ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026ರ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿ ಸುದ್ದಿಯಾಗಿದ್ದ ಆಲ್-ರೌಂಡರ್ ಪ್ರಶಾಂತ್ ವೀರ್, ಈಗ ತಮ್ಮ ಮೆಂಟರ್ ಎಂ.ಎಸ್. ಧೋನಿ ಅವರ ಕುರಿತು ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 14.2 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಸಿಎಸ್‌ಕೆ ಪಾಲಾಗಿರುವ ಪ್ರಶಾಂತ್‌ಗೆ, ಧೋನಿ ಕ್ರಿಕೆಟ್‌ಗಿಂತ ಹೆಚ್ಚಾಗಿ ಜೀವನದ ಪಾಠವನ್ನು ಮೊದಲು ಕಲಿಸಿದ್ದಾರೆ!
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಶಾಂತ್ ವೀರ್, "ಹರಾಜಿನ ನಂತರ ನಾನು ಮಾಹಿ ಭಾಯ್ ಅವರನ್ನು ಭೇಟಿಯಾದಾಗ, ಅವರು ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಬದಲಿಗೆ, 'ನಿನಗೆ ಸಿಕ್ಕಿರುವ ಈ ದೊಡ್ಡ ಮೊತ್ತದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಬೇಡ, ಉಳಿತಾಯದ ಕಡೆ ಗಮನ ಹರಿಸು' ಎಂದು ಸಲಹೆ ನೀಡಿದರು," ಎಂದು ತಿಳಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ತಂಡಗಳ ನಡುವಿನ ತೀವ್ರ ಪೈಪೋಟಿಯ ನಂತರ ಸಿಎಸ್‌ಕೆ ಪ್ರಶಾಂತ್ ಅವರನ್ನು ತನ್ನದಾಗಿಸಿಕೊಂಡಿತ್ತು. ಮೈದಾನದ ಒಳಗೆ ಮಾತ್ರವಲ್ಲದೆ, ಹೊರಗೂ ಆಟಗಾರರ ಹಿತ ಬಯಸುವ ಧೋನಿಯ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಿಎಸ್‌ಕೆ ಜರ್ಸಿಯಲ್ಲಿ ಸಂಜು ಸ್ಯಾಮ್ಸನ್: ಹೊಸ ಅಧ್ಯಾಯ!
ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ದೀರ್ಘಕಾಲದ ನಾಯಕನಾಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಸಿಎಸ್‌ಕೆ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮಾರ್ಚ್ 30 ರಂದು ಗುವಾಹಟಿಯಲ್ಲಿ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲೇ ಸಂಜು ತಮ್ಮ ಹಳೆಯ ತಂಡದ ವಿರುದ್ಧ ಸೆಣಸಲಿದ್ದಾರೆ.
"ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನನ್ನ ಸಮಯ ಮುಗಿದಿದೆ ಎಂದು ಅನ್ನಿಸಿದ್ದರಿಂದ ನಾನು ಆ ತಂಡವನ್ನು ತೊರೆದೆ. ಈಗ ಸಿಎಸ್‌ಕೆ ಪರ ಆಡುತ್ತಿರುವುದು ಹೆಮ್ಮೆ ತಂದಿದೆ. ಮೈದಾನದಲ್ಲಿ ನಾನು ಭಾವನೆಗಳಿಗೆ ಮಣಿಯದೆ ಅತ್ಯುತ್ತಮ ಕ್ರಿಕೆಟ್ ಆಡುತ್ತೇನೆ," ಎಂದು 31 ವರ್ಷದ ಸಂಜು ಸ್ಯಾಮ್ಸನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಧೋನಿ ಅವರೊಂದಿಗೆ ಒಂದೇ ತಂಡದಲ್ಲಿ ಆಡಿ ಅವರಿಂದ ವಿಕೆಟ್ ಕೀಪಿಂಗ್ ಮತ್ತು ನಾಯಕತ್ವದ ಗುಣಗಳನ್ನು ಕಲಿಯಲು ಕಾತರನಾಗಿದ್ದೇನೆ ಎಂದು ಅವರು ಹೇಳಿದ್ದಾರೆ,(ಏಜೆನ್ಸೀಸ್)