ಮುಂದಿನ ವರ್ಷವಾದ್ರೂ IPL ಆಡಿ ಎಂದು ರೈನಾ ಕೇಳಿದ್ದಕ್ಕೆ ಧೋನಿ ಕೊಟ್ಟ ಉತ್ತರ ಕೇಳಿ ಅಭಿಮಾನಿಗಳ ಹಾರ್ಟ್ ಬ್ರೇಕ್! MS Dhoni
- ಸೋಮವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಮಿಶ್ರ ಅನುಭವ
- ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿದ ಸಿಎಸ್‌ಕೆ
- ಮತ್ತೊಂದೆಡೆ ಎಂ.ಎಸ್. ಧೋನಿ ಮೈದಾನಕ್ಕಿಳಿದಿದ್ದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿ ಮೂಡಿಬಂತು
- ಚೆಪಾಕ್‌ನಲ್ಲಿ ಈ ಸೀಸನ್‌ನ ಕೊನೆಯ ಪಂದ್ಯವಾದ್ದರಿಂದ ತಂಡದ ಗ್ರೂಪ್ ಫೋಟೋಗಾಗಿ ಮೈದಾನಕ್ಕೆ ಆಗಮಿಸಿದರು
MS Dhoni : ಸೋಮವಾರ (ಮೇ 18) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಮಿಶ್ರ ಅನುಭವ ಉಂಟಾಯಿತು. ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿದರೆ, ಮತ್ತೊಂದೆಡೆ ಎಂ.ಎಸ್. ಧೋನಿ ಮೈದಾನಕ್ಕಿಳಿದಿದ್ದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿ ಮೂಡಿಬಂತು.
44 ವರ್ಷದ ಧೋನಿ ಗಾಯದ ಸಮಸ್ಯೆಯಿಂದಾಗಿ ಈ ಋತುವಿನಲ್ಲಿ ಸಿಎಸ್‌ಕೆ ಪರ ಆಡದಿದ್ದರೂ, ಚೆಪಾಕ್‌ನಲ್ಲಿ ಈ ಸೀಸನ್‌ನ ಕೊನೆಯ ಪಂದ್ಯ ಇದಾಗಿದ್ದರಿಂದ, ಅವರು ತಂಡದ ಗ್ರೂಪ್ ಫೋಟೋಗಾಗಿ ಮೈದಾನಕ್ಕೆ ಆಗಮಿಸಿದರು ಮತ್ತು ನಂತರ ಮೈದಾನದ ಸುತ್ತಲೂ ನಡೆದು ಚೆನ್ನೈ ಅಭಿಮಾನಿಗಳ ಅಚಲವಾದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.
ಕಾಮೆಂಟೇಟರ್ ಆಗಿ ಮೈದಾನದಲ್ಲಿ ಉಪಸ್ಥಿತರಿದ್ದ ಟೀಮ್ ಇಂಡಿಯಾ ಹಾಗೂ ಸಿಎಸ್‌ಕೆ ತಂಡದ ಮಾಜಿ ಸಹ ಆಟಗಾರ ಸುರೇಶ್ ರೈನಾ ಅವರನ್ನು ಧೋನಿ ಭೇಟಿಯಾಗಿದ್ದು ಅಭಿಮಾನಿಗಳ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಚೆನ್ನೈ ಫ್ರಾಂಚೈಸಿಯ ಎರಡು ಪ್ರಮುಖ ಸ್ತಂಭಗಳಾಗಿದ್ದ ಧೋನಿ ಮತ್ತು ರೈನಾ ಜೋಡಿಯು ಸಿಎಸ್‌ಕೆ ತಂಡ ಒಟ್ಟಿಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಧೋನಿ ಈ ಸೀಸನ್‌ನ ಮುಂದಿನ ಪಂದ್ಯಗಳಲ್ಲಿ ಅಥವಾ ಐಪಿಎಲ್ 2027ರ ಆವೃತ್ತಿಯಲ್ಲಿ ಮರಳಿ ಆಡಬಹುದು ಎಂದು ಅಭಿಮಾನಿಗಳು ಆಶಿಸುತ್ತಿರುವ ಬೆನ್ನಲ್ಲೇ, ರೈನಾ ಅವರು ಧೋನಿ ಜೊತೆ ನಡೆಸಿದ ಸಂಭಾಷಣೆಯೊಂದನ್ನು ಬಹಿರಂಗಪಡಿಸಿದ್ದಾರೆ. 'ನೀವು ಐಪಿಎಲ್ 2026ಕ್ಕೆ ಮಿಸ್ಡ್ ಕಾಲ್ ಕೊಟ್ಟಿದ್ದೀರಾ, ಇದು ಲೆಕ್ಕಕ್ಕೆ ಬರುವುದಿಲ್ಲ, ಮುಂದಿನ ವರ್ಷ ನೀವು ಮರಳಿ ಬರಲೇಬೇಕು' ಎಂದು ನಾನು ಹೇಳಿದ್ದಕ್ಕೆ, ಧೋನಿ 'ನನ್ನ ದೇಹ ಸ್ವಲ್ಪ ಸುಸ್ತಾಗಿದೆ (ದುರ್ಬಲವಾಗಿದೆ)' ಎಂದು ಉತ್ತರಿಸಿದರು, ಆದರೆ ನಾವು ಇದನ್ನು ನಂಬುವುದಿಲ್ಲ, ಮುಂದಿನ ವರ್ಷ ನೀವು ಆಡಲೇಬೇಕು ಎಂದು ಹೇಳಿರುವುದಾಗಿ ರೈನಾ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ತಿಳಿಸಿದ್ದು, ಧೋನಿಯ ಈ ಉತ್ತರ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿದೆ.
ಈ ಋತುವಿನಲ್ಲಿ ಸಿಎಸ್‌ಕೆ ಪರ ಒಂದೇ ಒಂದು ಪಂದ್ಯವನ್ನೂ ಆಡದ ಎಂ.ಎಸ್. ಧೋನಿ, ತಮ್ಮ ದೇಹವು ಮೊದಲಿನಂತಿಲ್ಲ ಎಂದು ರೈನಾ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ, ಮುಂದಿನ ವರ್ಷವೂ ಅವರು ಫ್ರಾಂಚೈಸಿ ಪರ ಕಣಕ್ಕಿಳಿಯುವುದು ಭೌತಿಕವಾಗಿ ತೀರಾ ಕಷ್ಟದ ಕೆಲಸ ಎಂಬ ಮುನ್ಸೂಚನೆ ಸಿಕ್ಕಂತಾಗಿದೆ.
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರಿಗೂ ಧೋನಿ ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾಯಿತು. ಆದರೆ ಫ್ಲೆಮಿಂಗ್ ಈ ಬಗ್ಗೆ ನೇರ ಉತ್ತರ ನೀಡದೆ, ಇದು ಮ್ಯಾನೇಜ್‌ಮೆಂಟ್ (ಆಡಳಿತ ಮಂಡಳಿ) ತೆಗೆದುಕೊಳ್ಳಬೇಕಾದ ನಿರ್ಧಾರ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ನನಗೂ ಗೊತ್ತು. ಧೋನಿ ಈ ವರ್ಷ ಪಂದ್ಯಗಳನ್ನು ಆಡದಿದ್ದರೂ ತಂಡದ ಜೊತೆಯಲ್ಲೇ ಇದ್ದಾರೆ. ಇದು ತಂಡಕ್ಕೆ ಹಾಗೂ ಯುವ ಆಟಗಾರರ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ. ಇನ್ನು ಹೊಸ ಆಟಗಾರರ ಪರಿಚಯ ಸೇರಿದಂತೆ ನಾವು ಹಲವು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಆದರೆ, ಅಂತಿಮವಾಗಿ ನಮ್ಮನ್ನು ಫಲಿತಾಂಶದ ಆಧಾರದ ಮೇಲೆಯೇ ಅಳೆಯಲಾಗುತ್ತದೆ ಎಂಬುದು ನನಗೆ ತಿಳಿದಿದೆ. ಹಾಗಾಗಿ ಧೋನಿ ಅವರ ಭವಿಷ್ಯದ ನಿರ್ಧಾರ ಮ್ಯಾನೇಜ್‌ಮೆಂಟ್‌ಗೆ ಬಿಟ್ಟದ್ದು, ನನ್ನದಲ್ಲ" ಎಂದು ಫ್ಲೆಮಿಂಗ್ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).