- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರ
- ಓಪನಿಂಗ್ ಪಂದ್ಯಕ್ಕೆ ಟಿಕೆಟ್ಗಳ ಬುಕ್ಕಿಂಗ್ ಜೋರು
- ಈ ಮಧ್ಯೆ ಒಂದಷ್ಟು ಅಭಿಮಾನಿಗಳಿಂದ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಬೇಸರ
RCB Tickets: ಮಾ.28ರಂದು ಆರಂಭವಾಗಲಿರುವ ಐಪಿಎಲ್ 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಿಕ್ಸ್ಟಾರ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಪಂದ್ಯದ ಟಿಕೆಟ್ಗಳು ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಬುಕ್ಕಿಂಗ್ ಆದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಸೋಲ್ಡ್ ಔಟ್ ಆಗಿದೆ ಎಂದು ತೋರಿಸಿರುವುದೇ ಸದ್ಯ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಸನ್ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲು ಸಜ್ಜಾಗಿರುವ ಆರ್‌ಸಿಬಿ, ತನ್ನ ತವರಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವುದು ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಗಿದೆ. ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಆಸೆಯಲ್ಲಿ ಫ್ರಾಂಚೈಸಿಯ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದಿನಿಂದಲೇ ಟಿಕೆಟ್ ಪಡೆಯಲು ಫ್ಯಾನ್ಸ್ ಮುಗಿಬಿದ್ದಿದ್ದು, 4 ಗಂಟೆಯ ಹೊತ್ತಿಗೆ ಲಾಗಿನ್ ಆದರೂ ಟಿಕೆಟ್ಗಳು ಇಲ್ಲ ಎಂದರೆ ಹೇಗೆ? ಅಭಿಮಾನಿಗಳಿಗೆ ಸಿಗ್ತಿಲ್ಲ ಎನ್ನುವುದಾದರೆ, ಮತ್ಯಾವ ಪ್ರಯೋಜನಕ್ಕೆ ಬುಕ್ಕಿಂಗ್ ತೆರೆಯಲಾಗಿದೆ ಎಂದು ಕೆಲ ಆರ್‌ಸಿಬಿ ಫ್ಯಾನ್ಸ್ ತಮ್ಮ ಬೇಸರ ಹೊರಹಾಕಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, ಪ್ರತಿ ವರ್ಷದ ಐಪಿಎಲ್ನಲ್ಲಿಯೂ ಹೀಗೆ ಆಗುತ್ತೆ. ಸ್ಟೇಡಿಯಂನ ಹಲವು ಸ್ಟ್ಯಾಂಡ್ಸ್ಗಳು ಅದಾಗಲೇ ಬ್ಲಾಕ್ ಆಗಿವೆ. ಇಲ್ಲಿ ಬ್ಲ್ಯಾಕ್ ಟಿಕೆಟ್ಗಳ ಗೋಲ್ಮಾಲ್ ನಡೆದಿವೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನೊಬ್ಬರು, ನಾನು ಎರಡು ಸೀಟ್ಗೆ ಪೇಮೆಂಟ್ ಮಾಡಿದ್ದೇನೆ. ಹಣ ಡೆಬಿಟ್ ಆಗಿದೆ. ಆದರೆ, ನಮ್ಮ ಸೀಟ್ ಕನ್ಫರ್ಮ್ ಆಗಿಲ್ಲ. ದಯವಿಟ್ಟು ನಿಮ್ಮ ಸಿಸ್ಟಮ್ ಅನ್ನು ಮೊದಲು ಸರಿಪಡಿಸಿ ಎಂದು ಆರ್ಸಿಬಿಯನ್ನು ಟ್ಯಾಗ್ ಮಾಡಿ ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಟಿಕೆಟ್ ಖರೀದಿ ಎಲ್ಲಿ?
ಕ್ರಿಕೆಟ್ ಅಭಿಮಾನಿಗಳು ಪಂದ್ಯದ ಟಿಕೆಟ್‌ಗಳನ್ನು ಆರ್ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಖರೀದಿಸುವುದು ಒಳಿತು ಎಂದು ಆರ್‌ಸಿಬಿ ಇಂದು (ಮಾ.24) ಬೆಳಗ್ಗೆಯೇ ತಿಳಿಸಿತ್ತು. ಇಲ್ಲಿ ಮಾತ್ರ ಟಿಕೆಟ್ಗಳು ಲಭ್ಯವಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೆಸರೇಳಿಕೊಂಡು ಬರುವ ನಕಲಿ ವೆಬ್ಸೈಟ್ಗಳಿಂದ ಮೋಸ ಹೋಗಬೇಡಿ. ಇಂತಜ ಆ್ಯಪ್ ಅಥವಾ ವೆಬ್ಸೈಟ್ನಿಂದ ಟಿಕೆಟ್ ಖರೀದಿಸಬೇಡಿ ಎಂದಿತ್ತು. ಆದರೀಗ, ಬುಕ್ಕಿಂಗ್ನಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬಂದಿರುವುದು ಸದ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).