KSLTA World Tennis Junior: ಶ್ರೀನಿತಿಗೆ ಗೋಲ್ಡನ್ ಡಬಲ್ ಪ್ರಶಸ್ತಿ
ಬೆಂಗಳೂರು: ಆತಿಥೇಯ ತಾರೆ ಶ್ರೀನಿತಿ ಚೌಧರಿ ಕೆಎಸ್‌ಎಲ್‌ಟಿಎ ವರ್ಲ್ಡ್ ಟೆನಿಸ್ ಜೂನಿಯರ್ ಜೆ30 ಬೆಂಗಳೂರು ಟೂರ್ನಿಯಲ್ಲಿ ‘ಗೋಲ್ಡನ್ ಡಬಲ್ ಪ್ರಶಸ್ತಿ’ (ಸಿಂಗಲ್ಸ್-ಡಬಲ್ಸ್) ಜಯಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಜಲ್ ಅಲಿ ಮೀರ್ ಹಾಗೂ ಡಬಲ್ಸ್‌ನಲ್ಲಿ ಚುಕ್ಕಾ ಲಕ್ಷ್ಯ ವರ್ಧನ್-ಪಾರ್ಥಿವ್ ನಲ್ಲಗುಂಡ್ಲ ಚಾಂಪಿಯನ್ ಆಗೊ ಹೊರಹೊಮ್ಮಿದರು.
ಎಸ್‌ಎಂ ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಟೂರ್ನಿಯ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ 15 ವರ್ಷದ ಶ್ರೀನಿತಿ 6-4, 6-2 ರಿಂದ ಬೆಂಗಳೂರಿನವರೇ ಆದ ಅಹಿದಾ ಸಿಂಗ್ ಎದುರು ಗೆಲುವು ಒಲಿಸಿಕೊಂಡರು. ರಿದ್ಧಿ ಶಿಂಧೆ ಜತೆಗೂಡಿದ ಶ್ರೀನಿತಿ ಡಬಲ್ಸ್‌ನಲ್ಲಿ 4-6, 6-2, 13-11 ರಿಂದ ಜೋಹಾ ಖುರೇಷಿ-ದೀಪ್ತಿ ವೆಂಕಟೇಶನ್ ಜೋಡಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಗೋಲ್ಡನ್ ಡಬಲ್ ಪ್ರಶಸ್ತಿ ಸಾಧಿಸಿದರು.
ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ 6ನೇ ಶ್ರೇಯಾಂಕಿತ ಜಲ್ ಅಲಿ 6-4, 4-6, 2-0 ಮುನ್ನಡೆಯಲ್ಲಿದ್ದಾಗ ಅಮೆರಿಕದ ನಿಯಾಂತ್ ಬದ್ರಿನಾರಾಯಣ್ ಪಂದ್ಯದಿಂದ ಹಿಂದೆಸರಿದರು. ಚುಕ್ಕಾ ಲಕ್ಷ್ಯವರ್ಧನ್-ಪಾರ್ಥಿವ್ ಡಬಲ್ಸ್‌ನಲ್ಲಿ 6-7, 7-6, 10-4 ರಿಂದ ನಿತಿನ್ ಬರತ್ ಕೆಎಸ್-ಅಭಿವದ್ಯ ಮಿಶ್ರಾ ಜೋಡಿ ಎದುರು ಕಠಿಣ ಹೋರಾಟದಲ್ಲಿ ಗೆದ್ದು ಬೀಗಿತು.