ಹಾರ್ದಿಕ್​ ಪಾಂಡ್ಯ, ಅರ್ಷದೀಪ್​ ಸಿಂಗ್​ ಎಐ
ಐಪಿಎಲ್

ಹಾರ್ದಿಕ್ ಪಾಂಡ್ಯ​ ಪಂಜಾಬ್​ಗೆ, ಅರ್ಷದೀಪ್​ ಮುಂಬೈಗೆ ವರ್ಗಾವಣೆ?

ಅರ್ಷದೀಪ್​ ಜತೆಗೆ ವಿಕೆಟ್​ ಕೀಪರ್​-ಬ್ಯಾಟರ್​ ವಿಷ್ಣು ವಿನೋದ್​ರನ್ನೂ ಮುಂಬೈಗೆ ವರ್ಗಾಯಿಸಲಿದೆ ಎನ್ನಲಾಗಿದೆ.

ನವದೆಹಲಿ: ಐಪಿಎಲ್​ನಲ್ಲಿ ಅಚ್ಚರಿಯ ವರ್ಗಾವಣೆಯೊಂದರ ಸಾಧ್ಯತೆ ಎದುರಾಗಿದೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡದಿಂದ ಪಂಜಾಬ್​ ಕಿಂಗ್ಸ್​ಗೆ ಮತ್ತು ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಪಂಜಾಬ್​ನಿಂದ ಮುಂಬೈ ಇಂಡಿಯನ್ಸ್​ ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಹಾರ್ದಿಕ್​ರನ್ನು ವರ್ಗಾವಣೆ ಮಾಡಿಸಿಕೊಳ್ಳಲು ಈ ಹಿಂದೆ ಕೆಲ ತಂಡಗಳು ಪ್ರಯತ್ನಿಸಿದ್ದವು. ಇದೀಗ ಪಂಜಾಬ್​ ತಂಡ ಇದರ ಸನಿಹದಲ್ಲಿದೆ ಎನ್ನಲಾಗಿದೆ. ಕೆಕೆಆರ್​, ಸಿಎಸ್​ಕೆ, ರಾಜಸ್ಥಾನ ರಾಯಲ್ಸ್​ ತಂಡಗಳ ಜತೆಗೂ ಹಾರ್ದಿಕ್​ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಪಂಜಾಬ್​ ಕಿಂಗ್ಸ್​ ಅಚ್ಚರಿಯ ರೀತಿಯಲ್ಲಿ ಹಾರ್ದಿಕ್​ರನ್ನು ಸೆಳೆದುಕೊಳ್ಳುವ ಸಾಧ್ಯತೆ ಕಾಣಿಸಿದೆ. ಇದಕ್ಕಾಗಿ ಅರ್ಷದೀಪ್​ ಜತೆಗೆ ವಿಕೆಟ್​ ಕೀಪರ್​-ಬ್ಯಾಟರ್​ ವಿಷ್ಣು ವಿನೋದ್​ರನ್ನೂ ಮುಂಬೈಗೆ ವರ್ಗಾಯಿಸಲಿದೆ ಎನ್ನಲಾಗಿದೆ.

ಐಪಿಎಲ್​ ಆಟಗಾರರ ರಿಟೇನ್​ ಪಟ್ಟಿ ಸಲ್ಲಿಸಲು ನವೆಂಬರ್​ 17 ಅಂತಿಮ ಗಡುವು ಆಗಿದ್ದು, ಅದಕ್ಕೆ ಮುನ್ನ ಈ ವಾರವೇ ವರ್ಗಾವಣೆಯ ಬಗ್ಗೆ ಎರಡೂ ತಂಡಗಳು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ.

ಮುಂಬೈ ಇಂಡಿಯನ್ಸ್​ಗೆ ರೋಹಿತ್​ ಶರ್ಮ ಮತ್ತೆ ನಾಯಕರಾಗಲಿದ್ದಾರೆ ಎನ್ನಲಾಗಿದ್ದರೆ, ಪಂಜಾಬ್​ ತಂಡದಲ್ಲಿ ಶ್ರೇಯಸ್​ ಅಯ್ಯರ್​ ಸಾರಥ್ಯದಲ್ಲಿ ಹಾರ್ದಿಕ್​ ಆಡಬೇಕಾಗುತ್ತದೆ. ಅವರು 2024ರಲ್ಲಿ ಮುಂಬೈ ತಂಡಕ್ಕೆ ಮರಳಿದ ಬಳಿಕ ನಾಯಕರಾಗಿದ್ದರು.