ಮಂಗೇಶ್​ ಯಾದವ್​ ಆರ್​ಸಿಬಿ ತೆಕ್ಕೆಗೆ 
ಐಪಿಎಲ್

ಯಾರು ಈ ಮಂಗೇಶ್​ ಯಾದವ್​? ಕೇವಲ 2 ಪಂದ್ಯ ಆಡಿದವನಿಗೆ RCB 5 ಕೋಟಿ ಖರ್ಚು ಮಾಡಿದ್ದೇಕೆ? RCB

ಪ್ರಮುಖ ಮುಖ್ಯಾಂಶಗಳು

  • ಯಶಸ್ವಿಯಾಗಿ ಮುಗಿದ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜು
  • ಅಬುಧಾಬಿಯಲ್ಲಿ ನಡೆದ ಈ ಮೆಗಾ ಈವೆಂಟ್​ನಲ್ಲಿ ಜರುಗಿದ ಅನೇಕ ಅಚ್ಚರಿ ಸಂಗತಿಗಳು
  • ಅಷ್ಟೊಂದು ಪರಿಚಿತವಿಲ್ಲದ ಮಂಗೇಶ್​ ಯಾದವ್​ಗೆ ಆರ್​ಸಿಬಿ 5.20 ಕೋಟಿ ರೂಪಾಯಿ ನೀಡಿದ್ದೇಕೆ?
IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜಿಗೆ ನಿನ್ನೆ (ಡಿ.16) ತೆರೆಬಿದ್ದಿದೆ. ಅಬುಧಾಬಿಯಲ್ಲಿ ನಡೆದ ಈ ಮೆಗಾ ಈವೆಂಟ್​ನಲ್ಲಿ ಅನೇಕ ಅಚ್ಚರಿ ಸಂಗತಿಗಳು ಜರುಗಿದವು. ಅದರಲ್ಲಿ ಎಲ್ಲರ ಗಮನ ಸೆಳೆದ ಸರ್ಪ್ರೈಸ್​ ಸಂಗತಿ ಏನೆಂದರೆ, ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಅಷ್ಟೊಂದು ಪರಿಚಿತವಿಲ್ಲದ ಮಂಗೇಶ್​ ಯಾದವ್​ಗೆ 5.20 ಕೋಟಿ ರೂಪಾಯಿ ನೀಡಿದ್ದು.
ಹೌದು, ಮಂಗೇಶ್​ ಯಾದವ್​ ಮೂಲ ಬೆಲೆ ಕೇವಲ 30 ಲಕ್ಷ ರೂ. ಇತ್ತು. ಆದರೆ, ಹರಾಜಿನಲ್ಲಿ ಬರೋಬ್ಬರಿ 5.20 ಕೋಟಿ ರೂ. ನೀಡಿ ಆರ್​ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಯಾರು ಈ ಮಗೇಶ್​ ಯಾದವ್​? ಆತನಿಗೆ ಇಷ್ಟೊಂದು ಹಣ ಏಕೆ ನೀಡಿದರು? ಮಂಗೇಶ್​ ಅವರಲ್ಲಿ ಅಂಥದ್ದೇನು ವಿಶೇಷತೆ ಇದೆ? ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕುವ ಪ್ರಯತ್ನದಲ್ಲಿ ಆರ್​ಸಿಬಿ ಅಭಿಮಾನಿಗಳು ಬಿಜಿಯಾಗಿದ್ದಾರೆ.
ಹಾಗಾದರೆ, ಮಂಗೇಶ್​ ಯಾರು? ಅವರ ಪ್ರತಿಭೆ ಏನು? ಅನ್ನೋದನ್ನು ನಾವೀಗ ಕಂಪ್ಲೀಟ್​ ಆಗಿ ತಿಳಿದುಕೊಳ್ಳೋಣ. ಅಂದಹಾಗೆ 24 ವರ್ಷದ ಮಂಗೇಶ್​ ಮಧ್ಯಪ್ರದೇಶದ ಕ್ರಿಕೆಟಿಗ. 2002, ಅಕ್ಟೋಬರ್​ 10ರಂದು ಜನಿಸಿದ ಮಂಗೇಶ್​, ಓರ್ವ ಆಲ್​ರೌಂಡರ್​ ಆಟಗಾರ. ಬಲಗೈ ಬ್ಯಾಟರ್​ ಹಾಗೂ ಎಡಗೈ ಬೌಲರ್. ಡೆತ್​ ಓವರ್​ಗಳಲ್ಲಿ ಕರಾರುವೊಕ್ಕಾಗಿ ಯಾರ್ಕರ್​ ಮಾಡುವ ಸಾಮರ್ಥ್ಯ ಮಂಗೇಶ್​ ಅವರಲ್ಲಿದೆ.
ಆರಂಭದಲ್ಲಿ ಮಂಗೇಶ್​ ಅವರನ್ನು ಸ್ಪಿನ್ ಆಯ್ಕೆಯಾಗಿ ನೋಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ನೀಡಿದ ಉತ್ತಮ ಪ್ರದರ್ಶನಗಳು ಆತನನ್ನು ಓರ್ವ ಎಡಗೈ ಪೇಸ್​ ಬೌಲಿಂಗ್​ ಆಲ್​ರೌಂಡರ್​ ಆಗಿ ಬೆಳೆದುಬಂದ ರೀತಿಯನ್ನು ತೋರಿಸಿದೆ. ದೇಶಿ ಟೂರ್ನಿಗಳಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಲ್ಲೂ ಮಿಂಚಿರುವ ಮಂಗೇಶ್​ ಅವರ ಮೇಲೆ ಆರ್​ಸಿಬಿ ನಂಬಿಕೆ ಇಟ್ಟು ಈ ಮಿನಿ ಹರಾಜಿನಲ್ಲಿ ಭಾರಿ ಬೆಲೆ ಕೊಟ್ಟು ಖರೀದಿ ಮಾಡಿದೆ. ಇದೀಗ ಮಂಗೇಶ್​ ಅವರಿಗೆ ಒಂದೊಳ್ಳೆ ಅವಕಾಶ ಸಿಕ್ಕಿದ್ದು, ತಮ್ಮ ಉತ್ತಮ ಪ್ರದರ್ಶನದ ಮೂಲಕ ಐಪಿಎಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಹರಾಜಿನಲ್ಲಿ ಯಾರ ನಡುವೆ ಪೈಪೋಟಿ?

ಮಂಗೇಶ್ ಯಾದವ್ ತಮ್ಮ ಮೂಲ ಬೆಲೆ 30 ಲಕ್ಷ ರೂ.ನೊಂದಿಗೆ ಮಿನಿ ಹರಾಜಿನಲ್ಲಿ ಭಾಗವಹಿಸಿದರು. ಆರ್‌ಸಿಬಿ ಬಿಡ್ಡಿಂಗ್ ಆರಂಭಿಸಿತು. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್ (SRH) ಸ್ಪರ್ಧೆಗೆ ಸೇರಿಕೊಂಡಿತು. ಎರಡೂ ತಂಡಗಳು ಎಡಗೈ ಪೇಸ್-ಬೌಲಿಂಗ್ ಆಲ್‌ರೌಂಡರ್​ ಪಡೆಯಲು ಭಾರಿ ಪೈಪೋಟಿ ನಡೆಸಿದಂತೆ ಬೆಲೆ ಕೂಡ ಏರಿಕೆಯಾಯಿತು. ಆರಂಭವಾದ ಬಿಡ್ ತ್ವರಿತವಾಗಿ 1 ಕೋಟಿ ರೂ. ದಾಟಿತು ಮತ್ತು ಏರುತ್ತಲೇ ಹೋಯಿತು. ಆರ್‌ಸಿಬಿ ಬೆಲೆಯನ್ನು 4 ಕೋಟಿ ರೂ.ಗೆ ಹೆಚ್ಚಿಸಿತು. ಈ ವೇಳೆ ಎಸ್‌ಆರ್‌ಎಚ್ 4.20 ಕೋಟಿ ರೂ.ಗೆ ಹೆಚ್ಚಿಸಿತು. ಯಶ್​ ದಯಾಳ್​ಗೆ ಬ್ಯಾಕಪ್​ ಆಗಿ ಹೇಗಾದರೂ ಮಾಡಿ ಎಡಗೈ ಬೌಲರ್​ ಆಯ್ಕೆಯನ್ನು ಪಡೆಯಲು ನಿರ್ಧರಿಸಿದ್ದ ಆರ್‌ಸಿಬಿ, ಮೊತ್ತವನ್ನು 5 ಕೋಟಿ ರೂ.ಗಳಿಗೆ ಹೆಚ್ಚಿಸಿತು. ಅಂತಿಮವಾಗಿ, ಎಸ್‌ಆರ್‌ಎಚ್ ಕಣದಿಂದ ಹಿಂದೆ ಸರಿಯಿತು. ಇದರಿಂದಾಗಿ ಆರ್‌ಸಿಬಿ 5.20 ಕೋಟಿ ರೂ.ಗೆ ಮಂಗೇಶ್​ ಯಾದವ್​ ಜತೆಗಿನ ಒಪ್ಪಂದವನ್ನು ಪೂರ್ಣಗೊಳಿಸಿತು.

ಮಂಗೇಶ್​ ಅವರ ಅತ್ಯುತ್ತಮ ಪ್ರದರ್ಶನಗಳು

ಮಂಗೇಶ್ ಅವರಿಗೆ ಉನ್ನತ ಮಟ್ಟದ ಅನುಭವ ಸೀಮಿತವಾಗಿದ್ದರು ಕೂಡ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಗ್ವಾಲಿಯರ್ ಚೀತಾಸ್ ಪರ ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ರಜತ್ ಪಾಟಿದಾರ್ ಅವರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಮಂಗೇಶ್, ತಮ್ಮ ಪ್ರತಿಭೆಯನ್ನು ತೋರಿ ಎಲ್ಲರ ಗಮನ ಸೆಳೆದರು. ಆರು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿ, ಪಂದ್ಯಾವಳಿಯ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅವರು ಮೂರು ಬಾರಿ ನಾಲ್ಕು ವಿಕೆಟ್ ಗೊಂಚಲುಗಳನ್ನು ದಾಖಲಿಸಿದರು. ಇದರಲ್ಲಿ ಮೂರು ಓವರ್‌ಗಳಲ್ಲಿ 18 ರನ್‌ಗಳಿಗೆ 4 ವಿಕೆಟ್ ಪಡೆದಿದ್ದು ಸ್ಮರಣೀಯ ಬೌಲಿಂಗ್ ಆಗಿ ಉಳಿದಿದೆ.
ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಗೇಶ್, ಈಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT)ಯಲ್ಲಿ ಮಧ್ಯಪ್ರದೇಶ ಪರ ಚೊಚ್ಚಲ ಪಂದ್ಯವಾಡಿದರು. ಎರಡು ಸೂಪರ್ ಲೀಗ್ ಪಂದ್ಯಗಳಲ್ಲಿ ಆಡುವ ಮೂಲಕ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಬೌಲಿಂಗ್​ನಲ್ಲಿ ಅವರ ಪ್ರದರ್ಶನ ದುಬಾರಿಯಾಗಿದ್ದರು ಕೂಡ ಬ್ಯಾಟಿಂಗ್‌ನಲ್ಲಿ ಛಾಪು ಮೂಡಿಸಿದರು. ಕೇವಲ 12 ಎಸೆತಗಳಲ್ಲಿ 233.33 ಸ್ಟ್ರೈಕ್ ರೇಟ್‌ನಲ್ಲಿ 28 ರನ್ ಗಳಿಸುವ ಮೂಲಕ ಕೆಳ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್​ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ, (ಏಜೆನ್ಸೀಸ್​).