ಐಪಿಎಲ್

ಅವರು ಯಾರೆಂದೇ ನನಗೆ ಗೊತ್ತಿಲ್ಲ!...CSK ಹೊಸ ಕೋಚ್ ನೇಮಕದ ಬಗ್ಗೆ ವಿಶ್ವಕಪ್​ ವಿಜೇತ ಆಟಗಾರನ ಅಚ್ಚರಿಯ ಹೇಳಿಕೆ

ಚೆನ್ನೈ: ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಮುಂಬರುವ ಸೀಸನ್‌ಗಾಗಿ ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿದೆ. ಸುದೀರ್ಘ ಅವಧಿಗೆ ಮುಖ್ಯ ಕೋಚ್ ಆಗಿ ಯಶಸ್ವಿ ಸೇವೆ ಸಲ್ಲಿಸಿದ್ದ ಸ್ಟೀಫನ್ ಫ್ಲೆಮಿಂಗ್ ಹಾಗೂ ಅವರ ಪ್ರಮುಖ ಸಹಾಯಕ ಸಿಬ್ಬಂದಿ ನಿರ್ಗಮಿಸಿದ ಬಳಿಕ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಹೊಸ ಮುಖಗಳಿಗೆ ಮಣೆ ಹಾಕಿದೆ.

ತಂಡದ ಹೊಸ ಮುಖ್ಯ ಕೋಚ್ ಆಗಿ ಮಾಜಿ ವೇಗಿ ಜಹೀರ್ ಖಾನ್ ನೇಮಕಗೊಂಡಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಅಲ್ಬಿ ಮಾರ್ಕೆಲ್ ಮತ್ತು ಇಂಗ್ಲೆಂಡ್‌ನ ಗ್ಯಾರೆತ್ ಬ್ಯಾಟಿ ಅವರು ಸಹಾಯಕ ಕೋಚ್‌ಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಹೊಸ ನೇಮಕದ ಕುರಿತು ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ಪರ 9 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳನ್ನಾಡಿರುವ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ 9,000ಕ್ಕೂ ಅಧಿಕ ರನ್ ಹಾಗೂ 900ಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ಗ್ಯಾರೆತ್ ಬ್ಯಾಟಿ ಅವರ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಕಾಂತ್, ತಮಗೆ ಆ ಹೆಸರೇ ಹೊಸದು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನನಗೆ ಗ್ಯಾರೆತ್ ಬ್ಯಾಟಿ ಬಗ್ಗೆ ಖಚಿತ ಮಾಹಿತಿ ಇಲ್ಲ. ಅವರು ಯಾರೆಂದೇ ನನಗೆ ತಿಳಿದಿಲ್ಲ. ಬಹುಶಃ ಅವರು ಅತ್ಯುತ್ತಮ ಕೋಚ್ ಆಗಿರಬಹುದು, ಆದರೆ ನನಗೆ ಅವರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. ಆದರೂ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಎಲ್ಲವನ್ನೂ ಕೂಲಂಕಷವಾಗಿ ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಎಂಜಿನ್‌ಗೆ ಹೊಸ ಆಯಿಲ್

ಮತ್ತೊಂದೆಡೆ, ಸಿಎಸ್‌ಕೆ ಪರ ದೀರ್ಘಕಾಲ ಆಡಿ ಫ್ರಾಂಚೈಸಿಯ ಆರಂಭಿಕ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲ್ಬಿ ಮಾರ್ಕೆಲ್ ಆಯ್ಕೆಯನ್ನು ಶ್ರೀಕಾಂತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಬಿ ಮಾರ್ಕೆಲ್ ಉತ್ತಮ ಆಯ್ಕೆ. ಅವರು ಹಿಂದೆ ಸಿಎಸ್‌ಕೆ ಪರ ಆಡಿದ್ದಾರೆ ಮತ್ತು ಚಾಂಪಿಯನ್ ತಂಡದ ಪ್ರಮುಖ ಭಾಗವಾಗಿದ್ದರು. ಸಿಎಸ್‌ಕೆ ಸಂಸ್ಕೃತಿ ಮತ್ತು ವಾತಾವರಣ ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ಬದ್ಧತೆಯುಳ್ಳ ಕ್ರಿಕೆಟಿಗರಾಗಿದ್ದು, ಪರಿಪೂರ್ಣ ಟೀಮ್ ಮ್ಯಾನ್ ಎಂದು ಪ್ರಶಂಸಿಸಿದ್ದಾರೆ. ಇದಲ್ಲದೆ, ಫ್ರಾಂಚೈಸಿಯ ಮಾಜಿ ವೇಗಿ ಮೋಹಿತ್ ಶರ್ಮಾ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದ್ದು, ಜೇಮ್ಸ್ ಫಾಸ್ಟರ್ (ಫೀಲ್ಡಿಂಗ್ ಕೋಚ್) ಹಾಗೂ ಶ್ರೀಧರನ್ ಶ್ರೀರಾಮ್ (ಸಹಾಯಕ ಕೋಚ್) ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಜೊತೆಗೆ ಮೈಕಲ್ ಹಸ್ಸಿ, ಎರಿಕ್ ಸಿಮನ್ಸ್, ರಾಜೀವ್ ಕುಮಾರ್, ಟಾಮಿ ಸಿಮ್ಸೆಕ್ ಮತ್ತು ಗ್ರೆಗ್ ಕಿಂಗ್ ಅವರಂತಹ ದಿಗ್ಗಜ ಬೆಂಚ್‌ಸ್ಟ್ರೆಂತ್ ಸಿಬ್ಬಂದಿಯ ನಿರ್ಗಮನದ ನಂತರ ಸಿಎಸ್‌ಕೆಯಲ್ಲಿ ಈ ದೊಡ್ಡ ಬದಲಾವಣೆ ನಡೆದಿದೆ. ತಂಡದ ಈ ಹೊಸ ಬದಲಾವಣೆಯನ್ನು ಸ್ವಾಗತಿಸಿರುವ ಶ್ರೀಕಾಂತ್, ಸಿಎಸ್‌ಕೆ ಸಂಪೂರ್ಣವಾಗಿ ಹೊಸ ಬದಲಾವಣೆ ಮಾಡಿಕೊಂಡಿರುವುದು ಒಳ್ಳೆಯದೇ. ಇದು ಹೊಸ ಎಂಜಿನ್‌ಗೆ ಹೊಸ ಆಯಿಲ್ ಹಾಕಿದಂತೆ. ತಂಡಕ್ಕೆ ಸಂಪೂರ್ಣ ಹೊಸ ರೂಪ ನೀಡುವುದು ಅತ್ಯಗತ್ಯ ಮತ್ತು ಸಿಎಸ್‌ಕೆ ಕಾಲಕ್ಕೆ ತಕ್ಕಂತೆ ಮುಂದೆ ಸಾಗಲೇಬೇಕು. ಗ್ಯಾರೆತ್ ಬ್ಯಾಟಿ ಅವರ ಬಗ್ಗೆ ನನಗೆ ಅಷ್ಟೇನು ಪರಿಚಯವಿಲ್ಲದಿದ್ದರೂ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಅವರ ಮೇಲೆ ನಂಬಿಕೆ ಇಟ್ಟಿದೆ ಎಂದ ಮೇಲೆ ಅವರು ಸಮರ್ಥರಾಗಿರಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).