ಆರ್​ಸಿಬಿ ಫ್ರಾಂಚೈಸಿ 
ಐಪಿಎಲ್

ನಕಲಿ ಬೇಡ ಅಸಲಿ ಇರಲಿ! 'ಲಾಯಲ್'​ ಅಭಿಮಾನಿಗಳಿಗೆ 'ರಾಯಲ್'​ ಎಚ್ಚರಿಕೆ! ಇಲ್ಲೇ ಖರೀದಿಸಿ ಐಪಿಎಲ್​ ಪಂದ್ಯದ ಟಿಕೆಟ್ | RCB vs SRH

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರ
  • ಕಿಕ್​ಸ್ಟಾರ್ಟ್​ ಪಂದ್ಯವು ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮಧ್ಯೆ
  • ಓಪನಿಂಗ್ ಪಂದ್ಯಕ್ಕೆ ಟಿಕೆಟ್​ಗಳು ಲಭ್ಯ
  • ಖರೀದಿಗೂ ಮುನ್ನ ಫ್ಯಾನ್ಸ್​ಗೆ ಎಚ್ಚರಿಸಿದ ಆರ್​ಸಿಬಿ ಫ್ರಾಂಚೈಸಿ
ಬೆಂಗಳೂರು: ಟೀಮ್ ಇಂಡಿಯಾದ 'ರನ್ ಮೆಷಿನ್', ದಾಖಲೆಗಳ ಸರದಾರ, ಕ್ರಿಕೆಟ್​ ಅಭಿಮಾನಿಗಳ ನೆಚ್ಚಿನ 'ಕಿಂಗ್' ವಿರಾಟ್​ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ಮಾ.28ರಿಂದ ಐಪಿಎಲ್​ನ ಕಿಕ್​ಸ್ಟಾರ್ಟ್​ ಪಂದ್ಯವು ಹಾಲಿ ಚಾಂಪಿಯನ್ಸ್ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವೆ ನಡೆಯಲಿದ್ದು, ಈ ಪಂದ್ಯದ ಟಿಕೆಟ್​ಗಳ ಹಂಚಿಕೆ ಇಂದಿನಿಂದ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಫ್ರಾಂಚೈಸಿ, ತನ್ನ ಅಭಿಮಾನಿಗಳಿಗೆ ಕೆಲವು ಮಹತ್ವದ ಸಲಹೆಗಳನ್ನು ಹಂಚಿಕೊಂಡಿದೆ. 
ಸನ್​ರೈಸರ್ಸ್​ ಹೈದರಾಬಾದ್​ ಎದುರು ಕಣಕ್ಕಿಳಿಯಲು ಸಜ್ಜಾಗಿರುವ ಆರ್‌ಸಿಬಿ, ತನ್ನ ತವರಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವುದು ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಗಿದೆ. ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಆಸೆಯಲ್ಲಿ ಫ್ರಾಂಚೈಸಿಯ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದಿನಿಂದಲೇ ಟಿಕೆಟ್​ ಪಡೆಯಲು ಫ್ಯಾನ್ಸ್​ ಮುಗಿಬಿದ್ದಿದ್ದು, ಫ್ರಾಂಚೈಸಿ ನಕಲಿ ವೆಬ್​ಸೈಟ್​ಗಳ ಮೊರೆ ಹೋಗಿ, ಮೋಸ ಹೋಗಬೇಡಿ ಎಂದು ಎಚ್ಚರಿಸಿದೆ. 

ಟಿಕೆಟ್‌ಗಳ ಖರೀದಿ ಎಲ್ಲಿ?

ಕ್ರಿಕೆಟ್​ ಅಭಿಮಾನಿಗಳು ಪಂದ್ಯದ ಟಿಕೆಟ್‌ಗಳನ್ನು ಆರ್​ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಖರೀದಿಸುವುದು ಒಳಿತು. ಇಲ್ಲಿ ಮಾತ್ರ ಟಿಕೆಟ್​ಗಳು ಲಭ್ಯವಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಹೆಸರೇಳಿಕೊಂಡು ಬರುವ ನಕಲಿ ವೆಬ್​ಸೈಟ್​ಗಳಿಂದ ಮೋಸ ಹೋಗಬೇಡಿ. ಇಂತಜ ಆ್ಯಪ್​ ಅಥವಾ ವೆಬ್​ಸೈಟ್​ನಿಂದ ಟಿಕೆಟ್​ ಖರೀದಿಸಬೇಡಿ ಎಂದಿದೆ ಫ್ರಾಂಚೈಸಿ.  

ಮೆಟ್ರೋ ಉಚಿತ ಪ್ರಯಾಣ

ಆರ್​ಸಿಬಿಯ ಎಲ್ಲ ಪಂದ್ಯದ ಟಿಕೆಟ್ ಹೊಂದಿರುವವರು ಪಂದ್ಯದ ದಿನದಂದು 'ನಮ್ಮ ಮೆಟ್ರೋ'ದಲ್ಲಿ ಉಚಿತ ಪ್ರಯಾಣ ಮಾಡಬಹುದು. 

ಎಂ-ಟಿಕೆಟ್​

ನಿಮ್ಮ M-ಟಿಕೆಟ್ ಪ್ರವೇಶ ದ್ವಾರ, ಒಳಗಿನ ಗೇಟ್, ಸ್ಟ್ಯಾಂಡ್, ಕ್ಯೂ ಮತ್ತು ಸೀಟ್ ಸಂಖ್ಯೆಯಂತಹ ಪ್ರಮುಖ ವಿವರಗಳನ್ನು ತೋರಿಸುತ್ತದೆ. ಪಂದ್ಯದ ದಿನದಂದು ಗೇಟ್‌ಗಳು ತೆರೆಯುವ ಕೆಲವೇ ಗಂಟೆಗಳ ಮೊದಲು ಎಂಟ್ರಿ ಕ್ಯೂಆರ್​ ರಿವೀಲ್​ ಆಗುತ್ತದೆ ಎಂಬುದು ನೆನಪಿರಲಿ. 

ಎಂಟ್ರಿ ಮತ್ತು ಎಕ್ಸಿಟ್​ 

ಸುಗಮ ಪ್ರವೇಶ ಮತ್ತು ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ನಿಮ್ಮ ಟಿಕೆಟ್‌ನಲ್ಲಿ ಮುದ್ರಿಸಲಾದ ಹೊರ ಮತ್ತು ಒಳಗಿನ ಗೇಟ್‌ಗಳನ್ನು ಸರಿಯಾಗಿ ಪರಿಶೀಲಿಸಿ. ಪ್ರವೇಶವು ಕಬ್ಬನ್ ರಸ್ತೆ, ಲಿಂಕ್ ರೋಡ್​ ಮತ್ತು ಎಂಜಿ ರಸ್ತೆಯ ಮೂಲಕ ಮಾತ್ರ ಇರುತ್ತದೆ. ಕ್ವೀನ್ಸ್ ರೋಡ್​ ಪ್ರವೇಶ ನಿರ್ಬಂಧ ಎಂಬುದು ಗಮನದಲ್ಲಿರಲಿ.