ಸತತ 2ನೇ ಬಾರಿ ಐಪಿಎಲ್ ಗೆದ್ದ ಬೆನ್ನಲ್ಲೇ ಆರ್‌ಸಿಬಿಗೆ ಸಿಎಸ್ಕೆಯಿಂದ ಬಹುಪರಾಕ್! ಹಳದಿ ಪಡೆಯ ಟ್ವೀಟ್ ವೈರಲ್...RCB
- ಸುಮಾರು 2 ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಐಪಿಎಲ್ ಎಂಬ ಮಹಾ ಉತ್ಸವಕ್ಕೆ ನಿನ್ನೆವಿದ್ಯುಕ್ತ ತೆರೆ
- ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್‌ಸಿಬಿ
- ಆರ್‌ಸಿಬಿ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
- ಐಪಿಎಲ್‌ನ ಪ್ರಮುಖ ಫ್ರಾಂಚೈಸಿಗಳು ಕೂಡ ಕ್ರೀಡಾ ಸ್ಫೂರ್ತಿಯನ್ನು ಮೆರೆದು ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಕೆ
RCB : ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಎದುರಾಳಿ ತಂಡಗಳು ಅಭಿನಂದನೆ ಸಲ್ಲಿಸಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆದ ಫೈನಲ್‌ನಲ್ಲಿ ಆರ್‌ಸಿಬಿ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ, ಚರ್ಚೆಗಳು ಹಾಗೂ ಮೀಮ್ಸ್‌ಗಳ ಮಹಾಪೂರವೇ ಹರಿದುಬಂದಿದ್ದು, ಇದೇ ವೇಳೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಗಳು ಕೂಡ ಕ್ರೀಡಾ ಸ್ಫೂರ್ತಿಯನ್ನು ಮೆರೆದು ಆರ್‌ಸಿಬಿ ತಂಡದ ಈ ಸತತ ಎರಡನೇ ಟ್ರೋಫಿ ಸಾಧನೆಗೆ ಶುಭ ಹಾರೈಸುತ್ತಿವೆ.
ಆರ್‌ಸಿಬಿ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಮ್‌ಐ) ಸೇರಿದಂತೆ ಹಲವು ಫ್ರಾಂಚೈಸಿಗಳು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಅಭಿನಂದನೆಗಳನ್ನು ತಿಳಿಸಿವೆ. ಅದರಲ್ಲಿಯೂ ವಿಶೇಷವಾಗಿ ಸಿಎಸ್‌ಕೆ ಮತ್ತು ಮುಂಬೈ ತಂಡಗಳ ಸಂದೇಶಗಳು ಅಭಿಮಾನಿಗಳ ಗಮನ ಸೆಳೆದಿವೆ. ಏಕೆಂದರೆ, ತಲಾ ಐದು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಾಗಿ ಹೊರಹೊಮ್ಮಿರುವ ಈ ಎರಡೂ ತಂಡಗಳಿಗೆ ಆರ್‌ಸಿಬಿ ಜೊತೆಗಿರುವ ಪೈಪೋಟಿ ಮತ್ತು ಎದುರಾಳಿತನ ಸದಾ ಮುಂಚೂಣಿಯಲ್ಲಿರುತ್ತದೆ.
ಜೂನ್ 1ರ ಮುಂಜಾನೆ ಮುಂಬೈ ಇಂಡಿಯನ್ಸ್ ತಂಡವು ಆರ್‌ಸಿಬಿ ಆಟಗಾರರು ಟ್ರೋಫಿ ಹಿಡಿದು ಸಂಭ್ರಮಿಸುತ್ತಿರುವ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ಟಾಟಾ ಐಪಿಎಲ್ 2026 ಜಯಿಸಿದ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದೆ.
ಪಂದ್ಯ ಮುಗಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೂಡ ಆರ್‌ಸಿಬಿಗೆ ವಿಶೇಷ ಸಂದೇಶದ ಮೂಲಕ ಶುಭ ಹಾರೈಸಿದ್ದು, "ಸತತವಾಗಿ ಎರಡು ಪ್ರಶಸ್ತಿಗಳನ್ನು ಗೆಲ್ಲುವುದು ಯಾವಾಗಲೂ ವಿಶೇಷ. ಆರ್‌ಸಿಬಿಗೆ ಅಭಿನಂದನೆಗಳು... ಈ ವಿಶೇಷ ಕ್ಲಬ್‌ಗೆ ನಿಮಗೆ ಸುಸ್ವಾಗತ" ಎಂದು ಪೋಸ್ಟ್ ಮಾಡಿದೆ. ಈ ಮೂಲಕ ಈ ಹಿಂದೆ ಯಶಸ್ವಿಯಾಗಿ ತಮ್ಮ ಪ್ರಶಸ್ತಿಯನ್ನ ಡಿಫೆಂಡ್ ಮಾಡಿಕೊಂಡಿದ್ದ ತಂಡಗಳ ವಿಶೇಷ ಪಟ್ಟಿಗೆ ಆರ್‌ಸಿಬಿ ಸೇರ್ಪಡೆಯಾಗಿದ್ದನ್ನು ಸಿಎಸ್‌ಕೆ ಮುಕ್ತಕಂಠದಿಂದ ಸ್ವಾಗತಿಸಿದೆ.
ಸಿಎಸ್‌ಕೆ ಅಭಿನಂದನೆಗೆ ಪ್ರತಿಕ್ರಿಯಿಸಿದ ಆರ್‌ಸಿಬಿ, "ಧನ್ಯವಾದಗಳು ನೆರೆಹೊರೆಯವರೇ... ಮುಂದಿನ ವರ್ಷ ನಿಮ್ಮೊಂದಿಗೆ ಆಡಲು ಎದುರು ನೋಡುತ್ತಿದ್ದೇವೆ" ಎಂದು ಮರುಪೋಸ್ಟ್ ಮಾಡಿದೆ. ಫ್ರಾಂಚೈಸಿಗಳ ನಡುವಿನ ಈ ಸ್ನೇಹಪರ ಸಂಭಾಷಣೆ ಅಭಿಮಾನಿಗಳನ್ನು ಅಪಾರವಾಗಿ ಸೆಳೆದಿದ್ದು, ಮೈದಾನದಲ್ಲಿ ಎಷ್ಟೇ ತೀವ್ರ ಪೈಪೋಟಿ ಇದ್ದರೂ ತಂಡಗಳ ನಡುವಿನ ಪರಸ್ಪರ ಗೌರವ ಹಾಗೇ ಉಳಿದಿರುತ್ತದೆ ಎಂಬುದನ್ನು ಈ ಪೋಸ್ಟ್‌ಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಒಟ್ಟಾರೆಯಾಗಿ, ಆರ್‌ಸಿಬಿ ಈ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಾದ್ಯಂತ ಅಭಿನಂದನೆಗಳು, ತರಹೇವಾರಿ ಮೀಮ್ಸ್‌ಗಳು ಹಾಗೂ ತಮಾಷೆಯ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.
ಐಪಿಎಲ್ 2026ರ ಫೈನಲ್ ಪಂದ್ಯದ ಎಲ್ಲಾ ವಿಭಾಗಗಳಲ್ಲೂ ಆರ್‌ಸಿಬಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವನ್ನು ಆರ್‌ಸಿಬಿ ಕೇವಲ 155/8 ರನ್‌ಗಳಿಗೆ ನಿಯಂತ್ರಿಸಿತು. ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಗಳಿಸಿದರೂ ಸಹ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ರಸಿಖ್ ಸಲಾಮ್ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದರು. ಇತ್ತ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ನೀಡಿದರೆ, ಆ ಬಳಿಕ ತಮ್ಮ ಕ್ಲಾಸ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ ಅಜೇಯ 75 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಕೂಡ ಪ್ರಮುಖ ಪಾತ್ರ ವಹಿಸುವುದರೊಂದಿಗೆ, ಆರ್‌ಸಿಬಿ ಕೇವಲ 18 ಓವರ್‌ಗಳಲ್ಲಿ ಗುರಿಯನ್ನು ತಲುಪಿ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು, (ಏಜೆನ್ಸೀಸ್).