ಕೇವಲ ಬೋರ್ ಅಷ್ಟೇ... ಐಪಿಎಲ್ ಮುಗಿದ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್! Liam Livingstone
ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ( Liam Livingstone ) ಅವರು ಐಪಿಎಲ್ 2026ರಲ್ಲಿ ಬಳಸಲಾದ ಪಿಚ್‌ಗಳ ಗುಣಮಟ್ಟವನ್ನು ತೀವ್ರವಾಗಿ ಟೀಕಿಸಿದ್ದು, ಅತಿಯಾದ ರನ್ ಮಳೆ ನೋಡನೋಡುತ್ತಾ 'ತುಂಬಾ ಬೋರ್' ಎನಿಸುತ್ತದೆ ಎಂದು ಹೇಳಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡವು ಹರಾಜಿನಲ್ಲಿ 13 ಕೋಟಿ ರೂ. ನೀಡಿ ಖರೀದಿಸಿದ್ದ ಲಿವಿಂಗ್‌ಸ್ಟೋನ್, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವು 244 ರನ್‌ಗಳ ಬೃಹತ್ ಗುರಿಯನ್ನು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಚೇಸ್ ಮಾಡಿದ ಉದಾಹರಣೆಯನ್ನು ನೀಡಿದ್ದಾರೆ. ಮೈದಾನದ ಬೌಂಡರಿಗಳು ಸಾಕಷ್ಟು ದೊಡ್ಡದಾಗಿದ್ದರೂ, ಸಂಪೂರ್ಣ ಫ್ಲಾಟ್ ಆಗಿದ್ದ ಪಿಚ್‌ಗಳು ಬ್ಯಾಟರ್‌ಗಳಿಗೆ ಭಾರಿ ಲಾಭವನ್ನು ಮಾಡಿಕೊಟ್ಟವು ಎಂದು ಲಿವಿಂಗ್‌ಸ್ಟೋನ್ ಅಭಿಪ್ರಾಯಪಟ್ಟಿದ್ದಾರೆ.
'ಸ್ಟಿಕ್ ಟು ಕ್ರಿಕೆಟ್' ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಲಿಯಾಮ್ ಲಿವಿಂಗ್‌ಸ್ಟೋನ್, ನಾವು ಮುಂಬೈ ವಿರುದ್ಧ ಆಡುತ್ತಿದ್ದಾಗ 230 ಅಥವಾ 240 ರನ್‌ಗಳ ಬೃಹತ್ ಮೊತ್ತವನ್ನು ಕೇವಲ 18 ಓವರ್‌ಗಳಲ್ಲಿ ಚೇಸ್ ಮಾಡಿದೆವು, ಕೇವಲ ಸಿಕ್ಸರ್‌ಗಳ ಸುರಿಮಳೆಯಾಗುವುದನ್ನು (6, 6, 6) ನೋಡುತ್ತಾ ಕೂರುವುದು ನಿಜಕ್ಕೂ ತುಂಬಾ ಬೋರ್ ಎನಿಸಿತು ಮತ್ತು ಅದರಲ್ಲಿ ಯಾವುದೇ ನೈಜ ಕೌಶಲ್ಯ ಅಡಗಿಲ್ಲ ಎಂದು ನನಗನ್ನಿಸಿತು ಎಂದು ಲಿವಿಂಗ್‌ಸ್ಟೋನ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಲಿವಿಂಗ್‌ಸ್ಟೋನ್, ಐಪಿಎಲ್‌ನಲ್ಲಿ ಪಿಚ್‌ಗಳು ಅತ್ಯಂತ ಫ್ಲಾಟ್ ಆಗಿರುತ್ತವೆ. ಇದರ ಜೊತೆಗೆ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವೂ ಸೇರಿಕೊಳ್ಳುತ್ತದೆ. ಇನ್ನು ಮುಂಬೈ ಪಿಚ್ ಬ್ಯಾಟಿಂಗ್ ಪಿಚ್ ಆಗಿದ್ದು, ಅಲ್ಲಿ ಚೆಂಡು ಅತಿ ವೇಗವಾಗಿ ಹಾರಿಹೋಗುತ್ತದೆ. ಹೈದರಾಬಾದ್‌ನಲ್ಲಿ ಐದಾರು ಬಾರಿ ಒಂದೇ ಪಿಚ್‌ನಲ್ಲಿ ಪಂದ್ಯಗಳನ್ನು ಆಡಲಾಗಿತ್ತು ಎಂದು ತಿಳಿಸಿರುವ ಲಿವಿಂಗ್‌ಸ್ಟೋನ್, ಬೌಂಡರಿಗಳು ಸಾಕಷ್ಟು ದೊಡ್ಡದಾಗಿದ್ದರೂ ಪಿಚ್‌ಗಳು ಸಂಪೂರ್ಣ ಫ್ಲಾಟ್ ಆಗಿದ್ದ ಕಾರಣ ಬ್ಯಾಟರ್‌ಗಳಿಗೆ ಬ್ಯಾಟಿಂಗ್ ಮಾಡುವುದು ತೀರಾ ಸುಲಭವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ ಆಟಕ್ಕೆ ಲಿವಿಂಗ್‌ಸ್ಟೋನ್ ಫಿದಾ
ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಕುರಿತು ಮಾತನಾಡಿರುವ ಲಿಯಾಮ್ ಲಿವಿಂಗ್‌ಸ್ಟೋನ್, ತಮ್ಮ 7 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಈ ಯುವ ಆಟಗಾರನಂತಹ ಬ್ಯಾಟಿಂಗ್ ಪ್ರತಿಭೆಯನ್ನು ತಾವು ಎಂದೂ ನೋಡಿಲ್ಲ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾನು ನನ್ನ ಐಪಿಎಲ್ ಜೀವನದಲ್ಲಿ ಅತ್ಯಂತ ಶ್ರೇಷ್ಠ ಆಟಗಾರರ ಜೊತೆ ಮತ್ತು ಅವರ ವಿರುದ್ಧ ಆಡಿದ್ದೇನೆ, ಆದರೆ ಇಂತಹ ಅದ್ಭುತ ಆಟವನ್ನು ಹಿಂದೆಂದೂ ನೋಡಿಲ್ಲ. ವೈಭವ್ ಚೆಂಡನ್ನು ಹೊಡೆಯುವ ರೀತಿ ಅದ್ಭುತವಾಗಿದ್ದು, ಅತ್ಯಂತ ಕ್ಲೀನ್ ಆಗಿ ಶಾಟ್‌ಗಳನ್ನು ಬಾರಿಸುತ್ತಾನೆ, ಇಡೀ ಟೂರ್ನಮೆಂಟ್‌ನಲ್ಲಿ ಅವನು ಯಾವುದೇ ಚೆಂಡನ್ನು ಮಿಸ್-ಹಿಟ್ (ತಪ್ಪಾಗಿ ಹೊಡೆಯುವುದು) ಮಾಡಲೇ ಇಲ್ಲ ಎಂದು ಹೊಗಳಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಆಟದ ಬೆಳವಣಿಗೆಯನ್ನು ವಿವರಿಸುತ್ತಾ, ನಾವು ಮೊದಲ ಪಂದ್ಯದಲ್ಲಿ ಅವನಿಗೆ ಬೌನ್ಸರ್ ಎಸೆದು ಮೊದಲ ಎಸೆತದಲ್ಲೇ ಕ್ಯಾಚ್ ನೀಡುವಂತೆ ಮಾಡಿ ಔಟ್ ಮಾಡಿದ್ದೆವು. ಆದರೆ, ಆ ಟೂರ್ನಮೆಂಟ್‌ನ ಆರಂಭದಿಂದ ಅಂತ್ಯದ ವೇಳೆಗೆ ಒಬ್ಬ ಆಟಗಾರನಾಗಿ ಅವನು ಸಾಧಿಸಿದ ಬೆಳವಣಿಗೆ ನಿಜಕ್ಕೂ ನಂಬಲು ಸಾಧ್ಯವಾಗದಂತಿತ್ತು. ಆ ನಂತರ ನಾವು ಬೌನ್ಸರ್ ಎಸೆದರೆ ಥರ್ಡ್ ಮ್ಯಾನ್ ಮೇಲಿಂದ ಸಿಕ್ಸರ್ ಹೊಡೆಯುತ್ತಿದ್ದ, ಈ ಕಡೆ ಎಸೆದರೆ ಆ ಕಡೆ ಹೊಡೆಯುತ್ತಿದ್ದ, ಫುಲ್ ಲೆಂತ್ ಎಸೆದರೆ ನೇರವಾಗಿ ಬಾರಿಸುತ್ತಿದ್ದ ಮತ್ತು ಲೋ ಫುಲ್ ಟಾಸ್ ಎಸೆದರೆ ಫ್ಲಿಕ್ ಮಾಡುತ್ತಿದ್ದ. ಅವನ ಬ್ಯಾಟಿಂಗ್ ನೋಡಿದ ನಮಗೆ, 'ಒಂದು ನಿಮಿಷ ತಡೆಯಿರಿ, ಇವನಿಗೆ ಎಲ್ಲಿ ಬೌಲಿಂಗ್ ಮಾಡಬೇಕು?' ಎಂದು ತಲೆಕೆಡಿಸಿಕೊಳ್ಳುವಂತಾಗಿತ್ತು" ಎಂದು ಲಿವಿಂಗ್‌ಸ್ಟೋನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).