Bhuvneshwar Kumar | ಪವರ್‌ಪ್ಲೇನಲ್ಲಿ ಭುವನೇಶ್ವರ್ ಕುಮಾರ್ ಹೊಸ ಇತಿಹಾಸ 
ಐಪಿಎಲ್

ಶಮಿ ದಾಖಲೆ ಸರಿಗಟ್ಟಿದ 'ಸ್ವಿಂಗ್ ಕಿಂಗ್'...ಪವರ್‌ಪ್ಲೇನಲ್ಲಿ ಭುವನೇಶ್ವರ್ ಕುಮಾರ್ ಹೊಸ ಇತಿಹಾಸ! | Bhuvneshwar Kumar

Bhuvneshwar Kumar: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಿರಿಯ ವೇಗಿ ಭುವನೇಶ್ವರ್ ಕುಮಾರ್, ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲೂ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದು, ಪವರ್‌ಪ್ಲೇ ಅವಧಿಯಲ್ಲಿ ಅಪಾಯಕಾರಿ ಸಾಯಿ ಸುದರ್ಶನ್​ರನ್ನು ಕೇವಲ 12 ರನ್‌ಗಳಿಗೆ ಔಟ್ ಮಾಡುವ ಮೂಲಕ ಆರ್‌ಸಿಬಿಗೆ ಆರಂಭಿಕ ಯಶಸ್ಸು ತಂದುಕೊಟ್ಟರು.
ಈ ಪ್ರಮುಖ ವಿಕೆಟ್‌ನೊಂದಿಗೆ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಐಪಿಎಲ್‌ನ ಒಂದೇ ಸೀಸನ್‌ನ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ, ಅವರು ಮೊಹಮ್ಮದ್ ಶಮಿ ಅವರೊಂದಿಗೆ ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಈ ಇಬ್ಬರೂ ಹಿರಿಯ ವೇಗಿಗಳು ಮೊದಲ ಆರು ಓವರ್‌ಗಳಲ್ಲಿ ತಲಾ 17 ವಿಕೆಟ್‌ಗಳನ್ನು ಕಬಳಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಪ್ರಸಕ್ತ ಸೀಸನ್‌ನ ಪವರ್‌ಪ್ಲೇನಲ್ಲಿ ಒಟ್ಟು 19 ವಿಕೆಟ್ ಪಡೆದಿರುವ ಗುಜರಾತ್ ಟೈಟನ್ಸ್‌ ತಂಡದ ಕಗಿಸೊ ರಬಾಡ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂದಿನ ಆರ್‌ಸಿಬಿ ಬ್ಯಾಟಿಂಗ್ ವೇಳೆ ರಬಾಡ ಈ ವಿಕೆಟ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

ಆರ್​ಸಿಬಿಗೆ 156 ರನ್​ ಟಾರ್ಗೆಟ್​!...

19ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್‌ಗಳ ಘಾತಕ ದಾಳಿಗೆ ಗುಜರಾತ್ ಟೈಟನ್ಸ್ (GT) ತತ್ತರಿಸಿದ್ದು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಹೈ-ವೋಲ್ಟೇಜ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ, ಆರ್‌ಸಿಬಿ ಶಿಸ್ತುಬದ್ಧ ಬೌಲಿಂಗ್‌ಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ. ಆರ್‌ಸಿಬಿ ಪರ ಮಾರಕ ದಾಳಿ ಸಂಘಟಿಸಿದ ಯುವ ಬೌಲರ್ ರಸಿಖ್ ಸಲಾಮ್ ದಾರ್ 3 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಉರುಳಿಸಿ ಜಿಟಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು(ಏಜೆನ್ಸೀಸ್​).