ಅದು ಅಷ್ಟು ಸುಲಭವಲ್ಲ... ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್! Vaibhav Sooryavanshi
- ಐಪಿಎಲ್ 2026ರಲ್ಲಿ ಅಬ್ಬರಿಸುತ್ತಿರುವ 15ರ ಹರೆಯದ ವೈಭವ್ ಸೂರ್ಯವಂಶಿ ಆಟಕ್ಕೆ ಎಬಿ ಡಿ ವಿಲಿಯರ್ಸ್ ಫಿದಾ
- ವೈಭವ್ ಕೇವಲ ಟಿ20ಗೆ ಸೀಮಿತವಾಗದೆ ಪರಿಪೂರ್ಣ ಆಟಗಾರನಾಗಲು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಕೂಡ ಆಡಲಿ ಎಂದು ಎಬಿಡಿ ಕಿವಿಮಾತು
- ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹಾಗೂ ಏಕದಿನದಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಹೆಗ್ಗಳಿಕೆ
- ಘಟಾನುಘಟಿ ಬೌಲರ್‌ಗಳನ್ನೇ ಬೆಚ್ಚಿಬೀಳಿಸಿರುವ ವೈಭವ್‌ರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಚರ್ಚೆ ಆರಂಭ
Vaibhav Sooryavanshi : ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅವರು ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಪ್ರತಿಮ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪ್ರಸ್ತುತ ಐಪಿಎಲ್ 2026ರ ಸೀಸನ್‌ನಲ್ಲಿ ವೈಭವ್ ಕೇವಲ 11 ಇನ್ನಿಂಗ್ಸ್‌ಗಳಲ್ಲಿ 236.55ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 440 ರನ್‌ಗಳನ್ನು ಸಿಡಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಈಗಾಗಗಲೇ ಎರಡು ಐಪಿಎಲ್ ಸೀಸನ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಂತಹ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ ರೀತಿ ಕಂಡು, ಇವರನ್ನು ಕೂಡಲೇ ಭಾರತೀಯ ಟಿ20 ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಚರ್ಚೆಗಳು ಜೋರಾಗಿವೆ.
ವೈಭವ್ ಅವರ ಈ ಅಸಾಧಾರಣ ಬ್ಯಾಟಿಂಗ್ ಕೌಶಲದ ಬಗ್ಗೆ ಮಾತನಾಡಿದ ಡಿ ವಿಲಿಯರ್ಸ್, ವೈಭವ್ ಅವರ ಪ್ರತಿಭೆ ನಂಬಲಾಗದಂತಿದೆ, ಆದರೆ ಅವರು ಕೇವಲ ಟಿ20 ಕ್ರಿಕೆಟ್‌ಗೆ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಂತಹ ಸುದೀರ್ಘ ಮಾದರಿಗಳಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡರೆ, ಅವರ ಆಟದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ ಎಂದು ಅವರು ಸಲಹೆ ನೀಡಿದ್ದಾರೆ. ವೈಭವ್ ಅವರ ಈ ಸ್ಫೋಟಕ ಆಟವು ಅವರನ್ನು ಐಪಿಎಲ್‌ನ ಸ್ಟಾರ್ ಆಟಗಾರನನ್ನಾಗಿ ಮಾಡಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಭರವಸೆಯ ಕಿರಣವಾಗಿ ಹೊರಹೊಮ್ಮುವ ಸೂಚನೆ ನೀಡಿದೆ ಎಂದು ಎಬಿಡಿ ಹೇಳಿದ್ದಾರೆ.
ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಭವಿಷ್ಯದ ಕುರಿತು ಅಮೂಲ್ಯ ಸಲಹೆ ನೀಡಿರುವ ಎಬಿ ಡಿ ವಿಲಿಯರ್ಸ್, ಅವರು ಕೇವಲ ಟಿ20 ಕ್ರಿಕೆಟ್‌ಗೆ ಸೀಮಿತವಾಗದೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲೂ ಆಡಬೇಕು ಎಂದು ಒತ್ತಾಯಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡುವುದರಿಂದ ಒಬ್ಬ ಆಟಗಾರ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಸುಲಭದ ಹಾದಿಯಲ್ಲ, ಅದು ಸವಾಲುಗಳಿಂದ ಕೂಡಿದ ಕಠಿಣ ಪಯಣ ಎಂದು ಹೇಳಿರುವ ಡಿ ವಿಲಿಯರ್ಸ್, ವೈಭವ್ ಅವರು ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೈಜ ಕ್ರಿಕೆಟ್ ಅನುಭವಕ್ಕಾಗಿ ಸೂರ್ಯವಂಶಿ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಆಡಬೇಕು ಎಂಬುದು ಡಿ ವಿಲಿಯರ್ಸ್ ಅವರ ಆಶಯವಾಗಿದೆ. ವೈಭವ್ ಈಗಾಗಲೇ ಹಲವು ಪ್ರಭಾವಶಾಲಿ ದಾಖಲೆಗಳನ್ನು ಬರೆದಿದ್ದು, ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (30) ಸಿಡಿಸಿದ ದಾಖಲೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಅಂಡರ್-19 ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (ಟೆಸ್ಟ್ ಮಾದರಿ) ಪ್ರಸ್ತುತ ರನ್ ಸರಾಸರಿ ಕಡಿಮೆ ಇದೆ. ಇದೇ ಕಾರಣಕ್ಕೆ ಡಿ ವಿಲಿಯರ್ಸ್ ಅವರು ಟೆಸ್ಟ್ ಕ್ರಿಕೆಟ್‌ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಟೆಸ್ಟ್ ಆಡುವುದರಿಂದ ಆಟದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಒಬ್ಬ ಪರಿಪೂರ್ಣ ಆಟಗಾರನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ 15 ವರ್ಷದ ಪೋರ ಭವಿಷ್ಯದಲ್ಲಿ ಭಾರತೀಯ ಟೆಸ್ಟ್ ತಂಡವನ್ನೂ ಪ್ರತಿನಿಧಿಸುವಂತಾಗಲಿ ಎಂದು ಅವರು ಆಶಿಸಿದ್ದಾರೆ, (ಏಜೆನ್ಸೀಸ್).