವಲ ಮೂರು ದಿನಗಳ ಕಿರು ಪ್ರವಾಸ ಹಮ್ಮಿಕೊಂಡಿದ್ದ ಆರ್​ಸಿಬಿ ಅಭಿಮಾನಿ ಎರಿಕಾ ಮಾರಿಸ್, ಅದ್ಭುತ ಕ್ರಿಕೆಟ್ ಪಂದ್ಯವನ್ನು ಮಾತ್ರ ಕಣ್ತುಂಬಿಕೊಳ್ಳಬಹುದು ಎಂದು ಆರಂಭದಲ್ಲಿ ನಿರೀಕ್ಷೆ ಮಾಡಿದ್ದರು. ಆದರೆ, ಅವರು ಮರಳಿ ತಮ್ಮ ತವರಿಗೆ ಹೋಗುವಾಗ ಕ್ರಿಕೆಟ್‌ಗಿಂತ ಹೆಚ್ಚಾಗಿ ಬೇರೊಂದು ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅದೇನೆಂದರೆ ತಾವು ಹಿಂದೆಂದೂ ಭೇಟಿ ನೀಡದ ಈ ಅಪರಿಚಿತ ದೇಶದಲ್ಲಿ (ಭಾರತ) ಅಪಾರ ಪ್ರೀತಿಯನ್ನು ನೀಡಿ, ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಇಲ್ಲಿನ ಅಪರಿಚಿತ ಜನರ ಆತಿಥ್ಯದ ಬಗ್ಗೆ ಎರಿಕಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಹರ್ಟ್‌ಫೋರ್ಡ್‌ಶೈರ್‌ನ ಕ್ರಿಕೆಟ್ ಪ್ರೇಮಿಯಾದ ಎರಿಕಾ ಮಾರಿಸ್, ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟವನ್ನು ಕಣ್ಣುಂಬಿಕೊಳ್ಳಲು ಬರೊಬ್ಬರಿ 4,275 ಮೈಲಿ (ಸುಮಾರು 6,880 ಕಿ.ಮೀ) ದೂರ ಪ್ರಯಾಣಿಸಿ ಭಾರತಕ್ಕೆ ಬಂದಿದ್ದ ರೋಚಕ ಅನುಭವವನ್ನು ಎಕ್ಸ್​ ( ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾವು ಬಂದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಐಪಿಎಲ್ (IPL) ಮುಕುಟ ಮುಡಿಗೇರಿಸಿಕೊಂಡಿದ್ದು ಅವರ ಈ ಪ್ರವಾಸದ ನೆನಪನ್ನು ಮತ್ತಷ್ಟು ವಿಶೇಷವಾಗಿಸಿದೆ. ಕೇವಲ 3 ದಿನಗಳ ಹಿಂದೆ ನಾನು ಒಂಟಿಯಾಗಿ, ಕೇವಲ 72 ಗಂಟೆಗಳ ಕಾಲಾವಧಿಗಾಗಿ 4,275 ಮೈಲಿ ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದ್ದೆ ಎಂದು ಬರೆದುಕೊಂಡಿರುವ ಅವರು, ಈ ಕಿರು ಪ್ರವಾಸವು ತೀವ್ರ ಆಯಾಸದ ವಿಮಾನ ಪ್ರಯಾಣ, ಅತ್ಯಂತ ಕಡಿಮೆ ನಿದ್ರೆ ಹಾಗೂ ಹಿಂದೆಂದೂ ನೋಡಿರದ ದೇಶದ ಹೊಸ ಪರಿಸರವನ್ನು ನಿಭಾಯಿಸುವ ಸವಾಲುಗಳಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಪ್ರವಾಸದ ಅವಧಿಯಲ್ಲಿ ತಮಗೆ ಎದುರಾದ ಪ್ರತಿ ಹಂತದಲ್ಲೂ ಅಪರಿಚಿತರು ಹೇಗೆ ಸಹಾಯ ಮಾಡಲು ಮುಂದೆ ಬಂದರು ಎಂಬುದನ್ನು ಎರಿಕಾ ಮಾರಿಸ್ ನೆನಪಿಸಿಕೊಂಡಿದ್ದಾರೆ. ತಮ್ಮ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರಿಸುವುದರಿಂದ ಹಿಡಿದು, ಉತ್ತಮ ಸ್ಥಳಗಳ ಶಿಫಾರಸು ಮಾಡುವುದು ಮತ್ತು ತಾವು ತಲುಪಬೇಕಾದ ಸರಿಯಾದ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುವವರೆಗೆ ಪ್ರತಿಯೊಬ್ಬರೂ ಸಹಾಯ ಮಾಡಿದರು ಎಂದು ಹೇಳಿದ್ದಾರೆ ಎರಿಕಾ.
ಅಪರಿಚಿತ ದೇಶದಲ್ಲಿ ತಮಗೆ ಮೊದಲ ಬಾರಿಗೆ ಎದುರಾಗಬಹುದಾಗಿದ್ದ ತೀವ್ರ ಗೊಂದಲ ಹಾಗೂ ಆತಂಕದ ವಾತಾವರಣವನ್ನು ಇಲ್ಲಿನ ಜನರು ಅತ್ಯಂತ ಆರಾಮದಾಯಕ ಮತ್ತು ಆತ್ಮೀಯ ಅನುಭವವನ್ನಾಗಿ ಬದಲಾಯಿಸಿದರು ಎಂದು ಎರಿಕಾ ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ವಿಶೇಷವಾಗಿ ತಮಗೆ ಪಂದ್ಯದ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಲು ಸಹಾಯ ಮಾಡಿದ ಹಾಗೂ ಇಡೀ ಪ್ರವಾಸದ ಉದ್ದಕ್ಕೂ ತಮ್ಮನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡ ಇಬ್ಬರು ಆರ್‌ಸಿಬಿ (RCB) ಅಭಿಮಾನಿಗಳಿಗೆ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇಬ್ಬರು ಅಭಿಮಾನಿಗಳಲ್ಲಿ ಒಬ್ಬ ಅಭಿಮಾನಿ, ತನ್ನ ಪತ್ನಿಯೊಂದಿಗೆ ಎರಿಕಾ ಅವರನ್ನು ತಮ್ಮ ಮನೆಗೆ ಮಧ್ಯಾಹ್ನದ ಊಟಕ್ಕೂ ಸಹ ಆಹ್ವಾನಿಸಿದ್ದರು. ಈ ಅದ್ಭುತ ಕ್ಷಣಗಳನ್ನು ಹಂಚಿಕೊಂಡಿರುವ ಅವರು, ನಿಮ್ಮಂತಹ ಜನರೇ ನನ್ನ ಈ ಇಡೀ ಪ್ರವಾಸದ ಅನುಭವವನ್ನು ಇಷ್ಟು ಅದ್ಭುತವಾಗಿಸಿದ್ದು, ನಾನು ನಿಮಗೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಖಂಡಿತವಾಗಿಯೂ, ಭಾರತದ ಕ್ರಿಕೆಟ್ ವಾತಾವರಣವು ನಿರೀಕ್ಷಿಸಿದ್ದಕ್ಕಿಂತಲೂ ಮಿಗಿಲಾದ ರಂಜನೆಯನ್ನು ನೀಡಿತ್ತು. ಆರ್‌ಸಿಬಿ ತಂಡದ ಸುತ್ತಲಿನ ಕ್ರಿಕೆಟ್ ಕ್ರೇಜ್ ಅನ್ನು ಎರಿಕಾ ಅವರು ತಾವು ಹಿಂದೆಂದೂ ಅನುಭವಿಸದ ಒಂದು ಅಭೂತಪೂರ್ವ ಲೋಕ ಎಂದು ಬಣ್ಣಿಸಿದ್ದಾರೆ. ಆರ್‌ಸಿಬಿ ಸುತ್ತಲಿನ ಆ ಗದ್ದಲ, ಜನರ ಉತ್ಸಾಹ, ಕ್ರೀಡಾಂಗಣದ ಬಣ್ಣ ಹಾಗೂ ಅಲ್ಲಿನ ಅದ್ಭುತ ಶಕ್ತಿ... ಅದನ್ನು ನೋಡಿದಾಗ ನನಗೊಂದು ಕ್ರೀಡೆಯನ್ನು ವೀಕ್ಷಿಸುತ್ತಿರುವಂತೆ ಅನಿಸಲೇ ಇಲ್ಲ. ಬದಲಿಗೆ ಜನರು ನಿಜವಾಗಿಯೂ ಉಸಿರಾಡುವ ಮತ್ತು ಬದುಕುವ ಒಂದು ದೊಡ್ಡ ಸಂಸ್ಕೃತಿಯ ಭಾಗವಾಗಿ ನಾನು ಇದ್ದೇನೆ ಎಂದು ಅನಿಸಿತು ಎಂದು ಆರ್​ಸಿಬಿ ಕ್ರಿಕೆಟ್ ಅಭಿಮಾನಿಗಳ ಹುಚ್ಚುಚ್ಚು ಪ್ರೀತಿಯನ್ನು ಕೊಂಡಾಡಿದ್ದಾರೆ.
ನಾನು ಕೇವಲ ಒಂದು ಹೊಸ ಅನುಭವವನ್ನು ಹುಡುಕಿಕೊಂಡು ಅಲ್ಲಿಗೆ ಹೋಗಿದ್ದೆ. ಆದರೆ ಮರಳಿ ಬರುವಾಗ ನನ್ನದೇ ಒಂದು ಭಾಗವನ್ನು ಅಲ್ಲೇ ಬಿಟ್ಟು ಬಂದಂತೆ ಭಾಸವಾಗುತ್ತಿದೆ ಎಂದು ಬರೆದಿರುವ ಅವರು, ಭಾರತೀಯ ಓದುಗರ ಹೃದಯ ಗೆಲ್ಲುವಂತಹ ಒಂದು ಸುಂದರ ಭರವಸೆಯೊಂದಿಗೆ ತಮ್ಮ ಪೋಸ್ಟ್ ಅನ್ನು ಮುಗಿಸಿದ್ದಾರೆ. ಅದೇನಂದರೆ "ಇದು ಬೈ ಬೈ ಅಲ್ಲ ಇಂಡಿಯಾ, ಫಿರ್ ಮಿಲೇಂಗೆ (ಮತ್ತೆ ಸಿಗೋಣ)". ಸದ್ಯ ಕ್ರಿಕೆಟ್ ಮೇಲಿನ ಅವರ ಈ ಅಪಾರ ಭಕ್ತಿ ಮತ್ತು ಭಾರತದಲ್ಲಿ ಅವರಿಗೆ ಸಿಕ್ಕ ಮರೆಯಲಾಗದ ಆತಿಥ್ಯದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ನೆಟ್ಟಿಗರ ಹೃದಯ ಗೆಲ್ಲುತ್ತಿದೆ, (ಏಜೆನ್ಸೀಸ್​).