ಐಪಿಎಲ್​ 2026ರ ಬೆನ್ನಲ್ಲೇ ಬೆಸ್ಟ್ ಪ್ಲೇಯಿಂಗ್​ 12 ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್: ಕೊಹ್ಲಿಗಿದೆಯಾ ಸ್ಥಾನ? Ravichandran Ashwin 
ಐಪಿಎಲ್

ಐಪಿಎಲ್​ 2026ರ ಬೆನ್ನಲ್ಲೇ ಬೆಸ್ಟ್ ಪ್ಲೇಯಿಂಗ್​ 12 ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್: ಕೊಹ್ಲಿಗಿದೆಯಾ ಸ್ಥಾನ? Ravichandran Ashwin

ಪ್ರಮುಖ ಮುಖ್ಯಾಂಶಗಳು

  • ಸುಮಾರು 2 ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಐಪಿಎಲ್​ ಎಂಬ ಮಹಾ ಉತ್ಸವಕ್ಕೆ ವಿದ್ಯುಕ್ತ ತೆರೆ
  • ಮೇ 31ರಂದು ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್​ಸಿಬಿ
  • ಫೈನಲ್ ಮುಗಿದ ಎರಡು ದಿನಗಳ ಬಳಿಕ ತಮ್ಮ ನೆಚ್ಚಿನ 'ಬೆಸ್ಟ್ 12' ಆಟಗಾರರನ್ನು ಹೆಸರಿಸಿದ ರವಿಚಂದ್ರನ್​ ಅಶ್ವಿನ್​
Ravichandran Ashwin : ಹಲವು ಮರೆಯಲಾಗದ ದಾಖಲೆಗಳಿಗೆ ಸಾಕ್ಷಿಯಾದ ಐಪಿಎಲ್ 2026 ಟೂರ್ನಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಸೀಸನ್‌ನಲ್ಲಿ 15ರ ಹರೆಯದ ವಂಡರ್‌ಕಿಡ್ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಪ್ರತಿಭೆಯಾಗಿ ಹೊರಹೊಮ್ಮಿದರೆ, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬರೋಬ್ಬರಿ 28 ವಿಕೆಟ್ ಪಡೆಯುವ ಮೂಲಕ ಭರ್ಜರಿ ಪ್ರದರ್ಶನ ನೀಡಿದರು. ಇನ್ನು ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ರೋಚಕ ಫೈನಲ್ ಮುಗಿದ ಕೇವಲ ಎರಡೇ ದಿನಗಳ ಬಳಿಕ, ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಈ ಬಾರಿಯ ಐಪಿಎಲ್ ಪ್ರದರ್ಶನಗಳನ್ನು ಆಧರಿಸಿ ತಮ್ಮ ನೆಚ್ಚಿನ 'ಬೆಸ್ಟ್ 12' ಆಟಗಾರರ ಬಲಿಷ್ಠ ತಂಡವನ್ನು ಆಯ್ಕೆ ಮಾಡಿ ಪ್ರಕಟಿಸಿದ್ದಾರೆ.
ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವ ಐಪಿಎಲ್ 2026ರ ಬೆಸ್ಟ್ ಇಲೆವೆನ್ ತಂಡದಲ್ಲಿ ಆರಂಭಿಕರಾಗಿ ರಾಜಸ್ತಾನ ರಾಯಲ್ಸ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತು ಗುಜರಾತ್ ಟೈಟನ್ಸ್ ನಾಯಕ ಶುಭಮಾನ್ ಗಿಲ್ ಅವರಿಗೆ ಸ್ಥಾನ ನೀಡಿದ್ದಾರೆ. ಇನ್ನು ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ಓಪನರ್ ಆಗಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಅಶ್ವಿನ್ ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಕೊಹ್ಲಿ ಈ ಟೂರ್ನಿಯಲ್ಲಿ 56.25 ರ ಸರಾಸರಿಯಲ್ಲಿ ಬರೋಬ್ಬರಿ 675 ರನ್ ಚಚ್ಚಿ ಅಬ್ಬರಿಸಿದ್ದರು. ಇವರ ಬೆನ್ನಲ್ಲೇ ನಾಲ್ಕನೇ ಸ್ಥಾನಕ್ಕೆ 624 ರನ್ ಗಳಿಸಿದ ಸನ್‌ರೈಸರ್ಸ್‌ನ ಹೆನ್ರಿಚ್ ಕ್ಲಾಸೆನ್ ಅವರನ್ನು ಹೆಸರಿಸಿದ್ದಾರೆ.
ತಂಡದ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಆರ್‌ಸಿಬಿ ನಾಯಕ ರಜತ್ ಪಾಟೀದಾರ್ (5ನೇ ಸ್ಥಾನ) ಮತ್ತು ನಿತೀಶ್ ರೆಡ್ಡಿ (6ನೇ ಸ್ಥಾನ) ಅವರನ್ನು ಅಶ್ವಿನ್ ಆಯ್ಕೆ ಮಾಡಿದ್ದಾರೆ. ಪಾಟೀದಾರ್ 192.69 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 500 ರನ್ ಗಳಿಸಿದರೆ, ನಿತೀಶ್ ರೆಡ್ಡಿ 300 ರನ್ ಹಾಗೂ 8 ವಿಕೆಟ್ ಕಸಿದು ಮಿಂಚಿದ್ದಾರೆ. ಇನ್ನು ಏಳನೇ ಸ್ಥಾನದ ಆಲ್‌ರೌಂಡರ್ ಕೋಟಾದಲ್ಲಿ 226 ರನ್ ಹಾಗೂ 14 ವಿಕೆಟ್ ಪಡೆದ ಆರ್‌ಸಿಬಿಯ ಕೃಣಾಲ್ ಪಾಂಡ್ಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅಶ್ವಿನ್ ತಮ್ಮ ತಂಡದ ಬೌಲಿಂಗ್ ವಿಭಾಗಕ್ಕಾಗಿ ಮೂವರು ವಿದೇಶಿ ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿದ್ದಾರೆ. ಜೇಮಿ ಓವರ್ಟನ್, ಸುನಿಲ್ ನರೈನ್ ಮತ್ತು ಕಗಿಸೊ ರಬಾಡ ಅವರೊಂದಿಗೆ ಈ ಸೀಸನ್‌ನಲ್ಲಿ 28 ವಿಕೆಟ್ ಉರುಳಿಸಿ ಅಬ್ಬರಿಸಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಅತ್ಯಂತ ಪ್ರಮುಖ 'ಇಂಪ್ಯಾಕ್ಟ್ ಪ್ಲೇಯರ್' ಪಾತ್ರಕ್ಕಾಗಿ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಅವರನ್ನು ಅಶ್ವಿನ್ ಆಯ್ಕೆ ಮಾಡಿಕೊಂಡಿದ್ದಾರೆ.
ಇದೇ ವಿಡಿಯೋದಲ್ಲಿ ಮಾತನಾಡಿದ ಅಶ್ವಿನ್, ಐಪಿಎಲ್ 2026ರ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿಗೆ ಕಾರಣರಾದ ಪ್ರಮುಖ ಐದು ಜನರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಆರ್‌ಸಿಬಿ ಮುಂದಿನ ದಿನಗಳಲ್ಲಿ ಸರಣಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಮರ್ಥ್ಯ ಹೊಂದಿದೆ. ರನ್ನರ್-ಅಪ್ ಆದ ಗುಜರಾತ್ ಟೈಟನ್ಸ್ ಕೂಡ ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆ ಪಡಬಹುದು. ಆದರೆ ಆರ್‌ಸಿಬಿಯ ಈ ಐತಿಹಾಸಿಕ ರನ್ ಚೇಸ್ ಮತ್ತು ಗೆಲುವಿನ ಕ್ರೆಡಿಟ್ ಅನ್ನು ನಾನು ಮುಖ್ಯವಾಗಿ ಐದು ಜನರಿಗೆ ನೀಡಲು ಬಯಸುತ್ತೇನೆ; ಅವರೇ ಆಂಡಿ ಫ್ಲವರ್, ಮೋ ಬೊಬಾಟ್, ದಿನೇಶ್ ಕಾರ್ತಿಕ್ ಮತ್ತು ಅವರ ಸಪೋರ್ಟ್ ಸ್ಟಾಫ್, ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ" ಎಂದು ಅಶ್ವಿನ್ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ, (ಏಜೆನ್ಸೀಸ್​).