ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು 
ಐಪಿಎಲ್

ಐಪಿಎಲ್​ ಮಿನಿ ಹರಾಜು... ಲಿವಿಂಗ್‌ಸ್ಟೋನ್ ಕೈಬಿಟ್ಟಿದ್ದೇಕೆ? RCBಯ ಮೆಗಾ ಪ್ಲಾನ್​ ಬಿಚ್ಚಿಟ್ಟ ಮೊಹಮ್ಮದ್​ ಕೈಫ್​!

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್​ ಪ್ರೀಮಿಯರ್​ ಲೀಗ್​- 2026 ಮಿನಿ ಹರಾಜಿಗೆ ದಿನಗಣನೆ
  • ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಬಿಡುಗಡೆ ಮಾಡಿದ ಆರ್​ಸಿಬಿ
  • ಲಿವಿಂಗ್‌ಸ್ಟೋನ್ ಬಿಡುಗಡೆ ಮಾಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಮೊಹಮ್ಮದ್​ ಕೈಫ್​
ಬೆಂಗಳೂರು: ಐಪಿಎಲ್-2026 ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬಿಡುಗಡೆ ಮಾಡಿದೆ. ಕಳೆದ ಋತುವಿನ ಮೆಗಾ ಹರಾಜಿನಲ್ಲಿ ಲಿವಿಂಗ್‌ಸ್ಟೋನ್​ ಅವರನ್ನು ಬರೋಬ್ಬರಿ 8.75 ಕೋಟಿ ರೂ.ಗೆ ಆರ್​ಸಿಬಿ ಖರೀದಿಸಿತು. ಆದರೆ, ಇಂಗ್ಲಿಷ್ ಕ್ರಿಕೆಟಿಗ ಆರ್‌ಸಿಬಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾದರು.
ಲಿವಿಂಗ್​ಸ್ಟೋನ್​ ಎಂಟು ಪಂದ್ಯಗಳಲ್ಲಿ 16 ರನ್​ ಸರಾಸರಿಯಲ್ಲಿ ಕೇವಲ 112 ರನ್ ಗಳಿಸಿ ನಿರಾಶೆ ಮೂಡಿಸಿದರು. ಈ ಕಾರಣದಿಂದಾಗಿ, ಬೆಂಗಳೂರು ಫ್ರಾಂಚೈಸಿ ಅವರನ್ನು ಮಿನಿ ಹರಾಜಿಗೂ ಮುನ್ನ ಬಿಡುಗಡೆ ಮಾಡಿದೆ. ಆರ್‌ಸಿಬಿ ತಮ್ಮ ಹಣದ ಬಲವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ, ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಬೆಂಗಳೂರು ತಂಡಕ್ಕೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಮಿನಿ-ಹರಾಜಿನಲ್ಲಿ ಲಿವಿಂಗ್‌ಸ್ಟೋನ್ ಅವರನ್ನು ಕಡಿಮೆ ಬೆಲೆಗೆ ಮರಳಿ ಖರೀದಿಸಬೇಕೆಂದು ಕೈಫ್, ಆರ್​ಸಿಬಿ ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ. ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ಜೊತೆಗೆ ಲಿವಿಂಗ್‌ಸ್ಟೋನ್ ಅವರನ್ನು ಮೂರನೇ ಸ್ಪಿನ್ನರ್ ಆಗಿ ಬಳಸಬಹುದು ಎಂದು ಕೈಫ್​ ಹೇಳಿದ್ದಾರೆ.
ಆರ್​ಸಿಬಿ ತಂಡವು ಐಪಿಎಲ್-2026 ಮಿನಿ ಹರಾಜಿನಲ್ಲಿ ಲಿವಿಂಗ್‌ಸ್ಟೋನ್ ಅವರನ್ನು ಮರಳಿ ಖರೀದಿಸುವ ಸಾಧ್ಯತೆಯಿದೆ. ಅವರು ತಮ್ಮ ಪರ್ಸ್ ಬಲವನ್ನು ಹೆಚ್ಚಿಸುವ ಸಲುವಾಗಿ ಹರಾಜಿನಲ್ಲಿ ಬಿಟ್ಟಿರಬಹುದು. ಏಕೆಂದರೆ, ಕಳೆದ ಋತುವಿನಲ್ಲಿ ಲಿವಿಂಗ್‌ಸ್ಟೋನ್‌ಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡಿದರು. ಈ ಬಾರಿ ಆರ್‌ಸಿಬಿ ಆ ಮೊತ್ತದೊಂದಿಗೆ ಇಬ್ಬರು ಆಟಗಾರರನ್ನು ಖರೀದಿಸಲು ಪ್ರಯತ್ನಿಸಬಹುದು. ಆದರೆ, ಲಿವಿಂಗ್‌ಸ್ಟೋನ್ ಅತ್ಯುತ್ತಮ ಆಲ್‌ರೌಂಡ್ ಕೌಶಲ್ಯಗಳನ್ನು ಹೊಂದಿದ್ದಾರೆ. ಆರ್‌ಸಿಬಿ ಪುಣೆಯಲ್ಲಿ (ತವರು ಮೈದಾನ) ಆಡಿದರೆ, ಅವರು ಮೂರನೇ ಸ್ಪಿನ್ನರ್ ಆಗಿ ಉಪಯುಕ್ತರಾಗುತ್ತಾರೆ ಎಂದು ಕೈಫ್​ ಹೇಳಿದ್ದಾರೆ.
ಅದೇ ರೀತಿ, ಆರ್‌ಸಿಬಿ ಹರಾಜಿನಲ್ಲಿ ಉತ್ತರಾಖಂಡ ವೇಗಿ ಆಕಾಶ್ ಮಧ್ವಾಲ್ ಅವರನ್ನು ಪ್ರಯತ್ನಿಸಬೇಕು ಎಂದು ಕೈಫ್​ ಹೇಳಿದ್ದಾರೆ. ಕಳೆದ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅವರು ಬಹಳ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಪಿಚ್ ಸ್ವಲ್ಪ ಒಣಗಿದ್ದರೆ, ಅವರು ಚೆಂಡನ್ನು ಅದ್ಭುತವಾಗಿ ಸೀಮ್ ಮಾಡಬಹುದು. ಅದು ಆಕಾಶ್​ ಅವರ ಶಕ್ತಿ ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಂದಹಾಗೆ ಐಪಿಎಲ್-2026 ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಹೀಗಾಗಿ ಎಲ್ಲ 10 ಐಪಿಎಲ್​ ಫ್ರಾಂಚೈಸಿಗಳು ಹರಾಜಿನಲ್ಲಿ ಭಾಗವಹಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ, (ಏಜೆನ್ಸೀಸ್​).