ಉಳಿದ ಎರಡೂ ಪಂದ್ಯಗಳಲ್ಲಿ RCB ಸೋತರೆ ಏನಾಗಲಿದೆ? ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವಿದೆಯೇ? 
ಐಪಿಎಲ್

ಉಳಿದ ಎರಡೂ ಪಂದ್ಯಗಳಲ್ಲಿ RCB ಸೋತರೆ ಏನಾಗಲಿದೆ? ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವಿದೆಯೇ?

ಪ್ರಮುಖ ಮುಖ್ಯಾಂಶಗಳು

  • 12 ಪಂದ್ಯಗಳಲ್ಲಿ 8 ಗೆಲುವು ಕಂಡಿರುವ ಆರ್‌ಸಿಬಿ, 16 ಅಂಕಗಳೊಂದಿಗೆ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ
  • ಉತ್ತಮ ನೆಟ್ ರನ್ ರೇಟ್ (+1.053) ಹೊಂದಿರುವುದರಿಂದ ತಂಡದ ಪ್ಲೇಆಫ್ ಪ್ರವೇಶ ಬಹುತೇಕ ಗ್ಯಾರಂಟಿ
  • ಉಳಿದ 2 ಪಂದ್ಯಗಳನ್ನು ಗೆದ್ದರೆ 20 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದು, ಫೈನಲ್‌ಗೆ ಎರಡು ಅವಕಾಶ
  • ಉಳಿದ ಪಂದ್ಯಗಳಲ್ಲಿ ಸೋತರೂ, ರನ್ ರೇಟ್ ಮತ್ತು ಇತರ ತಂಡಗಳ ಫಲಿತಾಂಶದ ಆಧಾರದ ಮೇಲೆ ಪ್ಲೇಆಫ್ ಹಾದಿ ತೆರೆದಿರುತ್ತದೆ
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋಲುಂಡಿದೆ. ಇದರೊಂದಿಗೆ ಆರ್​​ಸಿಬಿ 16 ಅಂಕಗಳನ್ನು ಮತ್ತು +1.053 ನಿವ್ವಳ ರನ್ ಹೊಂದಿದೆ. ಪ್ರಸ್ತುತ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಆರ್‌ಸಿಬಿ ತಂಡ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಈ ಎರಡು ಪಂದ್ಯಗಳನ್ನು ಗೆದ್ದರೆ, ಯಾವುದೇ ಅಡೆತಡೆ ಇಲ್ಲದೇ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಮತ್ತು ಟಾಪ್ -2 ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿರುತ್ತದೆ. ಒಂದು ವೇಳೆ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಂಡರೂ ಸಹ, ಉತ್ತಮ ನೆಟ್​ ರನ್ ರೇಟ್​ನೊಂದಿಗೆ ಟಾಪ್ -4 ರಲ್ಲಿ ಸ್ಥಾನ ಪಡೆದು ಪ್ಲೇಆಫ್‌ಗೆ ಹೋಗಬಹುದಾಗಿದೆ.
ಅಂದಹಾಗೆ, ಆರ್‌ಸಿಬಿ ಮೇ 17 ರಂದು ಪಂಜಾಬ್ ಕಿಂಗ್ಸ್ ಮತ್ತು ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿಗೆ 20 ಅಂಕಗಳು ದೊರೆಯುತ್ತವೆ. ಇದರಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಮಾತ್ರವಲ್ಲದೆ, ಅಗ್ರ 2 ರಲ್ಲಿ ಸ್ಥಾನ ಪಡೆಯುತ್ತಾರೆ. ಈ ರೀತಿ ಆದರೆ, ಆರ್​ಸಿಬಿಗೆ ಫೈನಲ್ ತಲುಪಲು ಎರಡು ಅವಕಾಶಗಳಿರುತ್ತವೆ.
ಉಳಿದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯ ಗೆದ್ದರೆ, ತಂಡಕ್ಕೆ 18 ಅಂಕಗಳು ದೊರೆಯುತ್ತವೆ. ಆಗಲೂ ಅವರು ಪ್ಲೇಆಫ್ ತಲುಪಬಹುದು. ಆದಾಗ್ಯೂ, ಫೈನಲ್ ತಲುಪಲು ಅವರು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ -2 ಪಂದ್ಯಗಳನ್ನು ಆಡಬೇಕಾಗಬಹುದು.
ಒಂದು ವೇಳೆ ಉಳಿದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಸೋತರೆ, ಆರ್‌ಸಿಬಿ 16 ಅಂಕಗಳೊಂದಿಗೆ ಉಳಿಯುತ್ತದೆ. ಆಗಲೂ ಪ್ಲೇಆಫ್ ತಲುಪುವ ಅವಕಾಶ ಆರ್​ಸಿಬಿಗೆ ಇದೆ. ಆದಾಗ್ಯೂ, ಇದು ಇತರ ತಂಡಗಳ ಫಲಿತಾಂಶಗಳು ಮತ್ತು ನೆಟ್​ ರನ್ ರೇಟ್​ ಅನ್ನು ಅವಲಂಬಿಸಿರಬಹುದು. ಹೀಗಾಗಿ ಆ ರೀತಿ ಆಗದಿರಲಿ ಮತ್ತು ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆಲ್ಲಲಿ ಎಂದು ಕ್ರೀಡಾಭಿಮಾನಿಗಳು ಆಶಿಸುತ್ತಿದ್ದಾರೆ, (ಏಜೆನ್ಸೀಸ್​).