ಟೀಮ್​ ಇಂಡಿಯಾ ಕ್ರಿಕೆಟಿಗ ಸರ್ಫರಾಜ್​ ಖಾನ್ 
ಐಪಿಎಲ್

14 ಸಿಕ್ಸರ್​, 9 ಬೌಂಡರಿ, 157 ರನ್​... ಸರ್ಫರಾಜ್​ ಶರವೇಗದ ಶತಕಕ್ಕೆ ಕುಣಿದು ಕುಪ್ಪಳಿಸಿದ CSK ಫ್ಯಾನ್ಸ್​! Sarfaraz Khan

ಪ್ರಮುಖ ಮುಖ್ಯಾಂಶಗಳು

  • ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಬ್ಬಿರಿಸಿ ಬೊಬ್ಬಿರಿದ ಸರ್ಫರಾಜ್​ ಖಾನ್
  • ಕೇವಲ 75 ಎಸೆತಗಳಲ್ಲಿ 9 ಬೌಂಡರಿ ಹಾಗೂ 14 ಸಿಕ್ಸರ್​ಗಳ ನೆರವಿನಿಂದ 157 ರನ್​
  • ಶತಕದ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಖಡಕ್​ ಸಂದೇಶವನ್ನು ರವಾನಿಸಿದ ಸರ್ಫರಾಜ್
  • ಸರ್ಫರಾಜ್ ಖಾನ್ ಅಬ್ಬರದಾಟ ನೋಡಿದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಸಂಭ್ರಮಾಚರಣೆ
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಜಯ್​ ಹಜಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದು ಅಬ್ಬಿರಿಸಿ ಬೊಬ್ಬಿರಿದ ಸರ್ಫರಾಜ್​ ಖಾನ್( Sarfaraz Khan )​, ಕೇವಲ 75 ಎಸೆತಗಳಲ್ಲಿ 9 ಬೌಂಡರಿ ಹಾಗೂ 14 ಸಿಕ್ಸರ್​ಗಳ ನೆರವಿನಿಂದ 157 ರನ್​ ಕಲೆ ಹಾಕುವ ಮೂಲಕ ಭಾರತೀಯ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಆಯ್ಕೆದಾರರಿಗೆ ಖಡಕ್​ ಸಂದೇಶವನ್ನು ರವಾನಿಸಿದ್ದಾರೆ.
ಇಂದು ಜೈಪುರದಲ್ಲಿ ಗೋವಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅವರು ವಿಧ್ವಂಸಕ ಬ್ಯಾಟಿಂಗ್‌ ಮಾಡಿದರು. ಇದರ ಪರಿಣಾಮವಾಗಿ, ಮುಂಬೈ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 444 ರನ್ ಗಳಿಸಿದೆ.
ಮೈದಾನದಲ್ಲಿ ಸರ್ಫರಾಜ್ ಖಾನ್ ಅಬ್ಬರದಾಟ ನೋಡಿದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಏಕೆಂದರೆ, 2026ರ ಐಪಿಎಲ್​ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಸರ್ಫರಾಜ್​ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್​ ಮಿನಿ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಗೆ ಸರ್ಫರಾಜ್​ರನ್ನು ಸಿಎಸ್​ಕೆ ಖರೀದಿಸಿದೆ. ಹೀಗಾಗಿ, ಈ ಬಾರಿ ಸಿಎಸ್​ಕೆ ಮತ್ತೊಂದು ಬಲ ಸೇರಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಸುನಾಮಿ ಇನ್ನಿಂಗ್ಸ್‌ನೊಂದಿಗೆ, ಸರ್ಫರಾಜ್ ಖಾನ್ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ವೇಗವಾಗಿ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸರ್ಫರಾಜ್​ ಪಾತ್ರರಾಗಿದ್ದಾರೆ. ಈ ದಾಖಲೆ ಈ ಹಿಂದೆ ರೋಹಿತ್ ಹೆಸರಿನಲ್ಲಿತ್ತು. ಇತ್ತೀಚೆಗೆ, ಸಿಕ್ಕಿಂ ವಿರುದ್ಧ ರೋಹಿತ್ ಕೇವಲ 62 ಎಸೆತಗಳಲ್ಲಿ ಶತಕ ಗಳಿಸಿದರು. ದೀರ್ಘಕಾಲದಿಂದ ಭಾರತ ತಂಡದಿಂದ ದೂರವಿದ್ದ ಸರ್ಫರಾಜ್, ಗೋವಾ ವಿರುದ್ಧ ಕೇವಲ 75 ಎಸೆತಗಳಲ್ಲಿ 157 ರನ್ ಗಳಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಅಂದಹಾಗೆ, ಇದೇ ಪಂದ್ಯದಲ್ಲಿ ಸರ್ಫರಾಜ್ ಸಹೋದರ ಮುಶೀರ್ ಖಾನ್ (60) ಕೂಡ ಗಮನ ಸೆಳೆದರು.
ಸರ್ಫರಾಜ್ ಖಾನ್ ಅವರ ರೆಡ್-ಬಾಲ್ ಕ್ರಿಕೆಟ್ ಅಂಕಿ-ಅಂಶಗಳು ಉತ್ತಮವಾಗಿವೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 63.15 ರನ್​ ಸರಾಸರಿಯನ್ನು ಹೊಂದಿದ್ದಾರೆ. ತಮ್ಮ ಬತ್ತಳಿಕೆಯಲ್ಲಿ 16 ಶತಕಗಳು ಮತ್ತು 16 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಸರ್ಫರಾಜ್​ ಅವರ ಕ್ರಿಕೆಟ್​ ವೃತ್ತಿಜೀವನವು T20 ಕ್ರಿಕೆಟ್‌ನೊಂದಿಗೆ ಪ್ರಾರಂಭವಾಯಿತು. 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೊತೆ ಒಪ್ಪಂದ ಮಾಡಿಕೊಂಡ ಸರ್ಫರಾಜ್​, 17ನೇ ವಯಸ್ಸಿನಲ್ಲೇ ಐಪಿಎಲ್ ಆಡಿದರು. ಅದರ ನಂತರ, ಸರ್ಫರಾಜ್ ಅವರ ವೈಟ್-ಬಾಲ್ ಕ್ರಿಕೆಟ್ ವೃತ್ತಿಜೀವನ ಕ್ರಮೇಣ ಕುಸಿಯಿತು.
ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಿಟ್ನೆಸ್ ಸಾಧಿಸಿದ ನಂತರ, ಸರ್ಫರಾಜ್​ ಅವರು ಮೂರು ಸ್ವರೂಪಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ 329 ರನ್ ಗಳಿಸಿದರು. ಈ ಪ್ರದರ್ಶನದ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸರ್ಫರಾಜ್​ ಅವರನ್ನು IPL 2026 ಗಾಗಿ ನಡೆದ ಹರಾಜಿನಲ್ಲಿ ಖರೀದಿಸಿತು, (ಏಜೆನ್ಸೀಸ್​).