ಸಚಿನ್​ ತೆಂಡೂಲ್ಕರ್, ಪುತ್ರ ಅರ್ಜುನ್ ಮತ್ತು ಭಾವಿ ಪತ್ನಿ ಸಾನಿಯಾ 
ಐಪಿಎಲ್

ಕ್ರಿಕೆಟ್​ ದಂತಕತೆ ಸಚಿನ್​ ಪುತ್ರನ ಮದ್ವೆ ಡೇಟ್ ಫಿಕ್ಸ್​​: ಈ ದಿನದಂದು ಸಾನಿಯಾ ಕೈಹಿಡಿಯಲಿದ್ದಾರೆ ಅರ್ಜುನ್​!Arjun Tendulkar

ಪ್ರಮುಖ ಮುಖ್ಯಾಂಶಗಳು

  • ಹಸೆಮಣೆ ಏರಲಿರುವ ಸಚಿನ್​ ತೆಂಡೂಲ್ಕರ್ ಪುತ್ರ
  • ಮಾರ್ಚ್​ನಲ್ಲಿ ಅರ್ಜುನ್​ - ಸಾನಿಯಾ ಮದುವೆ ನಿಶ್ಚಯ
  • ರೆಡ್ಡಿಟ್​ನಲ್ಲಿ ಮಗನ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿನ್​
ಮುಂಬೈ: ಸಚಿನ್  ತೆಂಡೂಲ್ಕರ್ ಕುಟುಂಬದಲ್ಲಿ ಸದ್ಯದಲ್ಲೇ ಗಟ್ಟಿಮೇಳ ಮೊಳಗಳಿದ್ದು, ಸಚಿನ್  ತೆಂಡೂಲ್ಕರ್ ಪುತ್ರ ಅರ್ಜುನ್ (Arjun Tendulkar)ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕವನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಹಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದ ಅರ್ಜುನ್ - ಸಾನಿಯಾ ಜೋಡಿ ಈ ವರ್ಷದ ಮಾರ್ಚ್​ ತಿಂಗಳಲ್ಲಿ  ಹಸೆಮಣೆ ಏರುವುದು ದೃಢಪಟ್ಟಿದೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ವರ್ಗಾವಣೆಗೊಂಡ ಅರ್ಜುನ್, ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಸಾನಿಯಾ ಮುಂಬೈನ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು,ಇವರು ತೆಂಡೂಲ್ಕರ್ ಪರಿವಾರದ ಆಪ್ತ ವಲಯದವರು ಎಂದು ಹೇಳಲಾಗುತ್ತಿದೆ.
ಆಗಸ್ಟ್ 2025 ರಲ್ಲಿ ಈ ಜೋಡಿಯ ನಿಶ್ಚಿತಾರ್ತ ಸಮಾರಂಭವು ಕೇವಲ ಹತ್ತಿರದ ಕುಟುಂಬ ಸದಸ್ಯರ ಸಾಕ್ಷಿಯಲ್ಲಿ ಗೌಪ್ಯವಾಗಿಯೇ ನಡೆದಿತ್ತು. ರೆಡ್ಡಿಟ್​ನಲ್ಲಿ ಸಚಿನ್ ಸ್ವತಃ ತಮ್ಮ ಮಗನ ಮದುವೆ ಬಗ್ಗೆ ತಿಳಿಸಿದ್ದು, ಅಭಿಮಾನಿಯೊಬ್ಬರು ನಿಮ್ಮ ಮಗ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಸ್ಟರ್​ ಬ್ಲಾಸ್ಟರ್, ಹೌದು ಅವನ ನಿಶ್ಚಿತಾರ್ಥ ಈಗಾಗಲೇ ನೆರವೇರಿದ್ದು, ಇದೇ ವರ್ಷದ  ಮಾರ್ಚ್ 3 ರಿಂದ 5 ರ ವರೆಗೆ ವಿವಾಹ ಮಹೋತ್ಸವ ನಡೆಯಲಿದೆ ಎಂದು ಉತ್ತರಿಸಿದ್ದಾರೆ.
ವರದಿಗಳ ಪ್ರಕಾರ, ಅರ್ಜುನ್​- ಸಾವಿಯಾ ಅವರ ವಿವಾಹವು ಮುಂಬೈನಲ್ಲಿ ನಡೆಯಲಿದ್ದು, ಕುಟುಂಬ, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್ ಸಮುದಾಯದ ಆಯ್ದ ಸದಸ್ಯರನ್ನು ಒಳಗೊಂಡ ಅತಿಥಿಗಳ ಪಟ್ಟಿಯೊಂದಿಗೆ ಖಾಸಗಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಅರ್ಜುನ್​ ಕ್ರಿಕೆಟ್​ ವೃತ್ತಿಜೀವನ

ಕ್ರಿಕೆಟ್‌ನಲ್ಲಿ ಆರಂಭದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದ ಅರ್ಜುನ್, ಹೆಚ್ಚಿನ ಅವಕಾಶಗಳಿಗಾಗಿ 2022ರಲ್ಲಿ ಗೋವಾ ತಂಡಕ್ಕೆ ಸ್ಥಳಾಂತರಗೊಂಡರು. ರಣಜಿ ಟ್ರೋಫಿಯಲ್ಲಿ ಗೋವಾ ಪರ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ತಮ್ಮ ತಂದೆಯ ಸಾಧನೆಯನ್ನು ಪುನರಾವರ್ತಿಸಿದರು. ಇತ್ತೀಚಿನ 2024-25ರ ರಣಜಿ ಟ್ರೋಫಿಯಲ್ಲಿ  ಅರುಣಾಚಲ ಪ್ರದೇಶದ ವಿರುದ್ಧ 5 ವಿಕೆಟ್ ಕಬಳಿಸಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಐಪಿಎಲ್ ವೃತ್ತಿಜೀವನದಲ್ಲಿ ಅರ್ಜುನ್ 2021 ರಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು ಮತ್ತು ಏಪ್ರಿಲ್ 16, 2023 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪದಾರ್ಪಣೆ ಮಾಡಿದರು. ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ವಿಕೆಟ್ ಪಡೆಯುವ ಮೂಲಕ ತಮ್ಮ ಮೊದಲ ಐಪಿಎಲ್ ವಿಕೆಟ್ ದಾಖಲಿಸಿದರು. 2026 ರ ಐಪಿಎಲ್ ಸೀಸನ್‌ಗೂ ಮುನ್ನ ನಡೆದ ಮಹತ್ವದ ಬದಲಾವಣೆಯಲ್ಲಿ, ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ವರ್ಗಾಯಿಸಲಾಗಿದೆ. ಸದ್ಯ ಅವರು ಗೋವಾ ಪರ ದೇಶೀಯ ಪಂದ್ಯಗಳಲ್ಲಿ ಮತ್ತು ಲಕ್ನೋ ತಂಡದ ಪರ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದಾರೆ,(ಏಜನ್ಸೀಸ್).