ಪಂಜಾಬ್ ಕಿಂಗ್ಸ್, ಆರ್‌ಸಿಬಿ
- ಪಂಜಾಬ್ ಕಿಂಗ್ಸ್ ಗ್ರಹಚಾರ ಯಾಕೋ ಸರಿಯಿಲ್ಲ
- 19ನೇ ಆವೃತ್ತಿಯಲ್ಲಿ ಮೊದಲ 7 ಗೆಲುವು, ಅಲ್ಲಿಂದ ಸತತ ಆರನೇ ಹೀನಾಯ ಸೋಲು
- ಇನ್ನೊಂದು ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಅನುಮಾನ
- ಆರ್‌ಸಿಬಿ ಎದುರು ಮಂಡಿಯೂರಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಓನರ್ ಪ್ರೀತಿ ಜಿಂಟಾ ಮುಂದೆ ಕೈಕಟ್ಟಿದ ಶ್ರೇಯಸ್ ಅಯ್ಯರ್
Punjab Kings: 19ನೇ ಆವೃತ್ತಿಯ ಐಪಿಎಲ್ನ ಆರಂಭದಲ್ಲಿ ಸಿಂಹದಂತೆ ಘರ್ಜಿಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್, ಸೀಸನ್ನ ಮೊದಲಾರ್ಧದಲ್ಲಿ ಸತತ ಏಳು ಪಂದ್ಯಗಳಲ್ಲಿ ಗೆಲುವು ನೋಡುವ ಮೂಲಕ ನಮ್ಮಷ್ಟು ಬಲಿಷ್ಠ ತಂಡ ಮತ್ತೊಂದು ಇದೆಯಾ? ಎನ್ನುವಂತೆ ಗರ್ವದಲ್ಲಿ ಬೀಗುತ್ತಿತ್ತು. ಎದುರಾಳಿ ತಂಡಗಳಿಗೆ ಸಖತ್ ಪೈಪೋಟಿ ಕೊಡುತ್ತಿದ್ದ ಪಂಜಾಬ್ ಪಡೆಗೆ ಈಗ ಸರಣಿ ಸೋಲಿನ ಮುಖಭಂಗ ಬಿಟ್ಟರೆ ಬೇರೇನೂ ಉಳಿದಿಲ್ಲ. ಇಷ್ಟಕ್ಕೆಲ್ಲ ಕಾರಣ, ಅವತ್ತು ತನಗೆ ಸಂಬಂಧವಿಲ್ಲದ ಆರ್‌ಸಿಬಿ ಪಂದ್ಯದಲ್ಲಿ ಮೂಗು ತೂರಿಸಿದ್ದು.
2026ರ ಲೀಗ್ನಲ್ಲಿ ಮೊದಲ ಏಳು ಪಂದ್ಯಗಳನ್ನು ಗೆದ್ದು ಬೀಗಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್, ಸೋಲಿಲ್ಲದ ಸರದಾರನಂತೆ ಪ್ಲೇಆಫ್‌ಗೆ ಸುಲಭವಾಗಿ ಎಂಟ್ರಿ ಕೊಡಲಿರುವ ಮೊದಲ ತಂಡ ಎಂದು ಮೊದಲಾರ್ಧದಲ್ಲೇ ಕ್ರಿಕೆಟ್ ಪ್ರಿಯರಿಂದ ವ್ಯಾಪಕ ಪ್ರಶಂಸೆ, ಭರವಸೆಗಳನ್ನು ಪಡೆದಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸರಣಿ ಸೋಲುಗಳನ್ನು ನೋಡ್ತಿರುವ ಶ್ರೇಯಸ್ ಪಡೆ, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಲು ಶತಾಯಗತಾಯ ಪ್ರಯತ್ನ ಮಾಡಿದ್ದೇ ಆದರೂ ಗೆಲುವು ನೋಡಲು ಆಗಲಿಲ್ಲ. ಸತತ ಆರನೇ ಸೋಲಿನಿಂದ ಕಂಗೆಟ್ಟ ಶ್ರೇಯಸ್ ತಂಡವು ಫ್ರಾಂಚೈಸಿಯ ಸಹ ಓನರ್ ಪ್ರೀತಿ ಜಿಂಟಾ ಎದುರು ಕೈಕಟ್ಟಿ ನಿಲ್ಲುವಂತ ಪರಿಸ್ಥಿತಿ ಬಂದಿತು.
ಭಾನುವಾರ (ಮೇ.17) ಧರ್ಮಶಾಲಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 23 ರನ್‌ಗಳಿಂದ ಸೋತು ಭಾರೀ ಮುಖಭಂಗ ಅನುಭವಿಸಿತು. ಇದು ಪಂಜಾಬ್‌ನ ಪ್ಲೇಆಫ್ ಅವಕಾಶ ಬಹುತೇಕ ಅನುಮಾನ ಎನ್ನುವಂತೆ ಮಾಡಿದೆ. ಮತ್ತೊಂದೆಡೆ, ಗೆಲುವಿನ ಕುದುರೆ ಆಗಿದ್ದ ಪಂಜಾಬ್ ಕಿಂಗ್ಸ್ ತನಗೆ ಸಂಬಂಧವಿಲ್ಲದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 49ಕ್ಕೆ ಆಲ್ಔಟ್ ಆಗಿದ್ದನ್ನು ನೆನಪಿಸುವ ಮೂಲಕ ಲಾಯಲ್ ಫ್ಯಾನ್ಸ್ಗಳನ್ನು ಕೆಣಕಿತು. ಇಲ್ಲಿಂದ ನೋಡಿ ಆರಂಭವಾಗಿದ್ದು ಅಸಲಿ ಆಟ.
ಅದು ಏ.28ರಂದು ನಡೆದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ. ಈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ 49ಕ್ಕೆ ಆಲ್ಔಟ್ ಆಗಲಿದೆ ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದ ಪಂಜಾಬ್ ಕಿಂಗ್ಸ್, ರಜತ್ ಪಡೆಯ ಬ್ಯಾಟಿಂಗ್ ವೇಳೆ ತಂಡವು 4.3 ಓವರ್ನಲ್ಲಿ 49 ರನ್ಗೆ 1 ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿತು. ಅಂದರೆ, 49ಕ್ಕೆ 10 ವಿಕೆಟ್ಗಳನ್ನು ಕಳೆದುಕೊಂಡಿದ್ದ ಆರ್ಸಿಬಿಗೆ 49 ಸಂಖ್ಯೆಯನ್ನು ನೆನಪಿಸುವ ಮೂಲಕ ಟೀಕಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ಆಟಗಾರರು ಮತ್ತು ಲಾಯಲ್ ಫ್ಯಾನ್ಸ್, ನಿಮಗೆ ಮುಂದಿನ ದಿನಗಳಲ್ಲಿ ಸರಿಯಾದ ಟಕ್ಕರ್ ಕೊಡ್ತೀವಿ ಎಂದು ಮನಸಿನಲ್ಲೇ ಅಂದುಕೊಂಡಿದ್ದರು. ಅದರ ಪರಿಣಾಮವೋ ಏನೋ, ಅಲ್ಲಿಂದ ಇಲ್ಲಿಯವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಆರು ಪಂದ್ಯವನ್ನೂ ಶ್ರೇಯಸ್ ಪಡೆ ಸೋತಿರುವುದು ಗಮನಾರ್ಹ.
ಆರ್‌ಸಿಬಿ ಎದುರಿಗಿನ ಪಂದ್ಯದಲ್ಲಿಯೂ ಕೆಲವು ಘಟನೆಗಳು ವೈರತ್ವವನ್ನು ಎತ್ತಿಹಿಡಿಯಿತು. ಪಂಜಾಬ್ ಕಿಂಗ್ಸ್ ಆಟಗಾರ ಬ್ರಾರ್ ವಿರಾಟ್ ಬ್ಯಾಟಿಂಗ್ ವೇಳೆ ಜೋರಾಗಿ ವಿಕೆಟ್ನತ್ತ ಬಾಲ್ ಬೀಸಲು ನೋಡಿದಾಗ, ಕೊಹ್ಲಿ ಸಖತ್ ಚಮಕ್ ನೀಡಿದರು. ಇನ್ನು ಪಂಜಾಬ್ ಬ್ಯಾಟಿಂಗ್ನಲ್ಲಿ ಒಮರ್ಜೈ ಅವರ ವಿಕೆಟ್ ಪಡೆದ ತಕ್ಷಣ ಟಿಮ್ ಡೇವಿಡ್ ತೊಡೆ ತಟ್ಟುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಖಡಕ್ ತಿರುಗೇಟು ನೀಡಿದರು. ಈ ಎಲ್ಲ ದೃಶ್ಯಗಳನ್ನು ಗಮನಿಸಿದ ಆರ್‌ಸಿಬಿ ಅಭಿಮಾನಿಗಳು, ಅಂದು ನಮ್ಮನ್ನು ಕೆಣಕದೆ ಸುಮ್ಮನೆ ಇದ್ದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಇಂಥ ಹೀನಾಯ ಸೋಲೂ ಬರುತ್ತಿರಲಿಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಶ್ರೇಯಸ್ ಪಡೆಯನ್ನು ಟೀಕಿಸುತ್ತಿದ್ದಾರೆ. ಇದೊಂದು ರೀತಿ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎನ್ನುವಂತಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ. ಒಟ್ಟಾರೆ, ಆರ್‌ಸಿಬಿ ಎರಡನೇ ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿಯವತ್ತ ಭರದಿಂದ ಸಾಗುತ್ತಿದ್ದು, ಯಾರಿಲ್ಲಿ ಸೋಲಿಲ್ಲದ ಸರದಾರ ಎಂಬ ಮಾತನ್ನು ಕ್ರಿಕೆಟ್ ಪ್ರೇಮಿಗಳಿಗೆ ಗತ್ತಿನಲ್ಲಿ, ಗರ್ವದಿಂದ ನೆನಪಿಸುತ್ತಿದೆ.