ನವದೆಹಲಿ: ಐಪಿಎಲ್ನಲ್ಲಿ ಆಟಗಾರನಾಗಿ ವಿದಾಯ ಹೇಳಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ದಂತಕಥೆ ಎಂ.ಎಸ್. ಧೋನಿ ( MS Dhoni ), ಮುಂಬರುವ 2027ರ ಐಪಿಎಲ್ ಆವೃತ್ತಿಯಿಂದ ತಂಡದ ಮೆಂಟರ್ (ಮಾರ್ಗದರ್ಶಕ) ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಐತಿಹಾಸಿಕ ಹೆಜ್ಜೆಯೊಂದಿಗೆ ಧೋನಿ ಅವರ 19 ವರ್ಷಗಳ ಸುದೀರ್ಘ ಆಟಗಾರನ ವೃತ್ತಿಜೀವನಕ್ಕೆ ಇದೀಗ ಅಧಿಕೃತ ತೆರೆಬಿದ್ದಿದೆ. ಒಂದು ಬದಲಾವಣೆಯು ಸಿಎಸ್ಕೆ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದು, ಅಭಿಮಾನಿಗಳಲ್ಲಿ ಒಂದು ಕಡೆ ಭಾವನಾತ್ಮಕ ಕ್ಷಣವಾದರೆ, ಮತ್ತೊಂದು ಕಡೆ ಹೊಸ ಜವಾಬ್ದಾರಿ ಕುರಿತು ಕುತೂಹಲ ಮೂಡಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮಂಗಳವಾರ ಅಧಿಕೃತವಾಗಿ ಎಂ.ಎಸ್. ಧೋನಿ ಅವರನ್ನು ಸಿಎಸ್ಕೆ ತಂಡದ ನೂತನ ಮೆಂಟರ್ ಆಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. 2008ರ ಉದ್ಘಾಟನಾ ಆವೃತ್ತಿಯಿಂದಲೂ ಐಪಿಎಲ್ನ ಭಾಗವಾಗಿರುವ ಧೋನಿ, ಲೀಗ್ನ ಅತ್ಯಂತ ಪ್ರಭಾವಿ ಆಟಗಾರ ಹಾಗೂ ಅತ್ಯುತ್ತಮ ಫಿನಿಷರ್ ಆಗಿ ತಮ್ಮದೇ ಆದ ಅಚ್ಚಳಿಯದ ಮುದ್ರೆಯನ್ನು ಒತ್ತಿದ್ದಾರೆ. ಆಟಗಾರನಾಗಿ 16 ಸುದೀರ್ಘ ಸೀಸನ್ಗಳನ್ನು ಸಿಎಸ್ಕೆಗಾಗಿ ಆಡಿರುವ ಧೋನಿ, ತಂಡವನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ಹಾಗೂ ಯಶಸ್ವಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಸಿಎಸ್ಕೆ ತಂಡವು 2010, 2011, 2018, 2021 ಮತ್ತು 2023 ರಲ್ಲಿ ಒಟ್ಟು ಐದು ಐಪಿಎಲ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಧೋನಿಯ ಕೂಲ್ ಕ್ಯಾಪ್ಟನ್ಸಿ ಮತ್ತು ಮೈದಾನದಲ್ಲಿನ ಚಾಣಾಕ್ಷ ನಿರ್ಧಾರಗಳು ಕೋಟ್ಯಂತರ ಯುವ ಕ್ರಿಕೆಟಿಗರಿಗೆ ಮತ್ತು ಅಭಿಮಾನಿಗಳಿಗೆ ಸದಾ ಸ್ಫೂರ್ತಿಯಾಗಿ ಉಳಿದಿವೆ.
ಈ ಒಂದು ಭಾವನಾತ್ಮಕ ಬೆಳವಣಿಗೆಯ ಬೆನ್ನಲ್ಲೇ, ಎಂ.ಎಸ್. ಧೋನಿ ಅವರ ಪತ್ನಿ ಸಾಕ್ಷಿ ಧೋನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಮನಮುಟ್ಟುವಂತೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೆಲವು ಅಧ್ಯಾಯಗಳು ಮುಕ್ತಾಯವಾದರಷ್ಟೇ ಸುಂದರವಾದ ಹೊಸ ಅಧ್ಯಾಯಗಳು ಆರಂಭಗೊಳ್ಳಲು ಸಾಧ್ಯ ಎಂದು ಬರೆದುಕೊಂಡಿರುವ ಸಾಕ್ಷಿ, ಧೋನಿ ಅವರ ದೀರ್ಘ ಮತ್ತು ಅದ್ಭುತ ಕ್ರಿಕೆಟ್ ಅನ್ನು ಬೆಂಬಲಿಸಿದ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದ ಎಂದು ಸಾಕ್ಷಿ ತಿಳಿಸಿದ್ದಾರೆ. ಅಲ್ಲದೆ, "ಹೊಸ ಆರಂಭಗಳು, ಹೊಸ ಸಾಹಸಗಳು ಮತ್ತು ಮರೆಯಲಾರದ ನೆನಪುಗಳೊಂದಿಗೆ ಮುಂದುವರಿಯೋಣ, ನಮಗೆ ನಿನ್ನ ಬಗ್ಗೆ ಹೆಮ್ಮೆಯಿದೆ ಮಾಹಿ" ಎಂದು ಬರೆಯುವ ಮೂಲಕ ಧೋನಿ ಅವರ ಹೊಸ ಜರ್ನಿಗೆ ಸಾಕ್ಷಿ ಸಾಥ್ ನೀಡಿದ್ದಾರೆ.
ಅಂದಹಾಗೆ, ಸಿಎಸ್ಕೆ ಫ್ರಾಂಚೈಸಿಯ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿಯ ಹೊಸ ಜವಾಬ್ದಾರಿಯ ಕುರಿತು ಮಾತನಾಡಿ, ತಂಡದೊಂದಿಗೆ ಧೋನಿ ಹೊಂದಿರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ್ದಾರೆ. "ಎಂ.ಎಸ್. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ. ಕಳೆದ ಸುಮಾರು ಎರಡು ದಶಕಗಳಿಂದ ನಾವು ಏಳು-ಬೀಳುಗಳಲ್ಲಿ ಜತೆಯಾಗಿ ಬೆಳೆದಿದ್ದೇವೆ. ನಮ್ಮ ಸಂಬಂಧ ಗಟ್ಟಿಯಾಗಿರಲು ಕಾರಣ ನಾವು ಪರಸ್ಪರರ ಉದ್ದೇಶಗಳನ್ನು ಪ್ರಶ್ನಿಸುವುದಿಲ್ಲ" ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.
2008ರಲ್ಲಿ ನಾನೇ ಧೋನಿಯನ್ನು ತಂಡಕ್ಕೆ ಕರೆತಂದಿದ್ದು ತಮ್ಮ ಜೀವನದ ಅತ್ಯುತ್ತಮ ನಿರ್ಧಾರ ಎಂದಿರುವ ಶ್ರೀನಿವಾಸನ್ ಅವರು, ಧೋನಿ ಕೇವಲ ಸಾಧನೆಗಳಿಗಾಗಿ ಮಾತ್ರವಲ್ಲದೆ ಅವರು ಒಬ್ಬ ಉತ್ತಮ ವ್ಯಕ್ತಿಯಾಗಿರುವುದರಿಂದ ತಂಡದ ನಿಜವಾದ ಗುರುತಾಗಿದ್ದಾರೆ ಎಂದಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೃದಯಭಾಗವಾಗಿರುವ ಧೋನಿ, ಹಳದಿ ಜೆರ್ಸಿಯ ಸಮಾನಾರ್ಥಕವಾಗಿ ರೂಪುಗೊಂಡಿದ್ದಾರೆ. ನಾಯಕನಾಗಿ ತಂಡವನ್ನು ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಅವರು, ಇದೀಗ ಆಟಗಾರನ ಪಾತ್ರದಿಂದ ನಿವೃತ್ತರಾಗಿ ಮೆಂಟರ್ ಹುದ್ದೆಯನ್ನು ಅಲಂಕರಿಸುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಧೋನಿ ಯಾವಾಗಲೂ ನಮ್ಮ ತಂಡದ ಅಸ್ಮಿತೆಯ ಭಾಗವಾಗಿರುತ್ತಾರೆ ಮತ್ತು ಇದು ಎಂದಿಗೂ ಅವರ ಸ್ವಂತ ಮನೆಯಾಗಿರುತ್ತದೆ ಎಂದು ಎನ್. ಶ್ರೀನಿವಾಸನ್ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ 17 ಸೀಸನ್ಗಳ ಸುದೀರ್ಘ ಪಯಣ ನಡೆಸಿರುವ ಮಹೇಂದ್ರ ಸಿಂಗ್ ಧೋನಿ, 2008ರಲ್ಲಿ ಫ್ರಾಂಚೈಸಿಗೆ ಸೇರಿದಾಗಿನಿಂದ 5 ಐಪಿಎಲ್ ಪ್ರಶಸ್ತಿಗಳು ಹಾಗೂ 2 ಚಾಂಪಿಯನ್ಸ್ ಲೀಗ್ ಕಿರೀಟಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸಿಎಸ್ಕೆ ತಂಡಕ್ಕೆ ನಿಷೇಧವಿದ್ದ 2016 ಮತ್ತು 2017ರ ಅವಧಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಧೋನಿ, ತಮ್ಮ ಅದ್ಭುತ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 5439 ರನ್ಗಳನ್ನು ಕಲೆಹಾಕಿದ್ದು, 38.30ರ ಸರಾಸರಿ ಹಾಗೂ 137.45ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ, (ಏಜೆನ್ಸೀಸ್).