ಕೊಹ್ಲಿ ಜತೆಗಿನ ಹ್ಯಾಂಡ್‌ಶೇಕ್ ವಿವಾದದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ನಿಗೂಢ ಪೋಸ್ಟ್ ಹಂಚಿಕೊಂಡ ಹೆಡ್! Virat Kohli  
ಐಪಿಎಲ್

ಕೊಹ್ಲಿ ಜತೆಗಿನ ಹ್ಯಾಂಡ್‌ಶೇಕ್ ವಿವಾದದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ನಿಗೂಢ ಪೋಸ್ಟ್ ಹಂಚಿಕೊಂಡ ಹೆಡ್! Virat Kohli

ಪ್ರಮುಖ ಮುಖ್ಯಾಂಶಗಳು

  • ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾದ ಎಸ್​ಆರ್​ಎಚ್​ ಹಾಗೂ ಆರ್​ಸಿಬಿ ನಡುವಿನ ಐಪಿಎಲ್​ ಪಂದ್ಯ
  • ಟ್ರಾವಿಸ್ ಹೆಡ್ ಅವರೊಂದಿಗೆ ಕೈಕುಲುಕಲು ನಿರಾಕರಿಸುವ ಮೂಲಕ ಹೊಸ ವಿವಾದಕ್ಕೆ ವಿರಾಟ್​ ಕೊಹ್ಲಿ ನಾಂದಿ
  • ನಿಗೂಢ ಇನ್​ಸ್ಟಾ ಸ್ಟೋರಿ ಹಂಚಿಕೊಳ್ಳುವ ಮೂಲಕ ಕೊಹ್ಲಿಗೆ ಪರೋಕ್ಷ ಟಾಂಗ್ ಕೊಟ್ಟ ಟ್ರಾವಿಸ್​ ಹೆಡ್​​
Virat Kohli : ಸನ್‌ರೈಸರ್ಸ್ ಹೈದರಾಬಾದ್ (SRH) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವೆ ಶುಕ್ರವಾರ (ಮೇ 22) ನಡೆದ ಐಪಿಎಲ್ ಪಂದ್ಯ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು. ಒಂದೆಡೆ ರನ್​ಗಳ ಸುರಿಮಳೆಯಾದರೆ, ಇನ್ನೊಂದೆಡೆ ವಿವಾದಗಳ ಕೇಂದ್ರ ಬಿಂದು ಕೂಡ ಆಯಿತು. ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ಟ್ರಾವಿಸ್ ಹೆಡ್ ಅವರೊಂದಿಗೆ ಕೈಕುಲುಕಲು ನಿರಾಕರಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದರು. 
ಪಂದ್ಯದ ವೇಳೆ ಮೈದಾನದಲ್ಲಿ ನಡೆದಿದ್ದ ವಾಕ್ಸಮರವನ್ನು ಮರೆತು ಹೆಡ್ ಅವರು ಹ್ಯಾಂಡ್‌ಶೇಕ್‌ಗಾಗಿ ಕೈಚಾಚಿದರೂ, ತಮ್ಮ ತಂಡ ಎದುರಿಸಿದ 55 ರನ್‌ಗಳ ಹೀನಾಯ ಸೋಲಿನ ಆಕ್ರೋಶದಲ್ಲಿದ್ದ ಕೊಹ್ಲಿ, ಹೆಡ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಂದೆ ಸಾಗಿದರು. ಈ ಮುಜುಗರದ ಘಟನೆಯ ಬೆನ್ನಲ್ಲೇ ಟ್ರಾವಿಸ್ ಹೆಡ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಗೂಢವಾದ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಇದು ಕೊಹ್ಲಿ ಅವರ ವರ್ತನೆಗೆ ಕೌಂಟರ್ ಕೊಡುವ ಉದ್ದೇಶದಿಂದಲೇ ಹಾಕಿದ್ದಾ? ಎಂದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡಲು ವಿಫಲರಾದರು. ಸನ್‌ರೈಸರ್ಸ್ ತಂಡದ ಯುವ ಬೌಲರ್ ಸಾಕಿಬ್ ಹುಸೇನ್ ಎಸೆತದಲ್ಲಿ ಕೊಹ್ಲಿ (15 ರನ್​, 11 ಎಸೆತ) ಔಟಾದರು. ಆದರೆ, ಹುಸೇನ್​ ಅವರು ಕೊಹ್ಲಿ ವಿಕೆಟ್ ಪಡೆಯುವ ಮುನ್ನವೇ ಮೈದಾನದಲ್ಲಿ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿತ್ತು. 
ಹೌದು, ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ದೊಡ್ಡ ಶಾಟ್‌ಗಳನ್ನು ಹೊಡೆಯುವಂತೆ ಹೆಡ್ ಸವಾಲು ಹಾಕಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಆರ್‌ಸಿಬಿ ಸ್ಟಾರ್, "ಈಗ ಹೆಂಗೂ ನಿನ್ನನ್ನು ಸಬ್‌ಸ್ಟಿಟ್ಯೂಟ್ (ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೊರಗೆ) ಮಾಡಲ್ಲ, ಹಾಗಾಗಿ ನೀನೇ ಬಂದು ಬೌಲಿಂಗ್ ಕೂಡ ಮಾಡಬಹುದು ನೋಡು" ಎಂದು ಹೆಡ್ ಅವರ ಕಾಲೆಳೆದಿದ್ದರು. ಪಂದ್ಯದ ಬಳಿಕ ಕೊಹ್ಲಿ, ಹೆಡ್ ಅವರ​ ಕೈಕುಲುಕದೇ ಮುಂದೆ ನಡೆದರು. ಇದರಿಂದ ಹೆಡ್​, ತೀವ್ರ ಮುಜುಗರ ಅನುಭವಿಸಿದರು.
ಪಂದ್ಯ ಮುಕ್ತಾಯಗೊಂಡ ಬಳಿಕ ಟ್ರಾವಿಸ್ ಹೆಡ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "Keep the body guessing" (ದೇಹವು ಊಹಿಸುತ್ತಲೇ ಇರುವಂತೆ ಇರಲಿ) ಎಂಬ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಯಾರು ಏನೇ ಊಹೆಗಳನ್ನು (Guess) ಮಾಡುತ್ತಿದ್ದರೂ, ಸತ್ಯ ಏನೆಂಬುದನ್ನು ಯಾರಿಗೂ ಪತ್ತೆಹಚ್ಚಲು ಬಿಡದೆ ಗೊಂದಲದಲ್ಲೇ ಇಡುವುದು ಎಂಬ ಅರ್ಥದಲ್ಲಿ ಪರೋಕ್ಷವಾಗಿ ಕೊಹ್ಲಿ ಘಟನೆಗೆ ಟಾಂಗ್ ನೀಡಲು ಬಳಸಿದ್ದಾರೆ ಎನ್ನಲಾಗಿದೆ. ಪಂದ್ಯದ ನಂತರ ಕೊಹ್ಲಿ ಕೈಕುಲುಕದೆ ನಿರ್ಲಕ್ಷಿಸಿದ ನಡವಳಿಕೆಗೆ ಹೆಡ್ ನೀಡಿದ ಪರೋಕ್ಷ ತಿರುಗೇಟು ಎಂದೇ ಬಹುತೇಕರು ಭಾವಿಸಿದ್ದಾರೆ. ಮೈದಾನದಲ್ಲಿ ನಡೆದ ಜಗಳ ಹಾಗೂ ನಂತರದ ಹ್ಯಾಂಡ್‌ಶೇಕ್ ವಿವಾದದ ಬೆನ್ನಲ್ಲೇ ಹೆಡ್ ಇಂತಹದ್ದೊಂದು ನಿಗೂಢ ಸಾಲುಗಳನ್ನು ಹಂಚಿಕೊಂಡಿರುವುದು, ಇಬ್ಬರು ಆಟಗಾರರ ನಡುವಿನ ಆನ್‌-ಫೀಲ್ಡ್ ಮುನಿಸು ಸೋಷಿಯಲ್ ಮೀಡಿಯಾ ವಾರ್ ಆಗಿ ಬದಲಾಗಿದೆಯೇ ಎಂಬ ಅನುಮಾನವನ್ನು ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಬಲಪಡಿಸಿದೆ.
ನೋ ಹ್ಯಾಂಡ್​ಶೇಕ್​ ವಿವಾದ
ಮೈದಾನದಲ್ಲಿ ಕ್ರಿಕೆಟಿಗರ ನಡುವೆ ವಾಕ್ಸಮರ ಸಾಮಾನ್ಯವಾಗಿದ್ದರೂ, ವಿರಾಟ್ ಕೊಹ್ಲಿ ಕೇವಲ 15 ರನ್‌ಗಳಿಗೆ ಔಟಾದಾಗ ಈ ಇಬ್ಬರ ನಡುವಿನ ಜಗಳ ತಾರಕಕ್ಕೇರಿತು. ಮಾಜಿ ಆರ್‌ಸಿಬಿ ನಾಯಕ ನಿರಾಶೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಟ್ರಾವಿಸ್ ಹೆಡ್ ಅತ್ಯಂತ ತೀಕ್ಷ್ಣವಾದ ಬೀಳ್ಕೊಡುಗೆಯ ಕಾಮೆಂಟ್ ಒಂದನ್ನು ಮಾಡಿದ್ದರು. ತಮಗೆ ಬೌಲಿಂಗ್ ಮಾಡಲು ಅವಕಾಶ ಸಿಗುವ ಮುನ್ನವೇ ಕೊಹ್ಲಿ ಪೆವಿಲಿಯನ್ ಸೇರಿಕೊಂಡಿದ್ದನ್ನು ಹೆಡ್ ವ್ಯಂಗ್ಯವಾಡಿದರು. ವಿಕೆಟ್ ಪತನದ ತೀವ್ರ ನಿರಾಶೆ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ 55 ರನ್‌ಗಳ ಭರ್ಜರಿ ಗೆಲುವು, ಕೊಹ್ಲಿ ಅವರಲ್ಲಿದ್ದ ಆಕ್ರೋಶ ಪಂದ್ಯದ ಕೊನೆಯ ಎಸೆತದ ಬಳಿಕವೂ ಮುಂದುವರಿಯುವಂತೆ ಮಾಡಿತು.
ಈ ಇಡೀ ವಿವಾದದ ಅತ್ಯಂತ ಮಹತ್ವದ ಕ್ಷಣ ಜರುಗಿದ್ದು ಪಂದ್ಯದ ನಂತರದ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ವೇಳೆ. ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಸಾಲಾಗಿ ನಿಂತಾಗ, ಟ್ರಾವಿಸ್ ಹೆಡ್ ಅವರು ಕೊಹ್ಲಿ ಕಡೆಗೆ ಕೈಚಾಚಿದ್ದನ್ನು ಟೆಲಿವಿಷನ್ ಕ್ಯಾಮೆರಾಗಳು ಸ್ಪಷ್ಟವಾಗಿ ಸೆರೆಹಿಡಿದಿದ್ದವು. ಆದರೆ, ಕೊಹ್ಲಿ ಆ ಕಡೆಗೆ ನೋಡದೆಯೇ ಹೆಡ್ ಅವರ ಕೈಕುಲುಕುವ ಯತ್ನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನೇರವಾಗಿ ಮುಂದೆ ಸಾಗಿದರು. ಅದರ ಬೆನ್ನಲ್ಲೇ ಹೈದರಾಬಾದ್ ತಂಡದ ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಇತರರನ್ನು ಕೊಹ್ಲಿ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದ್ದು, ಹೆಡ್ ಅವರನ್ನು ಮಾತ್ರ ಬೇಕೆಂದೇ ನಿರ್ಲಕ್ಷಿಸಿದ ಅವರ ಈ ನಡೆ ಕ್ರೀಡಾ ನಿಯಮಗಳು ಮತ್ತು ಮೈದಾನದ ಆಕ್ರಮಣಕಾರಿ ಸ್ವಭಾವದ ನಡುವಿನ ವ್ಯತ್ಯಾಸದ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್​).