ಖಂಡಿತ ಅದು ನನ್ನ... ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸ್ಟಾರ್ ವೇಗಿ ಯಶ್ ದಯಾಳ್! Yash Dayal
- ಪ್ರಸಕ್ತ ಐಪಿಎಲ್ ಸೀಸನ್‌ನಿಂದ ಹೊರಗುಳಿದಿರುವ ಬಗ್ಗೆ ಕೊನೆಗೂ ಮೌನ ಮುರಿದ ಆರ್‌ಸಿಬಿ ವೇಗಿ ಯಶ್ ದಯಾಳ್
- ಟಾಕ್ ವಿತ್ ಮನ್ವೇಂದ್ರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ದಯಾಳ್ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ
- ವೈಯಕ್ತಿಕ ಕಾರಣಗಳಿಂದಾಗಿ ದಯಾಳ್ ಆಡುತ್ತಿಲ್ಲ ಎಂಬ ಮ್ಯಾನೇಜ್‌ಮೆಂಟ್ ಹೇಳಿಕೆಯನ್ನು ತಳ್ಳಿಹಾಕಿದ ಸ್ಟಾರ್ ವೇಗಿ
- ಪ್ರಸಕ್ತ ಸೀಸನ್‌ನಿಂದ ನಾನು ಹೊರಗುಳಿದಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ ಎಂದು ಸ್ಪಷ್ಟನೆ ನೀಡಿದ ದಯಾಳ್
Yash Dayal : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗಿ ಯಶ್ ದಯಾಳ್ ಪ್ರಸಕ್ತ ಐಪಿಎಲ್ ಸೀಸನ್‌ನಿಂದ ಹೊರಗುಳಿದಿರುವ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು, ಯಶ್ ದಯಾಳ್ "ವೈಯಕ್ತಿಕ ಕಾರಣಗಳಿಂದಾಗಿ" ಈ ವರ್ಷ ಪಂದ್ಯಗಳನ್ನು ಆಡುತ್ತಿಲ್ಲ ಎಂದು ತಿಳಿಸಿದ್ದರು. ಆದರೆ, ಮ್ಯಾನೇಜ್‌ಮೆಂಟ್ ನೀಡಿದ್ದ ಈ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ 28 ವರ್ಷದ ಈ ಎಡಗೈ ವೇಗಿ, ತಾವು ಆಡದಿದ್ದರೂ ಇಂದಿಗೂ ಆರ್‌ಸಿಬಿ ತಂಡದ ಭಾಗವಾಗಿಯೇ ಇದ್ದೇನೆ ಎಂದು ಹೇಳುವ ಮೂಲಕ ಬೊಬಾಟ್ ಅವರ ವಿವರಣೆಗೆ ತದ್ವಿರುದ್ಧವಾದ ಹೇಳಿಕೆ ನೀಡಿರುವುದು ಈಗ ಆರ್‌ಸಿಬಿ ಕ್ಯಾಂಪ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.
'ಟಾಕ್ ವಿತ್ ಮನ್ವೇಂದ್ರ' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಯಶ್ ದಯಾಳ್, ತಾವು ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಪ್ರಸಕ್ತ ಐಪಿಎಲ್ ಸೀಸನ್‌ನಿಂದ ಹೊರಗುಳಿಯುವ ನಿರ್ಧಾರ ತಮ್ಮದಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದಿಂದ ಹೊರಗುಳಿದಿರುವುದರ ಹಿಂದೆ ಮ್ಯಾನೇಜ್‌ಮೆಂಟ್ ನಿರ್ಧಾರವಿತ್ತು ಎಂಬುದನ್ನು ಅವರು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಮುಕ್ತವಾಗಿ ಮಾತನಾಡಿದ ಯಶ್ ದಯಾಳ್, ನಾನು ಪಂದ್ಯದಿಂದ ಹೊರಗುಳಿದು ಟಿವಿಯಲ್ಲಿ ಆಟ ನೋಡುವಾಗ ಸದಾ ಎದ್ದು ನಿಲ್ಲುವಷ್ಟು ತಳಮಳ ನನ್ನಲ್ಲಿ ಉಂಟಾಗುತ್ತದೆ. ಹೇಳಬೇಕೆಂದರೆ, ಆರ್‌ಸಿಬಿ ನನ್ನನ್ನು ತಂಡದಿಂದ ಕೈಬಿಟ್ಟಿಲ್ಲ, ನನ್ನ ರಿಟೇನ್ ಮಾಡಿಕೊಂಡಿದ್ದೂ ನನ್ನ ಬದಲಿ ಆಟಗಾರನನ್ನು ಕೂಡ ಕರೆತಂದಿಲ್ಲ, ಅಂದರೆ ನಾನು ತಂಡದ ಪ್ರಮುಖ ಭಾಗ ಎಂದು ಅವರು ಭಾವಿಸಿದ್ದಾರೆ ಎಂದು ದಯಾಳ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ದಯಾಳ್, ಪ್ರಸಕ್ತ ಸೀಸನ್‌ನಿಂದ ನಾನು ಹೊರಗುಳಿದಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ, ಈ ಮಾತು ವಿವಾದಕ್ಕೆ ಕಾರಣವಾಗಬಹುದು ಆದರೆ, ಅಂತಿಮ ತೀರ್ಮಾನ ಯಾವಾಗಲೂ ಮ್ಯಾನೇಜ್‌ಮೆಂಟ್‌ಗೆ ಸೇರಿದ್ದು, ಆರ್‌ಸಿಬಿ ಈ ನಿರ್ಧಾರ ತೆಗೆದುಕೊಳ್ಳಲು ಅಸಲಿ ಕಾರಣ ಏನೆಂದು ನನಗೂ ಗೊತ್ತಿಲ್ಲ ಎಂದು ದಯಾಳ್ ಅಸಮಾಧಾನ ಹೊರಹಾಕಿದ್ದಾರೆ. ಕೊನೆಯದಾಗಿ, ತಾವು ಆರ್‌ಸಿಬಿ ತಂಡವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಮತ್ತು ತಂಡ ತನ್ನನ್ನು ಮಿಸ್ ಮಾಡಿಕೊಳ್ಳುತ್ತಿದೆಯೋ ಇಲ್ಲವೋ ಎಂಬುದನ್ನು ಅಭಿಮಾನಿಗಳೇ ಹೇಳಬೇಕು ಎಂದು ದಯಾಳ್ ಭಾವುಕರಾಗಿ ನುಡಿದಿದ್ದಾರೆ.
ಮೈದಾನದಿಂದ ದೂರವಿದ್ದರೂ ತಾವು ಟೀಮ್ ಮೆಂಟರ್ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಯಶ್ ದಯಾಳ್ ತಿಳಿಸಿದ್ದಾರೆ. ನಾನು ತಂಡದ ನಿರ್ದೇಶಕರು, ಕೋಚ್ ಹಾಗೂ ದಿನೇಶ್ ಕಾರ್ತಿಕ್ ಅವರೊಂದಿಗೆ ನಿಯಮಿತವಾಗಿ ಮಾತನಾಡುತ್ತಲೇ ಇದ್ದೇನೆ. ನಮ್ಮ ನಡುವೆ ಯಾವುದೇ ಕಮ್ಯುನಿಕೇಷನ್ ಗ್ಯಾಪ್ ಇಲ್ಲ ಮತ್ತು ಎಲ್ಲವೂ ಅತ್ಯಂತ ಸ್ಪಷ್ಟವಾಗಿದೆ ಎಂದು ದಯಾಳ್ ಹೇಳಿದ್ದಾರೆ.
ಅಂದಹಾಗೆ, ಈ ಒಟ್ಟಾರೆ ಬೆಳವಣಿಗೆಯ ಅಸಲಿ ಹಿನ್ನೆಲೆಯನ್ನು ನೋಡುವುದಾದರೆ, ಯಶ್ ದಯಾಳ್ ಪ್ರಸಕ್ತ ಸೀಸನ್‌ನಿಂದ ಹೊರಗುಳಿಯಲು ಅವರ ವೈಯಕ್ತಿಕ ಕಾರಣಗಳಲ್ಲ, ಬದಲಿಗೆ ಅವರು ಪ್ರಸ್ತುತ ಎದುರಿಸುತ್ತಿರುವ ಕಾನೂನು ಪ್ರಕ್ರಿಯೆಗಳೇ ಪ್ರಮುಖ ಕಾರಣವಾಗಿದ್ದು, ಅವುಗಳಿಂದಾಗಿಯೇ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಾಧ್ಯವಾಗಿಲ್ಲ ಎಂಬ ಕಟು ವಾಸ್ತವ ಇದೀಗ ಬೆಳಕಿಗೆ ಬಂದಿದೆ.
ಕ್ರಿಕೆಟಿಗ ಯಶ್ ದಯಾಳ್ ಪ್ರಸಕ್ತ ಐಪಿಎಲ್ ಸೀಸನ್‌ನಿಂದ ಹೊರಗುಳಿಯಲು ಅವರ ಮೇಲಿರುವ ಗಂಭೀರ ಕಾನೂನು ಆರೋಪಗಳೇ ಕಾರಣ ಎಂಬುದು ಎಫ್‌ಐಆರ್ ವರದಿಗಳಿಂದ ಬಹಿರಂಗವಾಗಿದೆ. ಇವರ ವಿರುದ್ಧ ಲೈಂಗಿಕ ಶೋಷಣೆ ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಎರಡು ಪ್ರತ್ಯೇಕ ಗಂಭೀರ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ, ಜುಲೈ 6 ರಂದು ಗಾಜಿಯಾಬಾದ್ ಜಿಲ್ಲೆಯ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69 ರ ಅಡಿಯಲ್ಲಿ ದೂರು ದಾಖಲಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬ ಗಂಭೀರ ಆರೋಪ ದಯಾಳ್ ಮೇಲಿದೆ.
ಇನ್ನು ಜೈಪುರದ ಸಂಗಾನೇರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡನೇ ಪ್ರಕರಣದ ಎಫ್‌ಐಆರ್ ವರದಿಯನ್ನು ಎನ್‌ಡಿಟಿವಿ ಬಹಿರಂಗಪಡಿಸಿದೆ. ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಯಶ್ ದಯಾಳ್ ಹುಡುಗಿಯೊಬ್ಬಳ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಇದರಲ್ಲಿ ಆರೋಪಿಸಲಾಗಿದೆ. ಕ್ರಿಕೆಟ್‌ನಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಡುವುದಾಗಿ ನಂಬಿಸಿ ಸೀತಾಪುರದ ಹೋಟೆಲ್‌ವೊಂದಕ್ಕೆ ಕರೆಸಿ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂದು ವರದಿಯಾಗಿದೆ. ದೌರ್ಜನ್ಯ ಆರಂಭವಾದಾಗ ಆ ಹುಡುಗಿಗೆ ಕೇವಲ 17 ವರ್ಷ ವಯಸ್ಸಾಗಿದ್ದರಿಂದ, ಪೊಲೀಸರು ಯಶ್ ದಯಾಳ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಆರ್‌ಸಿಬಿ ಈ ಬಾರಿ ಟೂರ್ನಿಯಿಂದ ಕೈಬಿಟ್ಟಿದೆ ಎಂಬ ಮಾತಿದೆ, (ಏಜೆನ್ಸೀಸ್).