ಧರ್ಮಶಾಲಾದಲ್ಲಿ ಶೇ. 80 ರಷ್ಟು ಮಳೆ ಭೀತಿ: ಪಂದ್ಯ ವಾಶ್‌ಔಟ್ ಆದ್ರೆ ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್? RCB vs GT  
ಐಪಿಎಲ್

ಧರ್ಮಶಾಲಾದಲ್ಲಿ ಶೇ. 80 ರಷ್ಟು ಮಳೆ ಭೀತಿ: ಪಂದ್ಯ ವಾಶ್‌ಔಟ್ ಆದ್ರೆ ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್? RCB vs GT

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಪ್ಲೇಆಫ್ ಹಂತಕ್ಕೆ ತಲುಪಿದೆ
  • ಕ್ವಾಲಿಫೈಯರ್ 1ರ ಭಾಗವಾಗಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೆಣಸಾಡಲಿವೆ
  • ಎಲ್ಲೆಡೆ ಕುತೂಹಲ ಕೆರಳಿಸುತ್ತಿರುವ ಈ ಪಂದ್ಯ ಇಂದು ಸಂಜೆ 7.30 ಕ್ಕೆ ಧರ್ಮಶಾಲಾದಲ್ಲಿ ನಡೆಯಲಿದೆ
  • ಹವಾಮಾನ ಇಲಾಖೆಯ ಪ್ರಕಾರ ಇಂದು ಧರ್ಮಶಾಲಾದಲ್ಲಿ ಮಳೆಯಾಗುವ ಸಾಧ್ಯತೆ ಶೇ. 80 ರಷ್ಟು ಇದೆ
RCB vs GT : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಪ್ಲೇಆಫ್ ಹಂತಕ್ಕೆ ತಲುಪಿದೆ. ಕ್ವಾಲಿಫೈಯರ್ 1 ರ ಭಾಗವಾಗಿ, ಗುಜರಾತ್ ಟೈಟಾನ್ಸ್ ಫೈನಲ್ ಸ್ಥಾನಕ್ಕಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಎಲ್ಲೆಡೆ ಕುತೂಹಲ ಕೆರಳಿಸುತ್ತಿರುವ ಈ ಪಂದ್ಯ ಇಂದು (ಮೇ 26) ಸಂಜೆ 7.30 ಕ್ಕೆ ಧರ್ಮಶಾಲಾದಲ್ಲಿ ನಡೆಯಲಿದೆ.
ಅಂದಹಾಗೆ, ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಒಂದು ಕುತೂಹಲಕಾರಿ ಸುದ್ದಿ ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಇಂದು ಮಳೆಯಿಂದಾಗಿ ಪಂದ್ಯ ರದ್ದಾದರೆ, ಯಾವ ತಂಡ ಫೈನಲ್ ತಲುಪುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಇಂದು ಧರ್ಮಶಾಲಾದಲ್ಲಿ ಮಳೆಯಾಗುವ ಸಾಧ್ಯತೆ ಶೇ. 80 ರಷ್ಟು ಇದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯವು ಸಂಪೂರ್ಣವಾಗಿ ರದ್ದಾದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಉತ್ತಮ ನೆಟ್ ರನ್-ರೇಟ್ ಆಧಾರದ ಮೇಲೆ ಜಿಟಿಗಿಂತ ಮುಂದಿರುವ ಆರ್​ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫೈಯರ್ 1, ಎಲಿಮಿನೇಟರ್ ಅಥವಾ ಕ್ವಾಲಿಫೈಯರ್ 2 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಈ ನಿಯಮದ ಹಿನ್ನೆಲೆಯಲ್ಲಿ, ಪಂದ್ಯವು ಮಳೆಯಿಂದ ಸಂಪೂರ್ಣವಾಗಿ ರದ್ದಾದ ಸಂದರ್ಭದಲ್ಲಿ ಲೀಗ್ ಹಂತದ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಮಾತ್ರ ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಸುವರ್ಣಾವಕಾಶ ಸಿಗಲಿದೆ.
ಐಪಿಎಲ್ ನಿಯಮಾವಳಿಗಳ ಪ್ರಕಾರ, ಲೀಗ್ ಹಂತದ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ 'ಕ್ವಾಲಿಫೈಯರ್ 1' ಪಂದ್ಯಕ್ಕೆ ಅರ್ಹತೆ ಪಡೆಯುತ್ತವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ ತಲುಪಿದರೆ, ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು 'ಕ್ವಾಲಿಫೈಯರ್ 2' ರೂಪದಲ್ಲಿ ಮತ್ತೊಂದು ಸುವರ್ಣಾವಕಾಶ ಲಭ್ಯವಿರುತ್ತದೆ. ಇನ್ನು ಮಳೆಯಿಂದಾಗಿ ನಿಗದಿತ ಓವರ್‌ಗಳ ಪೂರ್ಣ ಪಂದ್ಯವನ್ನು ನಡೆಸುವುದು ಅಸಾಧ್ಯವಾದರೆ, ಪಂದ್ಯದ ಫಲಿತಾಂಶ ನಿರ್ಣಯಿಸಲು ಪೂರ್ಣ ಇನ್ನಿಂಗ್ಸ್‌ಗಳನ್ನು ಬದಿಗಿಟ್ಟು ಕೇವಲ ಒಂದೇ ಒಂದು 'ಸೂಪರ್ ಓವರ್' (Super Over) ನಡೆಸುವ ವಿಶೇಷ ಆಯ್ಕೆ ಹಾಗೂ ನಿಯಮ ಕೂಡ ಐಪಿಎಲ್‌ನಲ್ಲಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ತಲಾ 18 ಅಂಕಗಳೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ. ಈ ಎರಡೂ ಬಲಿಷ್ಠ ತಂಡಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ ಅದು ನೆಟ್ ರನ್ ರೇಟ್ ಮಾತ್ರ ಆಗಿದೆ. ಇನ್ನು ಪ್ರಸಕ್ತ ಸೀಸನ್‌ನಲ್ಲಿ ಇವೆರಡೂ ತಂಡಗಳು ಲೀಗ್​ ಹಂತದಲ್ಲಿ ಒಂದು ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ ವಿರುದ್ಧ ಜಿಟಿ ಮೇಲುಗೈ ಸಾಧಿಸಿದೆ. ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ 4 ಪಂದ್ಯ ಜಿಟಿ ಗೆದ್ದಿದ್ದರೆ, 4 ಪಂದ್ಯವನ್ನು ಆರ್​ಸಿಬಿ ಜಯಸಿದೆ. ಈ ಅಂಕಿ ಅಂಶ ಉಭಯ ತಂಡಗಳ ನಡುವಿನ ತೀವ್ರ ಪೈಪೋಟಿಯನ್ನು ಬಿಂಬಿಸುತ್ತಿದೆ.
ಸದ್ಯ ಆರ್​ಸಿಬಿ ಮತ್ತು ಜಿಟಿ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯ ಬೇಟೆಯಲ್ಲಿವೆ. ಕಳೆದ ಬಾರಿ ಟ್ರೋಫಿ ಗೆದ್ದಿದ್ದ ಆರ್​ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ತಮ್ಮ ಚೊಚ್ಚಲ ಸೀಸನ್ 2022 ರಲ್ಲೇ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಜಿಟಿ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಆಗಲು ಕಠಿಣ ಸವಾಲು ಒಡ್ಡುತ್ತಿರುವುದು ಇಂದಿನ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ, (ಏಜೆನ್ಸೀಸ್​).