ಕೊನೆಗೂ RCB ಫ್ಯಾನ್ಸ್​ಗೆ ಸಿಕ್ತು ಗುಡ್​ ನ್ಯೂಸ್​! 
ಐಪಿಎಲ್

ಕೊನೆಗೂ RCB ಫ್ಯಾನ್ಸ್​ಗೆ ಸಿಕ್ತು ಗುಡ್​ ನ್ಯೂಸ್​: ಚಿನ್ನಸ್ವಾಮಿಯಲ್ಲಿ ಆಡಲು ಒಪ್ಪಿದ ಪಾಟೀದಾರ್​ ಪಡೆ ಆದರೆ...

ಪ್ರಮುಖ ಮುಖ್ಯಾಂಶಗಳು

  • ತವರಿನ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಒಪ್ಪಿದ ಆರ್​ಸಿಬಿ
  • ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ತನ್ನ ನಿರ್ಧಾರ ತಿಳಿಸಿದ ಆರ್​ಸಿಬಿ
  • ಆರ್​ಸಿಬಿ ನಿರ್ಧಾರದಿಂದ ಅಭಿಮಾನಿಗಳಿಗೆ ಖುಷಿಯೋ ಖುಷಿ
ಬೆಂಗಳೂರು: ಹಾಲಿ ಚಾಂಪಿಯನ್​ ಆರ್​ಸಿಬಿ ( RCB ) ತಂಡ ಮುಂಬರುವ ಐಪಿಎಲ್​ (IPL) 19ನೇ ಆವೃತ್ತಿಯಲ್ಲಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಒಪ್ಪಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೆ, ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿತ್ತು. ಆದರೆ, ಅಂತಿಮವಾಗಿ ಒಪ್ಪಿಗೆ ನೀಡಿರುವ ಆರ್​ಸಿಬಿ, ಕೇವಲ ಐದು ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ನ್ಯಾ.ಡಿ. ಕುನ್ಹಾ ವರದಿಯ ಅನುಷ್ಠಾನಕ್ಕಾಗಿ ಈಗಾಗಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು, ಮಾರ್ಚ್​ 15ರೊಳಗೆ ಎಲ್ಲ ಕೆಲಸವನ್ನು ಮುಗಿಸುವ ವಿಶ್ವಾಸವನ್ನೂ ಹೊಂದಿದೆ.
ಐಪಿಎಲ್​ ಪಂದ್ಯಗಳಿಗೆ ರಾಜ್ಯ ಸರ್ಕಾರದಿಂದ ಅನುಮತಿ ಕೊಡಿಸುವುದರೊಂದಿಗೆ ಕೆಎಸ್​ಸಿಎ ಜವಾಬ್ದಾರಿ ಮುಗಿದಿದೆ. ಇದೀಗ ಆರ್​ಸಿಬಿ ಕೂಡ ಐದು ಪಂದ್ಯಗಳನ್ನು ಆಡುವುದಾಗಿ ಒಪ್ಪಿಗೆ ಸೂಚಿಸಿದ್ದು, ಅಭಿಮಾನಿಗಳ ಬಳಿಯಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಂತಿಮವಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್​ಸಿಬಿ ಒಪ್ಪಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ.
ಆರಂಭದಲ್ಲಿ ಆರ್​ಸಿಬಿ ಫ್ರಾಂಚೈಸಿ, ಛತ್ತೀಸ್​ಗಢದ ರಾಯ್ಪುರದಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡುವ ಬಗ್ಗೆ ಒಲವು ಹೊಂದಿತ್ತು ಎನ್ನಲಾಗಿದೆ. ಆದರೆ, ಅಂತಿಮವಾಗಿ ಮನಸ್ಸು ಬದಲಿಸಿದ ಆರ್​ಸಿಬಿ ಬೆಂಗಳೂರಿನಲ್ಲೇ ಆಡಲು ನಿರ್ಧರಿಸಿದೆ, (ಏಜೆನ್ಸೀಸ್​).