ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ... ಕಣ್ಣೀರಿಟ್ಟ ಮಹಿಳಾ ಅಭಿಮಾನಿಗೆ ಪ್ರಾಮಿಸ್ ಮಾಡಿದ ರೋಹಿತ್ ಶರ್ಮಾ! Rohit Sharma
- ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಅಭಿಮಾನಿಗಳ ಹೃದಯ ಗೆದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ
- ಕೆಕೆಆರ್ ವಿರುದ್ಧ ಪಂದ್ಯದ ಬಳಿಕ ದೀರ್ಘಕಾಲದಿಂದ ಕಾಯುತ್ತಿದ್ದ ಅಭಿಮಾನಿಯನ್ನು ನೋಡದೇ ಹೊರಟು ಹೋದ ರೋಹಿತ್ ಶರ್ಮಾ
- ತನ್ನನ್ನು ರೋಹಿತ್ ನೋಡಲೇ ಇಲ್ಲ ಎಂದು ಮಹಿಳಾ ಅಭಿಮಾನಿ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
- ವೈರಲ್ ವಿಡಿಯೋ ನೋಡಿದ ಕೂಡಲೇ ವಿಡಿಯೋ ಮೂಲಕ ಕ್ಷಮೆಯಾಚಿಸಿ ಭೇಟಿಯಾಗುವ ಭರವಸೆ ನೀಡಿದ ಹಿಟ್‌ಮ್ಯಾನ್
Rohit Sharma : ಐಪಿಎಲ್ 2026ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡದೇ ನಿರಾಸೆ ಮೂಡಿಸಿರುವುದು ನಿಜವಾದರೂ ಮಾಜಿ ನಾಯಕ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಮಾತ್ರ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವ ಮೂಲಕ ಸುದ್ದಿಯಲ್ಲಿದ್ದಾರೆ.
ಕೋಲ್ಕತ್ತದಲ್ಲಿ ನಡೆದ ಪಂದ್ಯವೊಂದರ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಾಗಿ ರೋಹಿತ್ ಶರ್ಮಾ ಅವರು ಮಹಿಳಾ ಅಭಿಮಾನಿಯೊಬ್ಬರಲ್ಲಿ ಅತ್ಯಂತ ವಿನಮ್ರತೆಯಿಂದ ಕ್ಷಮೆಯಾಚಿಸುತ್ತಿರುವ ಮನಮುಟ್ಟುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಮೇ 20 ರಂದು ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ ನೈಟ್ ರೈಡರ್ಸ್ (KKR) ವಿರುದ್ಧ 4 ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಈ ಪಂದ್ಯ ಮುಗಿದ ಬಳಿಕ ಮುಂಬೈ ತಂಡ ತಂಗಿದ್ದ ಹೋಟೆಲ್ ಹೊರಗಡೆ ಅಭಿಮಾನಿಗಳು ನೆರೆದಿದ್ದಾಗ, ಯುವತಿಯೊಬ್ಬಳು ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ದೀರ್ಘಕಾಲದಿಂದ ಕಾಯುತ್ತಿದ್ದಳು. ಆದರೆ, ರೋಹಿತ್ ಹೊರಬಂದಾಗ ಭದ್ರತಾ ವ್ಯವಸ್ಥೆ ಹಾಗೂ ಗಿಜಿಗುಡುತ್ತಿದ್ದ ಜನಸಂದಣಿಯ ನಡುವೆ ಆಕೆಯನ್ನು ಗಮನಿಸದೇ ಮುಂದೆ ಸಾಗಿದರು. ಇದರಿಂದ ತೀವ್ರ ನಿರಾಶೆಗೊಂಡ ಯುವತಿ ಭಾವುಕಳಾಗಿ ಕಣ್ಣೀರಿಟ್ಟಳು. ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಅಳುತ್ತಿರುವ ವಿಡಿಯೋ ಭಾರಿ ವೈರಲ್ ಆದ ಕೂಡಲೇ ಅದನ್ನು ಗಮನಿಸಿದ ರೋಹಿತ್ ಶರ್ಮಾ, ಮಹಿಳಾ ಅಭಿಮಾನಿಯ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.
ಅಲ್ಲಿನ ಗದ್ದಲದಲ್ಲಿ ಎಲ್ಲರನ್ನೂ ಗಮನಿಸಲು ಸಾಧ್ಯವಾಗುವುದಿಲ್ಲ, ಆದರೆ ನಿಮ್ಮ ಮನಸ್ಸಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂದಿರುವ ರೋಹಿತ್, ಮುಂದಿನ ಬಾರಿ ನಾನು ಕೋಲ್ಕತಗೆ ಬಂದಾಗ ಖಂಡಿತವಾಗಿಯೂ ನಿಮ್ಮನ್ನು ಖುದ್ದಾಗಿ ಭೇಟಿಯಾಗುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಒಬ್ಬ ಸಾಮಾನ್ಯ ಅಭಿಮಾನಿಯ ಭಾವುಕತೆಗೆ ಸ್ಪಂದಿಸಿ, ಗೌರವ ನೀಡಿದ ರೋಹಿತ್ ಶರ್ಮಾ ಅವರ ಈ ನಡೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅವರ ದೊಡ್ಡ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಕೋಲ್ಕತ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲಿ 15 ರನ್ ಗಳಿಸಿ ಸೌರಭ್ ದುಬೆ ಬೌಲಿಂಗ್‌ನಲ್ಲಿ ಕ್ಯಾಮರೂನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮುಂಬೈ ಇಂಡಿಯನ್ಸ್ ನಿಗದಿತ ಓವರ್‌ಗಳಲ್ಲಿ ಕೇವಲ 147 ರನ್‌ಗಳಿಗೆ ಸೀಮಿತಗೊಂಡರೆ, ಈ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಪರ ಮನೀಶ್ ಪಾಂಡೆ ಮತ್ತು ರೋವ್‌ಮನ್ ಪಾವೆಲ್ ಜೋಡಿ 64 ರನ್‌ಗಳ ಜೊತೆಯಾಟವಾಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು.
ಐಪಿಎಲ್ 2026ರ ಸೀಸನ್‌ನಲ್ಲಿ ರೋಹಿತ್ ಶರ್ಮಾ ಒಟ್ಟು 8 ಇನ್ನಿಂಗ್ಸ್‌ಗಳಲ್ಲಿ 283 ರನ್ ಗಳಿಸಿದರೂ, ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಒಟ್ಟಾರೆಯಾಗಿ ಈ ಸೀಸನ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಮುಂಬೈ ತಂಡ 13 ಪಂದ್ಯಗಳಲ್ಲಿ ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ವಿಶೇಷವಾಗಿ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವು ತೀವ್ರ ಹಿನ್ನಡೆ ತಂದಿದ್ದಲ್ಲದೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಮೇಲೂ ಭಾರಿ ಟೀಕೆಗಳು ಕೇಳಿಬರುವಂತೆ ಮಾಡಿದೆ, (ಏಜೆನ್ಸೀಸ್).